ಸತತ ಪರಿಶ್ರಮ,ಏಕಾಗ್ರತೆ, ಮಕ್ಕಳ ಮೇಲಿನ ಕಾಳಜಿ,ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾಲಯ್ಯ ಕ್ಯಾಂಪ್ ಸರ್ಕಾರಿ ಶಾಲೆಯ ಶಿಕ್ಷಕ ಮಾಹಾಂತೇಶ ಮೇಟಿ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ.ವಜ್ರ ಎಲ್ಲಿದ್ದರೂ ತನ್ನ ಪ್ರಖರತೆಯಿಂದ ಹೊಳೆಯುತ್ತದೆ ಎಂಬಂತೆ ಸಣ್ಣ ಹಳ್ಳಿಯ ಶಿಕ್ಷಕ ಮಾಹಾಂತೇಶ ಮೇಟಿಯ ಸಾಧನೆ ರಾಜ್ಯ ಸರ್ಕಾರಕ್ಕೂ ಮುಟ್ಟಿದೆ.
ಸದ್ಯ ಇವರ ಸಾಧನೆಗೆ ಸರ್ಕಾರದಿಂದ 2025ರ “ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ” ಘೋಷಣೆ ಮಾಡಿದ್ದು ಖುಷಿಯ ವಿಚಾರ.
ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಜನಗಳ ಮಧ್ಯೆ ಇಲ್ಲೊಂದು ಶಾಲೆ, ಮಕ್ಕಳಿಗೆ ಉತ್ತಮ ಕಲಿಕಾ ಪರಿಸರ ನಿರ್ಮಿಸುವ ಮೂಲಕ
ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಶಾಲೆ ಇರುವುದು ಕುರುಗೋಡು ತಾಲ್ಲೂಕಿನಿಂದ ಸುಮಾರು 7 ಕಿ.ಮಿ ದೂರದ ಬೈಲೂರು ಸಮೀಪದ ಬಾಲಯ್ಯ ಕ್ಯಾಂಪ್ ನಲ್ಲಿ
ಈ ಶಾಲೆ 2008 ರಲ್ಲಿ ಪ್ರಾರಂಭವಾಯಿತು.ಆರಂಭದಲ್ಲಿ ಈ ಶಾಲೆಗೆ ಯಾವುದೇ ಸವಲತ್ತುಗಳಿರಲಿಲ್ಲ.ಕುಂಟುತ್ತ ಸಾಗುತ್ತಿದ್ದ ಈ ಶಾಲೆಗೆ 2010 ರಲ್ಲಿ ಶಿಕ್ಷಕರಾಗಿ ಮಾಹಾಂತೇಶ್ ಮೇಟಿಯವರು ಈ ಶಾಲೆಯನ್ನು ಆಯ್ಕೆ ಮಾಡಿಕೊಂಡು ತಮ್ಮ ವೃತ್ತಿ ಜೀವನವನ್ನು ಆರಂಭಿಸುತ್ತಾರೆ.ಅಲ್ಲಿಂದ ಶಾಲೆಯ ವಾತಾವರಣವೇ ಬದಲಾಗುತ್ತದೆ.ಮೂಲತಃ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನವರಾದ ಮಾಹಾಂತೇಶ ಮೇಟಿಯವರು ಕಳೆದ 15 ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
*ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಣ*
2010 ರಲ್ಲಿ 24 ಮಕ್ಕಳಿದ್ದ ಈ ಶಾಲೆ ಈಗ 1 ರಿಂದ 5ನೇ ತರಗತಿಯವರೆಗೆ ಒಟ್ಟು 31 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಹಿಂದೆ ಒಂದೇ ಕೊಠಡಿಗೆ ಸೀಮಿತವಾಗಿದ್ದ ಶಾಲೆಗೆ ಕಾಯಕಲ್ಪ ನೀಡಿದ ಮಾಹಾಂತೇಶ ಮೇಟಿಯವರು ಈಗ
ಎರಡು ಕೊಠಡಿ ಒಂದು ಮುಖ್ಯ ಶಿಕ್ಷಕರ ಕೊಠಡಿ ಸೇರಿದಂತೆ ಇದರಲ್ಲಿಯೇ ಸ್ಮಾಟ್ ಕ್ಲಾಸ್,ಕಲಿಕೋಪಕರಣಗಳ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.ಈ ಶಾಲೆಯಲ್ಲಿ ಕಲಿತ ಹೊನ್ನೂರಸ್ವಾಮಿ ಎಂಬ ವಿದ್ಯಾರ್ಥಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದು , ಇದು ಈ ಶಾಲೆಯಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣದ ಉದಾಹರಣೆಯಾಗಿದೆ. ಇಲ್ಲಿನ ಶಿಕ್ಷಕರು ಕಲಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ.
