Ad image

ಬಳ್ಳಾರಿ: ಮಣ್ಣಿನ ಗಣೇಶ ಮೂರ್ತಿ ತಯಾರಿಸಿ ಸಂಭ್ರಮಿಸಿದ ಶಾಲಾ-ಕಾಲೇಜು ಮಕ್ಕಳು ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ ಆಚರಿಸಿ, ಪರಿಸರ ಮಾಲಿನ್ಯ ತಡೆಗಟ್ಟಿ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ

Vijayanagara Vani
ಬಳ್ಳಾರಿ,ಆ.20
ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ನಿಂದ ತಯಾರಿಸಿದ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿಕಾರಕವಾಗಿದ್ದು, ಪ್ರತಿಯೊಬ್ಬರು ಪರಿಸರ ಸ್ನೇಹಿ ಮಣ್ಣಿನ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಲು ಕೈಜೋಡಿಸಿ, ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಅರಣ್ಯ ಇಲಾಖೆ ವತಿಯಿಂದ ನಗರದ ಬೆಳಗಲ್ ಕ್ರಾಸ್‌ನ ಅರಣ್ಯ ಇಲಾಖೆಯ ನರ್ಸರಿ ಪ್ರಕೃತಿ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪರಿಸರ ಸ್ನೇಹಿ ವೃಕ್ಷ ಗಣೇಶ ಮೂರ್ತಿ ಮಣ್ಣಿನಿಂದ ತಯಾರಿಸುವ ಕಾರ್ಯಗಾರವನ್ನು ಮಣ್ಣಿನ ಗಣೇಶನ ಮೂರ್ತಿ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಾಗಾರದಲ್ಲಿ ಮಾಡುವ ಮಣ್ಣಿನ ಮೂರ್ತಿಯ ಗಣೇಶನಲ್ಲಿ ವಿವಿಧ ಸಸ್ಯಗಳ ಬೀಜಗಳನ್ನು ಇಟ್ಟಿರುವುದರಿಂದ ಮನೆಯ ಮುಂದಿನ ಪಾಟ್(ಕುಂಡ)ನಲ್ಲಿ ಮೂರ್ತಿಗೆ ನೀರು ಹಾಕುವುದರ ಮೂಲಕ ವಿಸರ್ಜನೆ ಮಾಡುವುದರಿಂದ ಅದು ಸಸಿಯಾಗಿ ಬೆಳೆಯುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ಮಾತನಾಡಿ, ಪಿಒಪಿ. ಗಣೇಶ ಮೂರ್ತಿಯನ್ನು ನದಿ ಅಥವಾ ಬಾವಿಯಲ್ಲಿ ವಿಸರ್ಜನೆ ಮಾಡುವುದರಿಂದ ಅದರ ವಿಷಕಾರಕಗಳು ಪರಿಸರಕ್ಕೆ ಹಾನಿಕಾರಕ ಆಗುವುದಲ್ಲದೇ ನೀರಿನಲ್ಲಿ ಬೆರೆತು ಬೆಳೆದ ಬೆಳೆಯ ಮೂಲಕ ಸಹ ನಮ್ಮ ದೇಹ ಸೇರಿ ಅನಾರೋಗ್ಯ ಉಂಟುಮಾಡುತ್ತವೆ ಎಂದು ತಿಳಿಸಿದರು.
ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಅರಣ್ಯ ಇಲಾಖೆ ವತಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಣ್ಣಿನಿಂದ ಗಣೇಶ ಮೂರ್ತಿ ತಯಾರು ಮಾಡುವ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗವನ್ನು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹಂಪಿ ವಿಶ್ವವಿದ್ಯಾಲಯದ ಕಲಾ ವಿಭಾಗದ ಪಿಹೆಚ್‌ಡಿ ಸಂಶೋಧನಾರ್ಥಿಗಳು ಮಣ್ಣಿನ ಗಣೇಶ ಮೂರ್ತಿ ಮಾಡುವ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ವಲಯ ಅರಣ್ಯಾಧಿಕಾರಿ ಡಿ.ಕೆ.ಗಿರೀಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ನಗರದ ವಿವಿಧ 20 ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿ ಸುಮಾರು 2700 ಜನರು ಭಾಗವಹಿಸಿದ್ದರು.

Share This Article
error: Content is protected !!
";