ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳ ಉಳಿಯುವಿಕೆಯ ಕುರಿತು ಹೋರಾಟ ಆರಂಭವಾಗಿದ್ದು ಈಗಾಗಲೇ ಐವತ್ತು ಲಕ್ಷಕ್ಕೂ ಹೆಚ್ಚು ಜನರ ಸಹಿ ಸಂಗ್ರಹವಾಗಿದೆ. ಜನಸಂಖ್ಯೆಯ ಶೇಕಡ ಎಂಟರಷ್ಟು ಜನ ಸರ್ಕಾರಿ ಶಾಲೆಗಳನ್ನು ಇಚ್ಚಿಸಲು ಕಾರಣ ಅಲ್ಲಿ ದೊರೆಯಬಹುದಾದ ಗುಣಮಟ್ಟದ ಶಿಕ್ಷಣ, ಒತ್ತಡ ರಹಿತ ಕಲಿಕೆ, ನುರಿತ ಶಿಕ್ಷಕರು, ಆಟವಾಡಲು ದೊಡ್ಡ ಮೈದಾನಗಳು, ಸ್ವಚ್ಛಂದ ವಾತಾವರಣ ಮತ್ತು ಸಾಮಾಜಿಕ ಸಾಮರಸ್ಯವನ್ನು ಸಾರುವ ಎಲ್ಲಾ ಧರ್ಮ, ಜಾತಿ, ವರ್ಣ ಮತ್ತು ವರ್ಗಗಳ ಮಕ್ಕಳು ಒಂದೇ ಸೂರಿನಡಿಯಲ್ಲಿ ಕಲಿಯುವ ಸಮಾನ ಅವಕಾಶಗಳು ಇವೆ ಎಂಬುದಕ್ಕಾಗಿ.
ವಿಪರ್ಯಾಸವೆಂದರೆ ಸರ್ಕಾರಿ ಶಾಲೆಗಳನ್ನು ತಮ್ಮ ಕೈ ಮೀರಿ ಉನ್ನತಗೊಳಿಸುತ್ತಿರುವ, ಕಟ್ಟಡಗಳನ್ನು ಸುಸಜ್ಜಿತಗೊಳಿಸುವ, ಶಿಕ್ಷಕರಿಗೆ ದಿನಮಾನಕ್ಕೆ ತಕ್ಕಂತಹ ಹೊಸ ಮಾದರಿಯ ಶೈಕ್ಷಣಿಕ ತರಬೇತಿಗಳನ್ನು ನೀಡುತ್ತಾ ಸರ್ವಾಂಗೀಣ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರವು ಮತ್ತೊಂದೆಡೆ ಗಲ್ಲಿಗೊಂದರಂತೆ ಹುಟ್ಟುತ್ತಿರುವ ಖಾಸಗಿ ಶಾಲೆಗಳಿಗೆ ಅನುಮತಿ ನೀಡುತ್ತಿದೆ. ಗಾಳಿ ಬೆಳಕು ಇಲ್ಲದ ಪುಟ್ಟ ಕೋಳಿಗೂಡಿನಂತಹ ಮನೆಗಳಲ್ಲಿ, ಸಂದಿಗಳಲ್ಲಿ ಇಂತಹ ಶಾಲೆಗಳು ಆರಂಭವಾಗುತ್ತವೆ.
ಈ ಶಾಲೆಗಳಲ್ಲಿ ಗಾಳಿ, ಬೆಳಕು ದೊರೆಯದೆ ಹೋದರೂ ಒಳ್ಳೆಯ ಪೀಠೋಪಕರಣಗಳು, ಕಣ್ಸೆಳೆಯುವ ಆಟದ ಸಾಮಾನುಗಳು ಗೋಡೆ ಬರಹಗಳು ಮಕ್ಕಳನ್ನು ಮತ್ತು ಪಾಲಕರನ್ನು ಆಕರ್ಷಿಸುತ್ತವೆ. ವೈವಿಧ್ಯಮಯ ಶಿಕ್ಷಣ ಪದ್ಧತಿಗಳನ್ನು ಹೊಂದಿದ್ದೇವೆ ಎಂಬ ಶರಾಗಳ ಮೂಲಕ ಪಾಲಕರನ್ನು ಸೆಳೆಯುವ ಇಂತಹ ಶಿಕ್ಷಣ ಸಂಸ್ಥೆಗಳು ಮಳೆ ಬಂದಾಗ ಹುಟ್ಟುವ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿವೆ.
ಎಲ್ಲ ಶಾಲೆಗಳು ಹೀಗೆಯೇ ಇವೆ ಎಂದು ಹೇಳಲಾಗದಿದ್ದರೂ ನೂರಕ್ಕೆ 90ರಷ್ಟು ಶಾಲೆಗಳು ಪ್ರಾರಂಭದ ಕೆಲವು ವರ್ಷ ಹೀಗೆಯೇ ಇರುತ್ತವೆ. ಇನ್ನು ಅತ್ಯಂತ ಕಡಿಮೆ ಸಂಬಳವನ್ನು ಪಡೆದು ಇಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಕ್ಷಮತೆಯ ದೃಷ್ಟಿಯಲ್ಲಿ ಪರಿಪೂರ್ಣತೆಯನ್ನು ಹೊಂದಿರುವುದಿಲ್ಲ ಎಂದು ಹೇಳಿದರೆ ಅದು ತಪ್ಪು ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ.
ಕೇವಲ ಓರ್ವ ವಿದ್ಯಾರ್ಥಿಗಾಗಿ ಸರಕಾರ ಶಾಲೆಯನ್ನು ನಡೆಸುತ್ತದೆ. ಒಬ್ಬಿಬ್ಬ ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ. ಲಕ್ಷಾಂತರ ಹಣವನ್ನು ಖರ್ಚು ಮಾಡಿ ಶಿಕ್ಷಕರನ್ನು ನಿಯಮಿಸುತ್ತದೆ, ಆದರೆ ಈ ಧೈರ್ಯ ಪಾಲಕರಿಂದಲೇ ಹಣ ಪಡೆದು ಶಾಲೆಯನ್ನು ನಡೆಸುವ ಖಾಸಗಿ ಶಾಲೆಗಳಿಗೆ ಇದೆಯೇ? ಎಂಬುದನ್ನು ನಾವು ಪರೀಕ್ಷಿಸದೆಯೇ ಹೇಳಬಹುದು.
ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಮಾಲೀಕರಿಗೂ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಅನಿವಾರ್ಯತೆಗೆ ಒಳಗಾಗಿ ಈ ವೃತ್ತಿಗೆ ಬಂದ ಶಿಕ್ಷಕರು ಹೀಗೆ ಇಬ್ಬರಿಗೂ ಇದು ಅನಿವಾರ್ಯದ ತುತ್ತಾಗಿರುವುದರಿಂದ ಇಲ್ಲಿ ಒಳಗಿನ ಹೂರಣಕ್ಕಿಂತ ಹೊರಗಿನ ಆಡಂಬರಗಳೇ ಹೆಚ್ಚು. ಆಟವಾಡಲು ಮೈದಾನಗಳಿಲ್ಲದ, ಪಾಲಕರ ಅಪೇಕ್ಷೆಯ ಮೇರೆಗೆ ಹೆಚ್ಚಿಚ್ಚು ಹೋಂವರ್ಕ್ ಗಳನ್ನು ನೀಡುವ ಅವೈಜ್ಞಾನಿಕ ಮಾದರಿಯ ಶಿಕ್ಷಣವನ್ನು ಅನಿವಾರ್ಯವಾಗಿ ಮಕ್ಕಳಿಗೆ ತುರುಕುವ ಖಾಸಗಿ ಶಾಲೆಗಳವರ ರೀತಿ ನೀತಿಗಳು ನೋಡಿದರೆ ಅವರು ಕೂಡ ಪರಿಸ್ಥಿತಿಯ ಶಿಶುಗಳೇ ಎಂದು ಹೇಳಬಹುದು. ಹಾಕಿದ ಬಂಡವಾಳಕ್ಕೆ ದುಪ್ಪಟ್ಟು ಹಣವನ್ನು ಮರಳಿ ಪಡೆಯುವ ವ್ಯಾಪಾರಿ ಮನೋಭಾವ ಈ ಖಾಸಗಿ ಶಾಲೆಗಳಲ್ಲಿ ನಾವು ಕಾಣಬಹುದು.