*ಕೂಲಿಕಾರರ ಮಕ್ಕಳೇ ಹೆಚ್ಚು*
ಅತ್ಯಂತ ಹಿಂದುಳಿದ ಸೌಲಭ್ಯ ವಂಚಿತ ಸಣ್ಣ ಗ್ರಾಮ. ಈ ಬಾಲಯ್ಯಕ್ಯಾಂಪ್ ನಲ್ಲಿ ರೈತರು,ಕೂಲಿ ಕಾರ್ಮಿಕರೇ ಹೆಚ್ಚು ಬದುಕು ಕಟ್ಟಿಕೊಂಡಿದ್ದಾರೆ.
ಈ ಕ್ಯಾಂಪ್ ನಲ್ಲಿ 40 ರಿಂದ 50 ಮನೆಗಳಿದ್ದು , ಸುಮಾರು 80 ರಿಂದ 100 ಜನ ಇಲ್ಲಿ ವಾಸಿಸುತ್ತಿದ್ದಾರೆ.
ಬಹುತೇಕ ಎಸ್.ಟಿ (ಪರಿಶಿಷ್ಟ ಪಂಗಡ)ವರ್ಗದ ಮಕ್ಕಳೇ ಇದ್ದು ,ಇವರಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸರಕಾರ ಹಾಗೂ ಇಲಾಖೆಯ ಎಲ್ಲ ಪ್ರೋತ್ಸಾಹ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನೀಡುವುದರೊಂದಿಗೆ ಶಾಲೆಯ ಶಿಕ್ಷಕರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
*ಕಲಿಕೆಗೆ ಪೂರಕ ವಾತಾವರಣ*
ಈ ಶಾಲೆಯ ಶಿಕ್ಷಕ ಮಾಹಾಂತೇಶ ಮೇಟಿಯವರು ಪರಿಸರ ಪ್ರೇಮಿಯಾಗಿದ್ದು, ಶಾಲೆಯನ್ನು ಹಚ್ಚಹಸಿರಿನ ಶಾಲೆಯನ್ನಾಗಿಸಲು ದೂರದಿಂದ ಗಿಡಮರಗಳನ್ನು ಹೊತ್ತು ತಂದು, ಸ್ವತಃ ಗಿಡನೆಟ್ಟು ನಿತ್ಯವೂ ಪಾಲನೆ ಪೋಷಣೆ ಮಾಡಿದ್ದರ ಪರಿಣಾಮ ಇಂದು ಶಾಲೆ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ.ಕಣ್ಮನ ಸೆಳೆಯುವ ಗಿಡಮರಗಳು,ಶುದ್ಧ ವಾತಾವರಣದಲ್ಲಿ ಶಾಲೆಯ ನಿತ್ಯ ಪಾಠಗಳು ಜರುಗುತ್ತಿದ್ದು ಮಕ್ಕಳ ಕಲಿಕಾಸಕ್ತಿಯನ್ನು ಉತ್ತೇಜಿಸುತ್ತಿದೆ.
