ಬಳ್ಳಾರಿ,ಆ.12
ಬಾಲ್ಯವಿವಾಹದ ದುಷ್ಪರಿಣಾಮಗಳು ಮತ್ತು ಮಕ್ಕಳ ರಕ್ಷಣೆ, ಬಾಲ್ಯವಿವಾಹ ತಡೆ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಬಾಲ್ಯವಿವಾಹ ತಡೆಯುವಲ್ಲಿ ಇಲಾಖೆಗಳ ಜೊತೆ ಕೈ ಜೋಡಿಸಿ ವಿದ್ಯಾರ್ಥಿಗಳು ತಮ್ಮ ಬೆಂಬಲ ನೀಡಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆ ನಾಗಪ್ಪ ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಕೇಂದ್ರ, ಪೋಲಿಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ನಗರದ ಅಂದ್ರಾಳ್ ಪ್ರದೇಶದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ “ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಮತ್ತು ಮೂಡ ನಂಬಿಕೆಗಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ” ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿಮ್ಮ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದು ಕಂಡುಬoದರೆ ಮಕ್ಕಳ ಸಹಾಯವಾಣಿ ಸಂಖ್ಯೆ-1098 ಅಥವಾ ಪೋಲಿಸ್ ಸಹಾಯವಾಣಿ ಸಂಖ್ಯೆ-112 ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ರತ್ನಾದೇವಿ ಅವರು ಮಾತನಾಡಿ, ಬಾಲ್ಯವಿವಾಹ ಜಾಗೃತಿ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ತಿಳಿದುಕೊಂಡ ಬಾಲ್ಯವಿವಾಹ ತಡೆಗೆ ಮುಂದಾಗಬೇಕು. ತಮ್ಮ ಮನೆಯ ಸುತ್ತ-ಮುತ್ತಲಿನಲ್ಲಿ ಹಾಗೂ ತಮ್ಮ ಪೋಷಕರಿಗೆ ಈ ಕುರಿತು ಅರಿವು ಮೂಡಿಸಬೇಕು ಎಂದರು.
ಮಕ್ಕಳ ರಕ್ಷಣಾಧಿಕಾರಿ ಅಸಾಂಸ್ಥಿಕ ಸೇವೆಯ ಚನ್ನಬಸಪ್ಪ ಪಾಟೀಲ್ ಮಾತನಾಡಿ, ಮಕ್ಕಳು ಶಾಲೆಯಿಂದ ಹೊರಗುಳಿದ ಮಕ್ಕಳು ಬಾಲ್ಯವಿವಾಹ, ಬಾಲಕಾರ್ಮಿಕ, ಭಿಕ್ಷಾಟನೆ, ಕಳ್ಳಸಾಗಾಣೆಗೆ ಒಳಗಾಗುತ್ತಿರುವುದು ಕಂಡುಬರುತ್ತಿದ್ದು, ಅಂತಹ ಮಕ್ಕಳನ್ನು ಗುರುತಿಸಿ ಅವರ ಹಕ್ಕುಗಳು ಉಲ್ಲಂಘನೆಯಾಗದAತೆ ಅವರ ಪಾಲನೆ, ಪೋಷಣೆ, ರಕ್ಷಣೆ ನೀಡುವ ಹಾಗೂ ಪುನರ್ವಸತಿ ಕಲ್ಪಿಸುವುದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸಿಆರ್ಪಿ ಆರ್.ವಿಜಯಕುಮಾರ್ ಅವರು ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ ತಡೆ ಪ್ರತಿಜ್ಞಾವಿಧಿ ಭೋಧಿಸಿದರು.
ಈ ಸಂದರ್ಭದಲ್ಲಿ ಕಾನೂನು ಪರಿವೀಕ್ಷಣಾಧಿಕಾರಿ ಈಶ್ವರ ರಾವ್, ಪೊಲೀಸ್ ಇಲಾಖೆಯ ನವದುರ್ಗಿ ತಂಡದ ವಿದ್ಯಾಬಾರ್ಕಿ, ಅಂಗನವಾಡಿ ಮೇಲ್ವಿಚಾರಕಿ ನಂದಿನಿ, ಸರ್ಕಾರಿ ಪ್ರಾಥಮಿಕ ಶಾಲೆಯ ಗಾಯಿತ್ರಿ, ತಿಪ್ಪೇಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ನಿಲೋಫಿಯಾ, ಚಂದ್ರಕಳಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.