ಇನ್ನು ಸರ್ಕಾರಿ ಶಾಲೆಗಳಲ್ಲಿ ಸರ್ವ ಶಿಕ್ಷಣ ಅಭಿಯಾನ, ಸಾಕ್ಷರತಾ ಅಭಿಯಾನಗಳ ಮೂಲಕ ವಿದ್ಯಾರ್ಥಿಗಳನ್ನು ಕೂಲಿ ಕೆಲಸಗಳಿಂದ, ಹೊಲಗಳಿಂದ, ಕಾರ್ಖಾನೆಗಳಿಂದ ಹೊರತರಲಾಗಿದೆ. ಅವರ ಹಸಿವನ್ನು ಇಂಗಿಸುವ ದೃಷ್ಟಿಯಿಂದ ಪ್ರತಿದಿನ ಮಧ್ಯಾಹ್ನದ ಬಿಸಿಯೂಟವನ್ನು ಕೂಡ ನೀಡಲಾಗುತ್ತಿದೆ. ಪೋಷಕ ಆಹಾರಗಳಾಗಿ ಮೊಟ್ಟೆ, ಬಾಳೆಹಣ್ಣು ಮತ್ತು ಹಾಲನ್ನು ಕೂಡ ನೀಡಲಾಗುತ್ತಿದೆ. ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಿದ್ದರೂ ಕೂಡ ಸಾಮಾಜಿಕ ಮೇಲರಿಮೆ ಮತ್ತು ಕೀಳರಿಮೆಗಳು ನಮ್ಮ ಜನರನ್ನು ಕಾಡುತ್ತಿದ್ದು ಅರೆ! ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹಾಕಬೇಕೆ?ಎಂಬ ಭಾವ ಖುದ್ದು ಸರ್ಕಾರಿ ನೌಕರರಿಂದ ಹಿಡಿದು ಎಲ್ಲ ವರ್ಗದ ಜನರಲ್ಲೂ ಇದೆ.
ಮತ್ತೆ ಕೆಲವು ಮನೆಗಳಲ್ಲಿ ಮಕ್ಕಳನ್ನು ದಂಡನೆಗೆ ಒಳಪಡಿಸುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗೆ ಹಾಕುತ್ತೇನೆ ನೋಡು! ಎಂದು ಹೆದರಿಸುವ ಪಾಲಕರು ಕೂಡ ಇದ್ದಾರೆ, ಆದರೆ ಸಮಾಜದಲ್ಲಿ ಕಾರ್ಯನಿರ್ವಹಿಸುವ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ, ಬುದ್ಧಿಜೀವಿಗಳ ಬಹುತೇಕ ಜನಸಾಮಾನ್ಯರ ಅಭಿಪ್ರಾಯವನ್ನು ನೋಡಿದರೆ ಖಾಸಗಿ ಶಾಲೆಯ ಮಕ್ಕಳ ಉಡುಗೆ ತೊಡುಗೆ, ಸಂಪನ್ಮೂಲಗಳ ಬಳಕೆ, ದತ್ತ ಕಾರ್ಯಗಳು, ಶಾಲಾ ಪ್ರವಾಸಗಳು, ಆಟೋಟದ ತರಬೇತಿಗಳು ಚೆನ್ನಾಗಿ ಇರಬಹುದು ಆದರೆ ಸರ್ಕಾರಿ ಶಾಲೆಗಳ ಮಕ್ಕಳ ಧೈರ್ಯ, ಆತ್ಮವಿಶ್ವಾಸ, ಪ್ರತಿಭೆ ಮತ್ತು ವಾಗ್ಜರಿಗಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗೆ ಕಡಿಮೆ ಇಲ್ಲ ಎಂಬುದನ್ನು ಸ್ವತಹ ಶಿಕ್ಷಣ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಆದರೆ ಈ ಮಾತನ್ನು ಖಾಸಗಿ ಶಾಲೆಗಳ ಪಾಲಕರ ಅಹಮಿಕೆಯು ಸುತಾರಂ ಒಪ್ಪಿಕೊಳ್ಳಲು ಬಿಡುವುದಿಲ್ಲ..
ಕೇವಲ ಎರಡು-ಮೂರು ದಶಕಗಳ ಹಿಂದೆ ಸರಕಾರಿ ಶಾಲೆ, ಕಾಲೇಜುಗಳಲ್ಲಿ ಓದಿದ, ಪದವಿ ಪಡೆದ, ನೌಕರಿಗೆ ಅರ್ಹತೆ ಗಿಟ್ಟಿಸಿ ಐದು ಅಂಕಿಯ ಸಂಬಳವನ್ನು ಪಡೆಯುತ್ತಿರುವ ಲಕ್ಷಾಂತರ ಜನರು ಇರುವಾಗಲೂ ಕೂಡ ಸರ್ಕಾರಿ ಶಾಲೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿವೆ.
ಇಂದಿಗೂ ಕೂಡ ಅದೇ ಸರ್ಕಾರಿ ಶಾಲೆಯಲ್ಲಿ ಓದಿರುವ ಅದೇ ಸರ್ಕಾರಿ ನೌಕರಿಯಲ್ಲಿ ಬದುಕನ್ನು ನಡೆಸುತ್ತಿರುವ ಲಕ್ಷಾಂತರ ಜನರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಮಾತ್ರ ಕಳುಹಿಸುತ್ತಿಲ್ಲ.
ಸರ್ಕಾರಿ ಶಾಲೆ ವರ್ಸಸ್ ಖಾಸಗಿ ಶಾಲೆ ಎಂದು ವಿಭಾಗಿಸಿ ನೋಡಿದಾಗ ಅತಿ ಹೆಚ್ಚು ಆರ್ಥಿಕ ಆದಾಯವನ್ನು ಹೊಂದಿರುವವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂದು ಖಾಸಗಿ ಶಾಲೆಗೆ ಹಾಕುತ್ತಾರೆ. ಅಲ್ಲಿ ತಮ್ಮದೇ ಆರ್ಥಿಕ ಸ್ಥಿತಿಗತಿಗಳಿರುವ ಸ್ನೇಹಿತರೊಂದಿಗೆ ಬೆರೆಯುವ ಮಕ್ಕಳಿಗೆ ಸಮಾಜದ ವಿವಿಧ ವರ್ಗಗಳ ವಿವಿಧ ಜನಾಂಗಗಳ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳ ಅರಿವು ಕೂಡ ಉಂಟಾಗುವುದಿಲ್ಲ. ಅವರು ತಮ್ಮದೇ ಸ್ಥರದ ಜನರೊಂದಿಗೆ ಮಾತ್ರ ಬೆರೆಯುತ್ತಾ ತಮ್ಮದೇ ಆದ ಗುಂಪನ್ನು ಸೃಷ್ಟಿಸಿಕೊಳ್ಳುತ್ತಾರೆ. ಇದೀಗ ಎಲ್ಲ ಶಾಲೆಗಳಲ್ಲಿಯೂ ಕೂಡ ಇಂತಹ ವರ್ಗೀಕೃತ ವ್ಯವಸ್ಥೆ, ಅಗೋಚರವಾಗಿ ಹರಡಿಕೊಂಡಿದೆ. ಲಕ್ಷಾಂತರ ರೂ ಹಣವನ್ನು ನೀಡಿಖಾಸಗಿ ಶಾಲೆಗೆ ಸೇರಿಸಿ ಅಲ್ಲಿ ಶೈಕ್ಷಣಿಕ ಗುಣಮಟ್ಟ ತೃಪ್ತಿಕರವಾಗಿಲ್ಲ ಎಂದು ಗೊಣಗುವ ಸಾಕಷ್ಟು ಜನರನ್ನು ನಾವು ಕಾಣಬಹುದು
ಗ್ರಾಮೀಣ ಭಾಗಗಳಲ್ಲಿ ಇನ್ನೂ ಸರ್ಕಾರಿ ಶಾಲೆಗಳು ಉಸಿರಾಡುತ್ತಿರಲು ಕಾರಣ ಅಲ್ಲಿ ಖಾಸಗಿ ಶಾಲೆಗಳನ್ನು ನಡೆಸುವವರು ಇಲ್ಲದೆ ಇರುವುದು ಮತ್ತು ಉಳ್ಳವರು ಪಕ್ಕದ ದೊಡ್ಡ ಊರಿನ ಖಾಸಗಿ ಶಾಲೆಯ ಬಸ್ಸಿನಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದು ಅದ್ಯಾವ ಅನಾನುಕೂಲತೆಗಳು ಇಲ್ಲದವರು ಮಾತ್ರ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ.
ಕರ್ನಾಟಕದ ಕರಾವಳಿ ಭಾಗದ ಬಹುತೇಕ ಎಲ್ಲ ಜನರ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢ ಹಂತದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿಯೇ ಪಡೆಯುತ್ತಾರೆ, ಹಾಗಾದರೆ ಅಲ್ಲಿ ಖಾಸಗಿ ಶಾಲೆಗಳು ಇಲ್ಲವೇ? ಎಂದರೆ.. ಖಂಡಿತವಾಗಿಯೂ ಇವೆ ಆದರೆ ಬೆರಳೆಣಿಕೆಯಷ್ಟು ಮಾತ್ರ. ಅಲ್ಲಿನ ವಸತಿ ಶಾಲೆಗಳಲ್ಲಿ ಇರುವುದು ಕೂಡ ಬಹುತೇಕ ಹೊರಗಿನ ವಿದ್ಯಾರ್ಥಿಗಳು ಮಾತ್ರ.
ನಮ್ಮ ಸರ್ಕಾರಿ ಶಾಲೆಗಳಲ್ಲಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ವಾತಾವರಣವಿದ್ದು ಮಕ್ಕಳು ಭಯಮುಕ್ತರಾಗಿ, ಒತ್ತಡರಹಿತರಾಗಿ ತಮ್ಮ ನೈಸರ್ಗಿಕ ಸ್ವಭಾವದೊಂದಿಗೆ ಬೆಳೆಯುತ್ತಾರೆ. ಮಕ್ಕಳು ತಮ್ಮ ಆಸಕ್ತಿಯ ಆಟೋಟದ ಸ್ಪರ್ಧೆಗಳಲ್ಲಿ ಭಾಷಣ, ಪ್ರಬಂಧ, ನಿಬಂಧ ಸ್ಪರ್ಧೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿಭಾ ಕಾರಂಜಿಯಂತಹ ಪ್ರತಿಭಾನ್ವೇಷಣೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆಯುತ್ತಾರೆ. ಹೊಸ ಹೊಸ ವಿಷಯಗಳ ಅರಿವನ್ನು ಮೂಡಿಸಿಕೊಳ್ಳುತ್ತಾರೆ. ವೈವಿಧ್ಯಮಯ ಜನ ಜೀವನದ ಪರಿಚಯವನ್ನು ಹೊಂದಿ ಸಾಂಘಿಕ ಜೀವನವನ್ನು ಕಲಿಯುತ್ತಾರೆ.
ಏಕ ಪಠ್ಯ ಗ್ರಾಹಿ ಮಕ್ಕಳ ಜೊತೆ ಜೊತೆಗೆ ನಿಧಾನವಾಗಿ ಕಲಿಯುವ ಮಕ್ಕಳನ್ನು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ತರಬೇತಿ ನೀಡಿ ಪೂರಕ ವಾತಾವರಣವನ್ನು ಕೊಡ ಮಾಡಿ ಕಲಿಕಾ ಸಾಮರಸ್ಯವನ್ನು ಮೂಡಿಸುತ್ತಾರೆ.
ಇದೀಗ ಸರ್ಕಾರಿ ಶಾಲೆಯ ಪಠ್ಯಪುಸ್ತಕಗಳು ಕ್ಯೂಆರ್ ಕೋಡ್ ಗಳನ್ನು ಹೊಂದಿದ್ದು ಸ್ವಯಂ ಕಲಿಕೆಗೆ ಅನುವಾಗುವಂತಹ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಓ ಎಚ್ ಪಿ (ಓವರ್ ಹೆಡ್ ಪ್ರೊಜೆಕ್ಟರ್) ಗಳ ಮೂಲಕ ಮಕ್ಕಳಿಗೆ ಹೊಂದಿದ್ದು ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತಹ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ.
ನಲಿ ಕಲಿ, ನೋಡಿ ಕಲಿ ಮಾಡಿ ಕಲಿ, ಪಪೆಟ್ ಶೋ, ಪರಿಸರ ಸಮೀಕ್ಷೆಯ ಯೋಜನಾ ಕಾರ್ಯಗಳು, ದತ್ತ ಚಟುವಟಿಕೆಗಳು, ಸಾಧಕರೊಂದಿಗೆ ಸಂವಾದ, ಶೈಕ್ಷಣಿಕ ಪ್ರವಾಸ, ಮಹಾನ್ ವ್ಯಕ್ತಿಗಳ ಜಯಂತಿಗಳು, ವೈವಿಧ್ಯಮಯ ಕಲಿಕಾ ತರಬೇತಿಗಳು ಮಕ್ಕಳ ಜ್ಞಾನವಿಕಾಸಕ್ಕೆ ಸಹಕಾರಿಯಾಗುವಂತಹ ನಿಟ್ಟಿನಲ್ಲಿ ಅಳವಡಿಸಲ್ಪಟ್ಟಿವೆ.
ಈ ಕುರಿತು ಮಕ್ಕಳಿಗೆ ಕಲಿಸಲು ಅನುವಾಗುವಂತೆ ಕಾಲಕಾಲಕ್ಕೆ ಶಿಕ್ಷಕರಿಗೆ ಕೂಡ ಪೂರಕ ತರಬೇತಿಯನ್ನು ನೀಡಲಾಗುತ್ತದೆ. ವಿಕಲಚೇತನ ಮಕ್ಕಳಿಗೆ ವಿಶೇಷ ತರಬೇತಿ ನೀಡಲು ಶಿಕ್ಷಕರಿಗೆ ಸಮನ್ವಯ ಶಿಕ್ಷಣ ತರಬೇತಿ ನೀಡಲಾಗುತ್ತದೆ.
‘ಓದು ಕರ್ನಾಟಕ’ ಯೋಜನೆಯಡಿಯಲ್ಲಿ ಪ್ರತಿ ಮಗು ಕನ್ನಡ ಮತ್ತು ಗಣಿತ ವಿಷಯದಲ್ಲಿ ಪ್ರಗತಿಯನ್ನು ಸಾಧಿಸಲು ಅವಕಾಶ ಮಾಡಿಕೊಡುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಷ್ಯವೇತನವನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೂಡ ತರಬೇತಿ ನೀಡಲಾಗುತ್ತಿದೆ.
ಸರ್ವಜ್ಞನ ವಚನವನ್ನು ಅನುಕರಿಸಿ ಹೇಳುವುದಾದರೆ
ಬೆಚ್ಚನಾ ಶಾಲೆಯಿರಲು ನೆಚ್ಚಿನ ಶಿಕ್ಷಕರಿರಲು
ಹಸಿವ ತಣಿಸಲು ಬಿಸಿಯೂಟವಿರಲು
ಓದಿ ಉದ್ಧಾರವಾಗದಿರುವವರು ಇಲ್ಲುಂಟೆ
ಎಂಬ ಮಾತು ನಿಜವಾಗಿದ್ದು ಇದೀಗ ಸಮುದಾಯದ
ಜನತೆಯು ಸರ್ಕಾರಿ ಶಾಲೆಗಳ ಮತ್ತು ಶಿಕ್ಷಕರ ಜೊತೆಗೆ ಕೈಗೂಡಿಸಬೇಕಾಗಿದೆ. ‘ನನ್ನ ಶಾಲೆ ನನ್ನ ಜವಾಬ್ದಾರಿ’ ಎಂದು ಆ ಶಾಲೆಗಳಲ್ಲಿ ಈ ಹಿಂದೆ ಕಲಿತ ವಿದ್ಯಾರ್ಥಿಗಳು ಪಣ ತೊಡಬೇಕಾಗಿದೆ. ತಾವು ಕಲಿತ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ಮರು ನಿರ್ಮಿಸುವಲ್ಲಿ, ಗೋಡೆಗಳನ್ನು ಅಂದಗೊಳಿಸುವ ನಿಟ್ಟಿನಲ್ಲಿ ಬಣ್ಣಬಣ್ಣದ ಚಿತ್ತಾರಗಳನ್ನು ಮೂಡಿಸುವಲ್ಲಿ, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಅತ್ಯವಶ್ಯಕವಾದ ಪ್ರಾಯೋಗಿಕ ಚಿತ್ರಗಳನ್ನು ರಚಿಸುವಲ್ಲಿ ಸಹಾಯ ಹಸ್ತವನ್ನು ಚಾಚಬೇಕು. ಒಳ್ಳೆಯ ಕಲಿಕಾ ಸಾಮಗ್ರಿಗಳನ್ನು, ಆಟದ ಸಲಕರಣೆಗಳನ್ನು, ಕುಳಿತುಕೊಳ್ಳಲು ಅತ್ಯವಶ್ಯಕವಾದ ಡೆಸ್ಕುಗಳನ್ನು ಕೊಡ ಮಾಡಬೇಕಾಗಿದೆ. ಆಂತರಿಕವಾಗಿ ಸಂಪನ್ನವಾಗಿರುವ ಸರಕಾರಿ ಶಾಲೆಗಳ ಬಾಹ್ಯ ಅಲಂಕಾರವನ್ನು ಬದಲಿಸುವ ಮೂಲಕ ಮತ್ತಷ್ಟು ಜನ ಪಾಲಕರನ್ನು ಮತ್ತು ಮಕ್ಕಳನ್ನು ಶಾಲೆಗಳತ್ತ ಕರೆ ತರಬೇಕು. ಇದು ಸರಕಾರಿ ಶಾಲೆಗಳ ಉಳಿಯುವಿಕೆಗೆ ನಾವು ಸಲ್ಲಿಸುವ ಅಳಿಲು ಸೇವೆಯಾಗಬಲ್ಲದು.
ಇಂದಿಗೂ ಕೂಡ ಸರ್ಕಾರಿ ಶಾಲೆಗಳು ಸಂಪೂರ್ಣ ಉಚಿತ ಶಿಕ್ಷಣದ ಜೊತೆ ಜೊತೆಗೆ ಮಕ್ಕಳಿಗೆ ಆಹಾರವನ್ನು ನೀಡುತ್ತಿರುವ ಕಾರಣ ಶಿಕ್ಷಣ ಎಂಬುದು ಸರ್ವರಿಗೂ ಸಲ್ಲುತ್ತಿದೆ ಇಲ್ಲದೆ ಹೋದರೆ ಬಡವರ ಮಕ್ಕಳ ಪಾಲಿಗೆ ಶಿಕ್ಷಣ ಗಗನ ಕುಸುಮವಾಗಿ ಇರುತ್ತಿತ್ತು. ಸರ್ಕಾರಿ ಶಾಲೆಗಳ ಅಳಿವು ಉಳಿವಿನಲ್ಲಿಯೇ ನಮ್ಮ ಗ್ರಾಮೀಣ ಭಾರತದ ಭವಿಷ್ಯ ಅಡಗಿದೆ ಎಂಬ ಸತ್ಯವನ್ನು ಅರಿತು ಸರ್ಕಾರಿ ಶಾಲೆಗಳ ಉಳಿವಿಗಾಗಿ ಪಣ ತೊಡೋಣ.
ಏನಂತೀರಾ ಸ್ನೇಹಿತರೇ?
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್