*ಹೊರ ಗೋಡೆಗೆ ವರ್ಣರಂಜಿತ ಪಠ್ಯಧಾರಿತ ಚಿತ್ರಗಳು*
ಈ ಇಬ್ಬರು ಶಿಕ್ಷಕರು ಶಾಲೆಗೆ ತಮ್ಮ ತನು,ಮನ,ಧನವನ್ನು ಅರ್ಪಿಸುತ್ತಿದ್ದಾರೆ.
ಶಾಲೆಯ ತಡೆಗೋಡೆಯ ಒಳ ಮತ್ತು ಹೊರಭಾಗದಲ್ಲಿ ತಮ್ಮ ಸ್ವಂತ ಖರ್ಚಿನಿಂದ ವಿಧಾನಸೌಧ,ತುಂಗಭದ್ರಾ ಆಣೆಕಟ್ಟು,ಬಳ್ಳಾರಿ ಕೋಟೆ,ಕಲ್ಲಿನರಥ, ಮಕ್ಕಳ ಕಲಿಕೆಗೆ ಅಗತ್ಯವಿರುವ ಚಾರ್ಟ್ ಗಳು, ಅಕ್ಷರಗಗನ,ರೇಡಿಯಂ ಮೂಲಕ ಚಿತ್ರರಚನೆ,ಗಣಿತದ ಕಲಿಕಾ ಚಿತ್ರಗಳು ,ಪ್ರಾಣಿ-ಪಕ್ಷಿ-ಸಸ್ಯಗಳಚಿತ್ರ ಸೇರಿದಂತೆ ಇನ್ನಿತರ ಚಿತ್ರಗಳನ್ನು ರಚಿಸುವ ಮೂಲಕ ಮಕ್ಕಳನ್ನು ಶಾಲೆಯತ್ತ ಸೆಳೆಯುವ ಜೊತೆಗೆ ಶಾಲೆಯ ಅಂದ-ಚೆಂದವನ್ನು ಹೆಚ್ಚಿಸಿದ್ದಾರೆ.
ಆ ಮೂಲಕ ನೋಡುಗರ ಕಣ್ಮನ ಸೆಳೆಯುವಂತೆ ಶಾಲೆಯನ್ನು ಅಲಂಕರಿಸಿದ್ದು, ವೈಯಕ್ತಿಕವಾಗಿ ಸುಮಾರು 40 ರಿಂದ 50 ಸಾವಿರ ರೂಪಾಯಿ ಹಣ ಖರ್ಚು ಮಾಡಿದ್ದಾರೆ.
ಶಾಲೆಯ ಮಕ್ಕಳನ್ನು ನಮ್ಮ ಸ್ವತಃ ಮಕ್ಕಳಂತೆ ತಿಳಿದು ನಾವು ಪಾಠ ಮಾಡಬೇಕು.
ಶಾಲೆ ಮತ್ತು ಮಕ್ಕಳಿಂದ ನಾವು ನಮ್ಮ ಕುಟುಂಬ ಮೂರು ಹೊತ್ತು ಸುಖವಾಗಿ ಊಟ ಮಾಡುತ್ತಿದ್ದೇವೆ.ನೆಮ್ಮದಿಯ
ಜೀವನ ಕಟ್ಟಿಕೊಂಡಿದ್ದೇವೆ. ಇಂತಹ ಶಾಲೆ ಮತ್ತು ಮಕ್ಕಳಿಗೆ ನಮ್ಮ ಕೈಲಾದ ಸೇವೆ ಮಾಡಬೇಕು. ಇದು ನನ್ನ ಸಣ್ಣ ಅಳಿಲು ಸೇವೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಮಾಹಾಂತೇಶ ಮೇಟಿ.
ಮಾಹಾಂತೇಶ ಮೇಟಿಯವರ ಕಾರ್ಯವನ್ನು ಮೆಚ್ಚಿದ ಶಿಕ್ಷಣ ಇಲಾಖೆ 2023-24 ನೇ ಸಾಲಿನ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ,
2024-25 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.ಜೊತೆಗೆ ಬೇರೆ ಬೇರೆ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಅಭಿನಂದಿಸಿದ್ದಾರೆ.
