Ad image

ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಮನವಿ

Vijayanagara Vani
ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಮನವಿ
ಕೊಪ್ಪಳ ಆಗಸ್ಟ್ 12ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಪ್ಪಳ ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿಗಳು ಕೊಪ್ಪಳ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿ.ಒ.ಪಿ) ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ, ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದು ಸಂಪ್ರದಾಯವಾಗಿದ್ದು, ಇದರಿಂದಾಗಿ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಇವುಗಳ ಭೌತಿಕ ಹಾಗೂ ರಾಸಾಯನಿಕ ಗುಣಗಳು ಮಾರ್ಪಟ್ಟು ಪರಿಸರದ ಮೇಲೆ ದುಷ್ಟರಿಣಾಮ ಉಂಟಾಗುವುದಲ್ಲದೇ ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಅಲ್ಲದೇ ಸಾರ್ವಜನಿಕ ಆರೋಗ್ಯಕ್ಕೂ ದಕ್ಕೆ ಉಂಟಾಗುತ್ತದೆ. ಇದರನ್ವಯ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲ ಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ 2016ರ ಜುಲೈ 20ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಇನ್ಮುಂದೆ ರಾಜ್ಯದ ಯಾವುದೇ ಕೆರೆ ಮತ್ತು ಇತರೇ ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಹಕರಿಸಬೇಕು.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ತಯಾರಿಸಬಾರದೆಂದು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ 1974ರ ಪ್ರಕಾರ ಕಲಂ 33 (ಎ) ಅನ್ವಯ ರಾಜ್ಯದ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಐ.ಪಿ.ಸಿ ಸೆಕ್ಷನ್ 1860 ರ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು.
ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು: ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣರಹಿತ ಮಣ್ಣಿನ ಅಥವಾ ನೈಸರ್ಗಿಕ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ತದನಂತರ ಗೌರಿಗಣೇಶ ಮೂರ್ತಿಗಳನ್ನು ನಗರಸಭೆ, ಪುರಸಭೆ ವತಿಯಿಂದ ನಿಗದಿಪಡಿಸಿರುವ ಸ್ಥಳಗಳಲ್ಲಿ ಅಥವಾ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಚಾರಿ ವಾಹನದಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಬೇಕು. ಗೌರಿಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಹಸಿ ಕಸ (ಹೂ, ಹಣ್ಣು, ಬಾಳೆ ಕಂಬ, ಮಾವಿನ ತೋರಣ ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೇ, ಪ್ರತ್ಯೇಕಿಸಿ ನಗರಸಭೆ, ಪುರಸಭೆಯ ಕಸ ಸಂಗ್ರಹಣ ವಾಹನಕ್ಕೆ ನೀಡಬೇಕು.
ತೈಲ ಬಣ್ಣಗಳು ಅಪಾಯಕಾರಿ ರಾಸಾಯನಿಕಗಳಿಂದ ಕೂಡಿರುತ್ತದೆ. ಆದ್ದರಿಂದ ಜೇಡಿ ಮಣ್ಣಿನಿಂದ ಮಾಡಿದ ಹಾಗೂ ನೈಸರ್ಗಿಕ ಬಣ್ಣಗಳಿಂದ ಮಾಡಿರುವ ಗಣೇಶ ಮೂರ್ತಿಗಳನ್ನು ಪೂಜಿಸಬೇಕು. ಶಬ್ದ ಮಾಲಿನ್ಯ (ನಿರ್ಬಂಧ ಮತ್ತು ನಿಯಂತ್ರಣ) ನಿಯಮಗಳು 200 ರನ್ವಯ 2022ರ ಮೇ 10 ಹೊರಡಿಸಿರುವ ಸುತ್ತೋಲೆಯಂತೆ ನಿರ್ಬಂಧನೆಗಳಿಗೆ ಅನುಸಾರವಾಗಿ ಧ್ವನಿವರ್ಧಕ ಹಾಗೂ ಸಾರ್ವಜನಿಕ ಗಣೇಶ ಪೆಂಡಲ ಗಳಲ್ಲಿ ಬಳಸುವ ವಿದ್ಯುನ್ಮಾನ ಉಪಕರಣಗಳು ಮತ್ತು ಶಬ್ದ ಉಂಟುಮಾಡುವ ಉಪಕರಣಗಳನ್ನು ಬಳಸಲು ಪೊಲೀಸ ಇಲಾಖೆಯಿಂದ ಅನುಮತಿ ಪಡೆಯಬೇಕು. ಸಾರ್ವಜನಿಕವಾಗಿ ನಡೆಸುವ ಗಣೇಶ ಮೂರ್ತಿಯ ಉತ್ಸವದ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬೇಡಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಪ್ಪಳ ಪ್ರಾದೇಶಿಕ ಕಛೇರಿಯ ಪ್ರಕಟಣೆ ತಿಳಿಸಿದೆ.

Share This Article
error: Content is protected !!
";