ಈ ಶಾಲೆಗೆ 1 ರಿಂದ 5 ನೇ ತರಗತಿ ಇರುವ ಈ ಶಾಲೆಗೆ ಮತ್ತೊಬ್ಬ ಶಿಕ್ಷಕರು ವರ್ಗಾವಣೆಯಾಗಿ ಬಂದಿರುವ ಶ್ರೀ ಅನಂತಸ್ವಾಮಿ ವಿ ರವರು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಈ ಹಿಂದೆ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಸದಸ್ಯರೂ ಆಗಿರುವ ಇವರು ನಲಿಕಲಿ ಮೂಲಕ ಕಲಿಕಾ ಸಾಮಾಗ್ರಿಗಳನ್ನು ತಯಾರಿಸಿ ನಿತ್ಯ ಭೋದನೆಯಲ್ಲಿ ಅದನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಶಾಲೆಯಲ್ಲಿ ಸ್ಮಾಟ್ ಕ್ಲಾಸ್, ಡೆಸ್ಕ್,ಟಿ.ಎಲ್.ಎಂ ಪರಿಕರಗಳು, ಲ್ಯಾಪ್ ಟಾಪ್ , ಪ್ರಿಂಟರ್ ಗಳನ್ನು ಖರೀದಿಸಿದ್ದು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್ ಕಲಿಸುವ ಪ್ರಯತ್ನವನ್ನು ಈಗಿನಿಂದಲೇ ತಯಾರಿ ನಡೆಸಿದ್ದಾರೆ.ಕಳೆದ ಸಾಲಿನಲ್ಲಿ ಗಣಿತ ಗಣಕದಲ್ಲಿ ಈ ಶಾಲೆಯ ವಿದ್ಯಾರ್ಥಿನಿ ಕ್ಲಸ್ಟರ್ ಮಟ್ಟದಲ್ಲಿ 2 ನೇ ಸ್ಥಾನ ಗಳಿಸಿ ಸೈ ಎನಿಸಿಕೊಂಡಿದ್ದಾಳೆ.
ಈ ಮೂಲಕ ಈ ಇಬ್ಬರ ಶಿಕ್ಷಕರ ನಿಸ್ವಾರ್ಥ ಸೇವೆ ಎಂತಹದ್ದು ಎಂಬುದು ಅರಿವಾಗುತ್ತದೆ.
ಮುಖ್ಯಗುರುಗಳು ಮಾಹಾಂತೇಶ ಮೇಟಿಯವರೊಂದಿಗೆ ಕೈಜೋಡಿಸಿ ಮಕ್ಕಳ ಕಲಿಕೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿ.ಅನಂತಸ್ವಾಮಿಯವರು ಜವಾಬ್ದಾರಿ ವಹಿಸಿದ್ದು ಇವರು ಯಾದಗಿರಿಯಲ್ಲಿ ಸುಮಾರು 17 ವರ್ಷ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. 2023 ರಲ್ಲಿ ಬಾಲಯ್ಯ ಕ್ಯಾಂಪ್ ಶಾಲೆಗೆ ವರ್ಗವಾಗಿ ಬಂದ ನಂತರ ಇಬ್ಬರು ಸೇರಿ
ಮಕ್ಕಳ ಭವಿಷ್ಯಕ್ಕೆ ಭದ್ರಬುನಾದಿ ಹಾಕುತ್ತಿದ್ದಾರೆ.
ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ನವೋದಯ,ಮೊರಾರ್ಜಿ ವಸತಿ ಶಾಲೆಗಳಿಗೆ ತರಬೇತಿ ನೀಡಿ ಆಯ್ಕೆಯಾಗುವಂತೆ ಪ್ರೇರೇಪಿಸುತ್ತಿದ್ದಾರೆ.ಇಲ್ಲಿಯವರೆ ಗೆ ಒಟ್ಟು 6 ಜನ ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ.
ಮಕ್ಕಳ ಕಲಿಕೆಗೆ ಪೂರಕವಾಗಿ ಪುಸ್ತಕ ,ಪೆನ್ನು ,ಬ್ಯಾಗ್,ಗಳನ್ನು ದಾನಿಗಳ ಮೂಲಕ ತರಿಸಿ ಮಕ್ಕಳಿಗೆ ನೀಡಿದ್ದಾರೆ.
ಅಲ್ಲದೇ ಸ್ವತಃ ಇವರಿಬ್ಬರ ಹಣದಿಂದಲೇ ಒಂದಷ್ಟು ಪುಸ್ತಕ, ಪೆನ್ನುಗಳನ್ನು ಶಾಲೆಯಲ್ಲಿ ಇರಿಸಿದ್ದಾರೆ.
ಎಲ್ಲ ಮಕ್ಕಳಿಗೆ ಅವುಗಳ ಅವಶ್ಯಕತೆ ಉಂಟಾದಾಗ ಪುಸ್ತಕ ಪೆನ್ನುಗಳನ್ನು ನೀಡುತ್ತಿದ್ದಾರೆ.
ಸರ್ಕಾರದಿಂದ ಕೊಡಮಾಡುವ ಬಿಸಿಯೂಟ,ಕ್ಷೀರಭಾಗ್ಯ,ರಾಗಿ ಮಾಲ್ಟ್ ,ಮೊಟ್ಟೆ ಸೇರಿದಂತೆ ಎಲ್ಲವನ್ನೂ ಮಕ್ಕಳಿಗೆ ಸಮರ್ಪಕವಾಗಿ ನೀಡುತ್ತಿದ್ದಾರೆ.
ದಿನಾಂಕ 28/03/2025 ರಂದು ಶಾಲಾ ಹಂತದಲ್ಲಿ 5ನೇ ತರಗತಿಯ ಮಕ್ಕಳ ಬೀಳ್ಕೋಡುವ ಕಾರ್ಯಕ್ರಮದೊಂದಿಗೆ ವಿಶಿಷ್ಟ ಮತ್ತು ವಿಭಿನ್ನವಾಗಿ ಶಾಲಾ ಹಂತದ TLMಮೇಳ ಆಯೋಜನೆ ಮಾಡಿದ್ದು ಈ ಸಂದರ್ಭದಲ್ಲಿ ಕಲಿಕಾ ಸಾಮಾಗ್ರಿಗಳ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಕಲಿಕಾ ಸಾಮಾಗ್ರಿಗಳನ್ನು ಬಳಸುವ ವಿಧಾನ ಯಾವ ತರಗತಿಯಲ್ಲಿ ಬಳಸುವ ವಿಧಾನ ಸೇರಿದಂತೆ ಅವುಗಳ ಮಾಹಿತಿಯನ್ನು ತಿಳಿದ ವಿವಿಧ ಶಾಲೆಗಳ ಶಿಕ್ಷಕರು ಮೂಕವಿಸ್ಮಿತರಾಗಿ ಪ್ರಶಂಸೆ ವ್ಯಕ್ತಪಡಿಸಿದ್ದು ಶಾಲೆಯ ಕೀರ್ತಿ ಮತ್ತಷ್ಟು ಹೆಚ್ಚಿದೆ.
*ಅಧಿಕಾರಿಗಳು,ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಶ್ಲಾಘನೆ*
ಶಾಲೆಯ ಅಭಿವೃದ್ಧಿ ಕುರಿತು ಇಲ್ಲಿನ ಶಾಸಕ ಗಣೇಶ್ , ಡಿಡಿಪಿಐ ಉಮಾದೇವಿ, ಜಿ.ಪಂ ಸಿ.ಇ.ಓ ರಾಹುಲ್ ಶರಣಪ್ಪ ಸಂಕನೂರ್,
ಬಿ.ಇ.ಓ ನಯಮೂರ್ ರೆಹಮಾನ್
ಬಿ.ಆರ್.ಸಿ , ಸಾರ್ವಜನಿಕರು,
ಶಿಕ್ಷಕರ ಕಾರ್ಯವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ , ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ.