ಮೊತ್ತ ಮೊದಲನೆಯದಾಗಿ ನಾವು ಸಂಸ್ಕಾರ ಎಂಬ ಪದದ ಅರ್ಥವನ್ನು ತಿಳಿಯೋಣ. ಸಂಸ್ಕಾರ ಎಂದರೆ ಸಂಸ್ಕೃತಿ ಸಂಸ್ಕಾರ ಎಂದರೆ ಮೌಲ್ಯಗಳು ಸಂಸ್ಕಾರ ಎಂದರೆ ನಮ್ಮ ನಡೆ ನುಡಿಗಳು ಮತ್ತು ಸಂಸ್ಕಾರ ಎಂದರೆ ಬೆಳವಣಿಗೆ. ಸಂಸ್ಕಾರವು ವ್ಯಕ್ತಿಯಲ್ಲಿ ನೈತಿಕ ಮತ್ತು ಮೌಲಿಕ ವಿಷಯಗಳನ್ನು ಸನಾತನ ಸಂಪ್ರದಾಯದ ಉತ್ತಮ ಮತ್ತು ಮೌಲಿಕ ವಿಷ ವಿಷಯಗಳನ್ನು ತಲೆಮಾರುಗಳಿಂದ ನಡೆದುಕೊಂಡು ಬಂದ ಉನ್ನತ ವಿಷಯಗಳನ್ನು ನಮ್ಮ ಮುಂದಿನ ತಲೆಮಾರಿಗೆ ಸಾಗಿಸುವ ಒಂದು ಮಹೋನ್ನತ ಜವಾಬ್ದಾರಿ. ಉತ್ತಮ ಸಂಸ್ಕಾರಯುತ ಮೌಲ್ಯಗಳನ್ನು ಮಕ್ಕಳಲ್ಲಿ ಅಳವಡಿಸುವ ಮೂಲಕ ಓರ್ವ ಜವಾಬ್ದಾರಿ ಪ್ರಜ್ಞೆಯುಳ್ಳ ನಾಗರಿಕನನ್ನು ಈ ಸಮಾಜಕ್ಕೆ ಕಾಣಿಕೆಯಾಗಿ ನೀಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ… ಅದರಲ್ಲೂ ಈ ಜವಾಬ್ದಾರಿಯ ಸಿಂಹ ಪಾಲು ಇರುವುದು ಹೆಣ್ಣು ಮಕ್ಕಳ ಮೇಲೆ .
ಸಂಸ್ಕಾರದ ಮೂಲ ತತ್ವಗಳು ಹೀಗಿವೆ… ಮೊದಲನೆಯದಾಗಿ ಮೌಲ್ಯಗಳು
ಪ್ರಾಮಾಣಿಕತೆ, ಗೌರವ, ಶಿಸ್ತು ಮತ್ತು ಸಹಾನುಭೂತಿ ಯಂತಹ ಮೌಲ್ಯಗಳು ನಮಗೆ ನೈತಿಕತೆಯನ್ನು ನೀಡುತ್ತವೆ. ಮನುಷ್ಯನ ಯೋಚನೆ ಮತ್ತು ಆತನ ಕ್ರಿಯೆಗೆ ಇವುಗಳೇ ಮೂಲ ಆಕರ.
ನಮ್ಮ ಬದುಕಿನಲ್ಲಿ ನಮಗೆ ವಹಿಸಲಾಗಿರುವ ಕಾರ್ಯ ಚಟುವಟಿಕೆಗಳನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನಾವು ಮಾಡಲೇಬೇಕು. ತಂದೆ ತಾಯಿಯರಲ್ಲಿ ಗುರು ಹಿರಿಯರಲ್ಲಿ ಗೌರವವಿರಬೇಕು. ನಮ್ಮ ಹಿರಿಯರು ನಡೆದು ಬಂದ ದಾರಿಯ ಕುರಿತು ಗೌರವ ಇರಬೇಕು..
ಶಿಸ್ತು ನಮ್ಮ ಬದುಕಿನ ಅಂಗವಾಗಿರಬೇಕು.
ಸಂಸ್ಕೃತಿ: ಇದು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಕಲಿಸುವ ಮತ್ತು ರವಾನಿಸುವ ಆಳವಾದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಅಂಶಗಳನ್ನು ಸೂಚಿಸುತ್ತದೆ.
ನಡತೆ ಮತ್ತು ಪಾಲನೆ: ಇದು ವ್ಯಕ್ತಿಯ ನಡವಳಿಕೆ ಮತ್ತು ಗಡೀಪಾರನ್ನು ರೂಪಿಸುವ ನಡವಳಿಕೆಯ ಮಾದರಿಗಳು ಮತ್ತು ಒಟ್ಟಾರೆ ಪೋಷಣೆ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.
ಮೂಲಭೂತವಾಗಿ, “ಸಂಸ್ಕಾರ” ಎಂಬುದು ಒಬ್ಬ ವ್ಯಕ್ತಿಯನ್ನು ಅವರ ಕುಟುಂಬ ಮತ್ತು ಸಮಾಜದಲ್ಲಿ ವ್ಯಾಖ್ಯಾನಿಸುವ ಸಕಾರಾತ್ಮಕ ಗುಣಗಳು ಮತ್ತು ಪರಿಷ್ಕೃತ ನಡವಳಿಕೆಯನ್ನು ವಿವರಿಸುವ ಸಮಗ್ರ ಪರಿಕಲ್ಪನೆಯಾಗಿದೆ.
ಈ ಸಂಸ್ಕಾರವನ್ನು ಕಲಿಸುವಲ್ಲಿ ಇಡೀ ಕುಟುಂಬದ ಪಾತ್ರ ಇದ್ದರೂ ಕೂಡ ಅದರಲ್ಲಿ ತಾಯಿಯ ಪಾತ್ರ ಅತ್ಯಂತ ಪ್ರಮುಖವಾದದು.ತಾಯಿ ಮತ್ತು ಮಗುವಿನ ಸಂಬಂಧ ದೈವಿಕವಾದದ್ದು. ಒಬ್ಬ ಮಹಿಳೆ ತನ್ನ ಉದರದಲ್ಲಿ ತನ್ನದೇ ರಕ್ತ ಮಾಂಸವನ್ನು ಹಂಚಿಕೊಂಡು 9 ತಿಂಗಳ ಕಾಲ ಬೆಳೆದು ಯಾತನಾದಾಯಕವಾದ ನೋವನ್ನು ಅನುಭವಿಸಿ ತನ್ನದೇ ಪ್ರತಿರೂಪವನ್ನು ಹೊಂದಿದ ಮಗುವನ್ನು ಈ ಭೂಮಿಗೆ ತರುತ್ತಾಳೆ. ಸಂಪೂರ್ಣ ಪರಾವಲಂಬಿಯಾಗಿ ಹುಟ್ಟಿದ ಮಗುವಿಗೆ
ತಾಯಿಯೇ ಮೊದಲ ರಕ್ಷಕಿ ಮತ್ತು ಮಗು ತುಸು ದೊಡ್ಡದಾಗುವ ಹೊತ್ತಿಗೆ ಮೊದಲ ಶಿಕ್ಷಕಿ. ಆಕೆ ತನ್ನ ಚರ್ಯೆಗಳ ಮೂಲಕವೇ ಮಗುವಿಗೆ ಪಾಠವನ್ನು ಕಲಿಸುತ್ತಿದ್ದಳು
ಮುಂಜಾನೆ ನಸುಕಿನ ಜಾವದಲ್ಲಿ ಮಲಗಿದ ತಾಯಿ ಎದ್ದವಳು ನಾವು ಪ್ರತಿನಿತ್ಯ ನಡೆಯುವ ನೆಲವನ್ನು ಕುಳಿತಲ್ಲಿಂದಲೇ ಮುಟ್ಟಿ ನಮಸ್ಕರಿಸುತ್ತಾಳೆ. ಮನೆ ದೇವರ ಕ್ಷೇತ್ರದ ದಿಕ್ಕಿನತ್ತ ಕೈಮುಗಿದು ಆ ಊರಿನ ಗ್ರಾಮ ದೇವತೆಯನ್ನು ನೆನೆದು ನಮಸ್ಕರಿಸುತ್ತಾಳೆ. ಮಗು ಕೂಡ ತನ್ನ ತಾಯಿಯನ್ನು ಅನುಕರಿಸುತ್ತದೆ.
ಮತ್ತೆ ಹಲ್ಲುಜ್ಜಿ,ಕೈ ಕಾಲು ಮುಖ ತೊಳೆದು ದೇವರ ಮನೆಯಲ್ಲಿರುವ ವಿಭೂತಿಯನ್ನು ಹಣೆಗೆ ಹಚ್ಚಿಕೊಂಡು ತನ್ನ ದಿನಚರಿಯಲ್ಲಿ ತೊಡಗುವ ತಾಯಿಯನ್ನು ಮಗು ಕೂಡ ಅನುಕರಿಸುತ್ತದೆ.
ಬೆಳಗಾಗಿ ನಾ ಎದ್ದು ಯಾರ್ಯಾರ ನೆನೆಯಲಿ ಎಲ್ಲಿ ಜೀರಿಗೆ ಬೆಳೆಯೋಳ ಎಳ್ಳು ಜೀರಿಗೆ ಬೆಳೆಯೊಳೆ ಭೂಮ್ತಾಯಿ ಎದ್ದೊಂದು ಫಳಿಗೆ ನೆನದೇನ
ಎಂದು ಭೂಮಿತಾಯಿಯನ್ನು ಕುರಿತು ಹಾಡುವ ತಾಯಿ ತನ್ನೊಂದಿಗೆ ಮಗುವಿಗೆ ಕೂಡ ಭೂಮಿ ತಾಯಿಯನ್ನು ನಮಿಸಲು ಹೇಳುತ್ತಾಳೆ.
ನಂತರ ಸ್ನಾನ ಮಾಡಿಸಲು ಮಗುವನ್ನು ಕರೆದುಕೊಂಡು ಹೋಗುವ ಆಕೆ ಮಗುವಿನ ಮೈಮೇಲೆ ನೀರನ್ನು ಸುರಿಯುತ್ತಾ ಗಂಗೇಚ ಯಮುನೇಚೈವ ಗೋದಾವರಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಎಂದು ಸಪ್ತ ಜಾಹ್ನವಿಯರನ್ನು ಅಂದರೆ ಆ ಎಲ್ಲಾ ಪುಣ್ಯ ನದಿಗಳ ನೀರನ್ನು ಈ ತನ್ನ ಮಗು ಸ್ನಾನ ಮಾಡುತ್ತಿರುವ ನೀರಿಗೆ ಆಹ್ವಾನಿಸುತ್ತಾಳೆ. ಆ ಮೂಲಕ ನಮಗೆ ಜೀವದಾಯಿನಿಯಾಗಿರುವ
ಪಂಚಭೂತಗಳಲ್ಲಿ ಒಂದಾಗಿರುವ ನೀರು ನಮ್ಮ ಬದುಕಿಗೆ ಬಹುಮೂಲ್ಯ ಕೊಡುಗೆಯನ್ನು ನೀಡುತ್ತದೆ ಎಂಬ ಅರಿವನ್ನು ಮಗುವಿಗೆ ಮೂಡಿಸುತ್ತಾಳೆ.
ಮತ್ತೆ ಮುಂದುವರೆದು ಸ್ನಾನ ಮಾಡಿ ಆ ಮಗುವನ್ನು ಕರೆತಂದು ಜಗವನ್ನು ಬೆಳಗುವ ಸೂರ್ಯ ದೇವನಿಗೆ ನಮಸ್ಕರಿಸಲು ಹೇಳುತ್ತಾಳೆ. ಮಗುವಿನ ಹಣೆಗೆ ವಿಭೂತಿ ಇಲ್ಲವೇ ಗಂಧವನ್ನು ಹಚ್ಚಿ ಮನೆಯ ಜಗಲಿಯ ಮೇಲಿರುವ ಎಲ್ಲ ದೇವರಿಗೂ ನಮಸ್ಕರಿಸಿ ಚಿಕ್ಕ ಪುಟ್ಟ ಮಂತ್ರಗಳನ್ನು ಕಲಿಸಿಕೊಟ್ಟು ಅವುಗಳನ್ನು ದೇವರ ಮುಂದೆ ಒಪ್ಪಿಸುವ ರೂಢಿ ಮಾಡಿಸುತ್ತಾಳೆ. ಮನೆಯ ಮುಂದಿರುವ ಬೇವು ಆಲದ ಮರದ ಮುಂದಿರುವ ನಾಗರಕಟ್ಟೆ ಇಲ್ಲವೇ ಮನೆಯ ಮುಂದಿನ ತುಳಸಿ ಕಟ್ಟಿಗೆ ಕೂಡ ನಮಸ್ಕರಿಸುವುದನ್ನು ತಾಯಿ ಹೇಳಿಕೊಡುತ್ತಾಳೆ.
ಅಡುಗೆ ಮನೆಯ ಒಲೆಗೆ ನಮಿಸಿ ಅನ್ನಪೂರ್ಣೇ ಸದಾಪೂರ್ಣೆ ಎಂದು ಅನ್ನಪೂರ್ಣೇಶ್ವರಿಯ ಮಂತ್ರವನ್ನು ಹೇಳಿಕೊಂಡು ಒಲೆಯನ್ನು ಹತ್ತಿಸಿ ಆ ಅಗ್ನಿಯನ್ನು ಕೂಡ ನಮಸ್ಕರಿಸುತ್ತಾಳೆ.
ಆ ಮೂಲಕ ಪಂಚಭೂತಗಳಿಂದ ನಿರ್ಮಿಸಲ್ಪಟ್ಟ ಈ ಬೃಹತ್ ಬ್ರಹ್ಮಾಂಡದಲ್ಲಿ ನಾವು ಎಲ್ಲರಿಗೂ ಋಣಿಯಾಗಿರಬೇಕು ಎಂಬ ಪಾಠವನ್ನು ತಾಯಿ ಕಲಿಸಿಕೊಡುತ್ತಾಳೆ. ಮನೆಯಲ್ಲಿ ಇರುವ ಹಿರಿಯ ಜೀವಿಗಳೊಂದಿಗೆ ಪ್ರೀತಿ ಮತ್ತು ಗೌರವದಿಂದ, ತಮಗಿಂತ ಚಿಕ್ಕ ಮಕ್ಕಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಲು ತಾಯಿಯ ತರಬೇತಿಯೇ ಕಾರಣ.
ಮನೆಯ ಮುಂದೆ ಬರುವ ಭಿಕ್ಷುಕರು, ಪಶುಗಳಿಗೆ ಆಹಾರವನ್ನು ನೀಡುವುದನ್ನು ಕಲಿಸುತ್ತಾಳೆ…. ಆ ಮೂಲಕ ಮಗುವಿನಲ್ಲಿ ದಾನ ಮಾಡುವ ಗುಣವನ್ನು ಆಕೆ ಕಲಿಸುತ್ತಾಳೆ. ಅಸಹಾಯಕರಿಗೆ ವೃದ್ಧರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದು ಬಹುದೊಡ್ಡ ಮೌಲ್ಯ ಎಂಬುದನ್ನು ತನ್ನ ಕ್ರಿಯೆಯ ಮೂಲಕವೇ ತೋರಿಸುತ್ತಾಳೆ. ಮತ್ತೆ ರಾತ್ರಿಯಲ್ಲಿ ಚಂದಮಾಮನನ್ನು ತೋರಿಸುತ್ತಾ ಕಥೆ ಹೇಳಿ ಊಟ ಮಾಡಿಸುತ್ತಾಳೆ.
ಸೂರ್ಯನನ್ನು ಅತಿ ದೊಡ್ಡ ಸೌರವ್ಯೂಹದ ಕಾಯವೆಂದು, ನೀರನ್ನು ಹೆಚ್ ಟು ಓ ಎಂದು, ಚಂದ್ರನನ್ನು ಗ್ರಹ ಎಂದು ಶಾಲೆಗಳಲ್ಲಿ ಕಲಿಯುವ ಮಕ್ಕಳು ಕೂಡ ಮನೆಗೆ ಬಂದರೆ ಮತ್ತೆ ತಾಯಿಯ ಕಲಿಕೆಯಂತೆ ಸೂರ್ಯ ಮತ್ತು ಚಂದ್ರರನ್ನು ನಮ್ಮ ಬದುಕನ್ನು ಬೆಳಗುವ ದೇವತೆಗಳೆಂದೇ ಭಾವಿಸುತ್ತಾರೆ.
ಜಲಜನಕ ಮತ್ತು ಆಮ್ಲಜನಕದ ಮಿಶ್ರಣ ನೀರು ಎಂಬುದನ್ನು ಮನಗಂಡರೂ ಕೂಡ ಅದು ನಮ್ಮ ಬದುಕಿಗೆ ನೀಡುವ ಬಹುದೊಡ್ಡ ಕೊಡುಗೆಯನ್ನು
ಸ್ಪರಿಸಿ ಅವುಗಳನ್ನು ದೇವತೆಗಳು ಎಂದು ಪೂಜಿಸುತ್ತಾರೆ. ಇದು ಮಗುವಿಗೆ ತಾಯಿ ಕೊಡುವ ಸಂಸ್ಕಾರ
ಮಕ್ಕಳಲ್ಲಿ ಸಂಸ್ಕಾರ ಬೆಳೆಸುವಲ್ಲಿ ತಾಯಿಯ ಪಾತ್ರ ನಿರ್ಣಾಯಕವಾಗಿದೆ, ಏಕೆಂದರೆ ತಾಯಿ ತಮ್ಮ ಮಕ್ಕಳಿಗೆ ಮೊದಲ ಮತ್ತು ಪ್ರಮುಖ ಆದರ್ಶವಾಗುತ್ತಾರೆ. ತಾಯಿಯು ನೈತಿಕ ಮೌಲ್ಯಗಳು, ಕರುಣೆ, ಮತ್ತು ಸಮಾಜಮುಖಿ ನಡವಳಿಕೆಯಂತಹ ಗುಣಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಉತ್ತಮ ವ್ಯಕ್ತಿಗಳಾಗಿ ರೂಪಿಸುತ್ತಾಳೆ. ಸಕಾರಾತ್ಮಕ ದೃಷ್ಟಿಕೋನ, ಆರೋಗ್ಯಕರ ಅಭ್ಯಾಸಗಳು, ಮತ್ತು ಪರಿಸರ ಪ್ರಜ್ಞೆಯನ್ನು ಬೆಳೆಸುವುದರಲ್ಲಿ ತಾಯಿಯ ಪಾತ್ರ ಬಹಳ ಮುಖ್ಯ.
ತಾಯಿಯ ಪಾತ್ರದ ಪ್ರಮುಖ ಅಂಶಗಳು:
ಆದರ್ಶಪ್ರಾಯ ನಡವಳಿಕೆ:
ತಾಯಿಯು ತನ್ನ ನಡವಳಿಕೆಯ ಮೂಲಕ ಮಕ್ಕಳ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತಾಳೆ. ಕರುಣೆ, ಪ್ರಾಮಾಣಿಕತೆ, ಮತ್ತು ದೊಡ್ಡ ಗುರಿಗಳತ್ತ ಸಾಗುವವರನ್ನು ಆದರ್ಶಗಳನ್ನಾಗಿ ತೋರಿಸುವ ಮೂಲಕ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತಾಳೆ.
ನೈತಿಕತೆ ಮತ್ತು ಮೌಲ್ಯಗಳ ಬೋಧನೆ:
ಕಳ್ಳತನ, ಜೂಜಾಟ, ಮತ್ತು ಮಾದಕವಸ್ತುಗಳ ಸೇವನೆಯಂತಹ ಹಾನಿಕಾರಕ ಅಭ್ಯಾಸಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು ತಾಯಿಯ ಜವಾಬ್ದಾರಿ.
ಸಮಾಜಮುಖಿ ಮತ್ತು ಕರುಣೆಯ ಬೆಳೆವಣಿಗೆ:
ಮಕ್ಕಳು ಕರುಣಾಮಯರಾಗಿ ಬೆಳೆಸಲು, ಎಲ್ಲರೊಂದಿಗೆ ಪ್ರೀತಿ ಮತ್ತು ಕರುಣೆಯನ್ನು ತೋರಲು ತಾಯಿಯು ಪ್ರೋತ್ಸಾಹಿಸಬೇಕು.
ಆರೋಗ್ಯಕರ ಅಭ್ಯಾಸಗಳ ಅಳವಡಿಕೆ:
ಆರೋಗ್ಯಕರ ಆಹಾರ ಸೇವನೆ, ಪರಿಸರವನ್ನು ಸ್ವಚ್ಛವಾಗಿಡುವುದು, ಮತ್ತು ಪ್ರಕೃತಿಯನ್ನು ಪ್ರೀತಿಸುವ ಬಗ್ಗೆ ಮಕ್ಕಳಿಗೆ ತಿಳಿಸುವುದು ಮುಖ್ಯ.
ಸಕಾರಾತ್ಮಕ ವಾತಾವರಣ ಸೃಷ್ಟಿ:
ಮಗುವಿನ ಉತ್ತಮ ಮಾನಸಿಕ ಬೆಳವಣಿಗೆಗೆ ತಾಯಿಯು ಧನಾತ್ಮಕವಾಗಿ ಇರುವುದು ಮುಖ್ಯ.
ಜೀವನ ಕೌಶಲ್ಯಗಳ ಕಲಿಕೆ:
ಹಣ ನಿರ್ವಹಣೆ, , ಹೊಲಿಗೆ, ಅಡುಗೆ, ಮತ್ತು ಮನೆಯ ನಿರ್ವಹಣೆಯಂತಹ ಜೀವನ ಕೌಶಲ್ಯಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬಹುದು.
ಗರ್ಭಸಂಸ್ಕಾರ:
ಗರ್ಭಿಣಿ ತಾಯಂದಿರು ತಮ್ಮ ಮಗುವಿನ ಮಾನಸಿಕ ಬೆಳವಣಿಗೆಗಾಗಿ ಗರ್ಭಸಂಸ್ಕಾರ ಅಭ್ಯಾಸಗಳನ್ನು ಮಾಡಬಹುದು. ಇದರಿಂದ ಮಗುವಿನಲ್ಲಿ ಶಾಂತ, ಸದ್ಗುಣ, ಮತ್ತು ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಮಕ್ಕಳಿಗೆ ಸದಾ ಸಕಾರಾತ್ಮಕ ಸಂಗತಿಗಳನ್ನು ಹಾಗೂ ಕಥೆಗಳನ್ನು ಹೇಳಬೇಕು. ಮಕ್ಕಳಿಗೆ ಸಿನೆಮಾ ಹೀರೋಗಳನ್ನು ಆದರ್ಶವನ್ನಾಗಿಸದೆ ದೇಶಕ್ಕಾಗಿ, ಸಮಾಜಕ್ಕಾಗಿ ತ್ಯಾಗಮಾಡಿದವರನ್ನು, ಉನ್ನತ ಧ್ಯೇಯವಾಗಿ ಬದುಕಿದವರನ್ನು ಆದರ್ಶವನ್ನಾಗಿಸಬೇಕು. ಮಕ್ಕಳನ್ನು ಸಮಾಜಮುಖಿಯನ್ನಾಗಿ, ಜೀವನಮುಖಿಯನ್ನಾಗಿಸಬೇಕು. ಒಟ್ಟಿನಲ್ಲಿ ತನ್ನ ಮಕ್ಕಳನ್ನು ಜಗತ್ತಿಗೆ ಬೆಳಕನ್ನು ನೀಡುವ ಆದರ್ಶ ಮಹಾಪುರುಷರನ್ನಾಗಿ ಮಾಡುವ ಕನಸನ್ನು ನನಸನ್ನಾಗಿಸುವ ಪ್ರವೃತ್ತಿ, ಪ್ರಯತ್ನ ತಾಯಿಯಲ್ಲಿರಬೇಕು.
ಕಾಲ ಕೆಟ್ಟುಹೋಗಿದೆ, ಇಂದಿನ ಮಕ್ಕಳು ದಾರಿ ತಪ್ಪಿದ್ದಾರೆ, ಹಿರಿಯರ ಮಾತಿಗೆ ಬೆಲೆಯೇ ಇಲ್ಲ. ಮಕ್ಕಳಲ್ಲಿ ಶಿಸ್ತು, ಸಂಸ್ಕಾರ ದಿನದಿಂದ ದಿನಕ್ಕೆ ಕಡಮೆ ಆಗುತ್ತಿದೆ’ – ಇಂತಹ ಮಾತುಗಳು ಸಮಾಜದಲ್ಲಿ ಆಗಾಗ ಕೇಳಿಬರುತ್ತದೆ. ಕಾಲ ಎಂದೂ ಕೆಡುವುದಿಲ್ಲ; ಕಾಲವನ್ನು ನಾವೇ ಕೆಡಿಸುತ್ತೇವೆ. ಅದೇ ರೀತಿ ಇಂದಿನ ಮಕ್ಕಳು ಕೆಟ್ಟಿದ್ದಾರೆ ಎಂಬ ವಾಕ್ಯವೂ ಸರಿಯಲ್ಲ. ಬದಲಿಗೆ ಇಂದಿನ ಮಕ್ಕಳನ್ನು ನಾವು ಕೆಡಿಸಿದ್ದೇವೆ ಎನ್ನುವ ಮಾತು ಸರಿ. ಯಾಕೆಂದರೆ ಮಕ್ಕಳು ಒದ್ದೆ ಗೋಡೆಯಂತೆ. ಅದಕ್ಕೆ ನಾವು ಏನು ಕೊಡುತ್ತೇವೆ ಅದನ್ನು ಅದು ಸ್ವೀಕರಿಸುತ್ತದೆ.
ಅವರ್ ಚಿಲ್ಡ್ರನ್ ಆರ್ ನಾಟ್ ಯೂಸ್ ಲೆಸ್…. ದೇ ಆರ್ ಯೂಸಡ್ ಲೆಸ್…. ಅಂದರೆ ನಮ್ಮ ಮಕ್ಕಳು ನಿರುಪಯೋಗಿಗಳಲ್ಲ ಅಥವಾ ಉಪಯೋಗಕ್ಕೆ ಬಾರದವರಲ್ಲ ಬದಲಾಗಿ ನಾವು ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ ಅಥವಾ ಅತ್ಯಂತ ಕಡಿಮೆ ಬಳಸಿಕೊಳ್ಳುತ್ತೇವೆ ಎಂಬ ಈ ವಾಕ್ಯದ ಅರ್ಥವನ್ನು ಅರಿತು ಮಕ್ಕಳಿಗೆ ಉತ್ತಮವಾದ ಸಂಸ್ಕಾರ ಕೊಟ್ಟು ಸರಿಯಾಗಿ ಬೆಳೆಸಿದರೆ ಅವರು ಮುಂದೆ ಸತ್ಪ್ರಜೆಗಳಾಗುತ್ತಾರೆ. ಮಕ್ಕಳನ್ನು ಬೆಳೆಸುವುದರಲ್ಲಿ ಹೆತ್ತವರ, ಹಿರಿಯರ, ಶಿಕ್ಷಕರ, ಬಂಧು-ಬಾಂಧವರ, ಸಮಾಜದ ಎಲ್ಲರ ಪಾತ್ರವಿದ್ದರೂ ವಿಶೇಷವಾಗಿ ತಾಯಿಯ ಪಾತ್ರ ಬಹಳ ಮುಖ್ಯ.
‘ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ’ ಎಂಬ ಮಾತಿನಂತೆ ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಬಹಳ ಪ್ರಾಮುಖ್ಯದ್ದಾಗಿರುತ್ತದೆ.
ಮಗುವನ್ನು ಬಾಲ್ಯದಲ್ಲಿ ಪ್ರೀತಿಯಿಂದ ಬೆಳೆಸಬೇಕೇ ವಿನಾ ಮೋಹದಿಂದಲ್ಲ. ಹಾಗೆಂದು ಮಗು ತಪ್ಪು ಮಾಡಿದಾಗಲೂ ಪ್ರೀತಿ ಮಾಡಬೇಕೆಂದು ಇದರರ್ಥವಲ್ಲ. ಸಂಸ್ಕೃತದಲ್ಲಿ ಸುಭಾಷಿತವೊಂದಿದೆ:
ಲಾಲನಾತ್ ಬಹವೋ ದೋಷಾಃ
ತರ್ಜನಾದ್ ಬಹವೋ ಗುಣಾಃ |
ತಸ್ಮಾತ್ ಪುತ್ರಂ ಚ ಶಿಷ್ಯಂ ಚ
ತರ್ಜಯೇತ್ ನ ತು ಲಾಲಯೇತ್ ||
ಮಕ್ಕಳನ್ನು ಮತ್ತು ಶಿಷ್ಯರನ್ನು ಅತಿಯಾಗಿ ಮುದ್ದು ಮಾಡುವುದರಿಂದ ಅನೇಕ ದೋಷಗಳೂ, ಅವಶ್ಯವಿದ್ದಾಗ ಗದರಿಸುವುದರಿಂದ ಅನೇಕ ಗುಣಗಳೂ ನಿರ್ಮಾಣವಾಗುತ್ತವೆ. ಆದ್ದರಿಂದ ಮಕ್ಕಳು ಮತ್ತು ಶಿಷ್ಯರನ್ನು ಶಿಸ್ತಿನಿಂದ ನಿಯಂತ್ರಿಸುತ್ತಿರಬೇಕೆ ಹೊರತು ಯಾವಾಗಲೂ ತುಂಬಾ ಮುದ್ದು ಮಾಡುತ್ತಿರಬಾರದು.
ತಪ್ಪು ಮಾಡಿದಾಗಲೂ ಮುದ್ದಿಸುತ್ತಿದ್ದರೆ ಮುಂದೆ ಆ ಮಗು ರೌಡಿಯಾಗಿ, ಸಮಾಜಘಾತುಕನಾಗಿ ವಂಶಕ್ಕೆ ಕಳಂಕ ತರಬಹುದು. ಅದರೆ ಮಕ್ಕಳನ್ನು ಅಗತ್ಯವಿದ್ದಾಗ ಶಿಕ್ಷಿಸುತ್ತ, ಶಿಸ್ತಿನಿಂದ ಕಾಪಾಡುತ್ತಿದ್ದರೆ ಮುಂದೆ ದೊಡ್ಡ ಮಹಾಪುರುಷನೇ ಆಗಬಹುದು. ಮಕ್ಕಳನ್ನು ಬೆಳೆಸುವಾಗ ಶಿಕ್ಷೆಯೂ ಒಂದು ಶಿಕ್ಷಣ. ಆದರೆ ಶಿಕ್ಷೆ ಮಕ್ಕಳನ್ನು ಭಯಗ್ರಸ್ತ ಕೂಪಕ್ಕೆ ತಳ್ಳದೆ ತನ್ನ ತಪ್ಪನ್ನು ತಿದ್ದಿ ಸಂಸ್ಕಾರವAತರಾಗಲು ಸಹಕಾರಿಯಾಗಬೇಕು. ದಾರಿ ತಪ್ಪಿದಾಗ ಮಕ್ಕಳನ್ನು ಹೊಡೆದು-ಬಡಿದು ಹಿಂಸಿಸಬೇಕಾಗಿಲ್ಲ. ಆದರೆ ಬೆತ್ತ ಕೈಯಲ್ಲಿರಲಿ. ತಪ್ಪು ಮಾಡಿದಾಗ ಮಕ್ಕಳ ಮುಂದೆ ಮುಖದಲ್ಲಿ ಕೋಪದ ನಟನೆಯಿರಲಿ. ಆದರೆ ಹೃದಯದಲ್ಲಿ ನೈಜ ಪ್ರೀತಿಯಿರಲಿ.
ಯಾವ ಮಕ್ಕಳೂ ಕೆಟ್ಟವರಿರುವುದಿಲ್ಲ. ಅವರು ಮುಗ್ಧರಾಗಿಯೇ ಇರುತ್ತಾರೆ. ಮಕ್ಕಳು ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ಬದಲಿಗೆ ಅವರಿಂದ ಅನುದ್ದೇಶಪೂರ್ವಕವಾಗಿ ತಪ್ಪು ನಡೆಯಬಹುದು. ಆದ್ದರಿಂದ ಮಕ್ಕಳಲ್ಲಿ ತಪ್ಪು ಹುಡುಕುವವರಿಗಿಂತ ಅವರಿಗೆ ಯೋಗ್ಯ ಮಾರ್ಗದರ್ಶನ ನೀಡಬಲ್ಲ ತಾಯಂದಿರ ಅಗತ್ಯ ಹೆಚ್ಚಾಗಿದೆ. ಮುಗ್ಧ ಮಕ್ಕಳು ಆವೆಮಣ್ಣಿನಂತೆ. ತಾಯಿಯಾದವಳು ಆ ಮಣ್ಣಿನಿಂದ ರಾವಣನ ಮೂರ್ತಿಯನ್ನೂ ಮಾಡಬಹುದು, ರಾಮನ ಮೂರ್ತಿಯನ್ನೂ ಮಾಡಬಹುದು. ಬೆಳೆಯಲಾರಂಭಿಸಿದ ಪುಟ್ಟ ಮಕ್ಕಳಲ್ಲಿ ನೀವು ಏನು ಹಾಕುವಿರೋ, ಅದು ಅವರ ರಕ್ತದಲ್ಲಿ, ಉಸಿರಿನಲ್ಲಿ, ಅನಿಸಿಕೆಯಲ್ಲಿ, ಕೃತಿಯಲ್ಲಿ ಬೆರೆತುಕೊಳ್ಳುತ್ತದೆ. ನೀವು ಪ್ರೀತಿ ಮಾಡುವುದನ್ನು ಕಲಿಸಿದರೆ, ಅವರು ಪ್ರೀತಿ ಮಾಡುತ್ತಾರೆ. ದ್ವೇಷ ಮಾಡುವುದನ್ನು ಕಲಿಸಿದರೆ, ಅವರು ದ್ವೇಷ ಮಾಡುವುದನ್ನು ಕಲಿತುಕೊಳ್ಳುತ್ತಾರೆ.
ಕಲ್ಲು, ಕಟ್ಟಿಗೆಗಳಲ್ಲಿ ಏನೂ ಇರುವುದಿಲ್ಲ. ಆದರೆ ಅವು ಒಬ್ಬ ಕುಶಲ ಶಿಲ್ಪಿಯ ಕೈಗೆ ಸಿಕ್ಕರೆ, ಅದ್ಭುತ ಕೆತ್ತನೆ ಅವುಗಳಲ್ಲಿ ಕಂಗೊಳಿಸುತ್ತದೆ. ಅದೇ ರೀತಿ ಮುಗ್ಧಮಕ್ಕಳು ಯೋಗ್ಯ ತಾಯಂದಿರ ಕೈಯಲ್ಲಿ ಸಿಕ್ಕಿದರೆ ಅವರು ನಿಜವಾದ ಅರ್ಥದಲ್ಲಿ ಮಾನವರಾಗಿ ನಿರ್ಮಾಣವಾಗುತ್ತಾರೆ. ನಮ್ಮ ಎಲ್ಲ ಕವಿಗಳು, ಪಂಡಿತರು, ವಿಜ್ಞಾನಿಗಳು, ಕಲಾವಿದರು, ತಂತ್ರಜ್ಞರು, ಕುಶಲಕರ್ಮಿಗಳು, ಆಡಳಿತಗಾರರು, ಯೋಧರು, ಸಾಹಸಿಗರು – ಎಲ್ಲರೂ ನಮ್ಮ ಮನೆಗಳಲ್ಲಿಯೇ ಕೆತ್ತಲ್ಪಟ್ಟ ಶಿಲ್ಪಿಗಳು. ಈ ದೇಶಾದ್ಯಂತ ಅನೇಕ ಶಿಲ್ಪಿಗಳು ಹಲವಾರು ದೇವಸ್ಥಾನಗಳಲ್ಲಿ ಸುಂದರವಾದ ಸಾವಿರಾರು ದೇವಮೂರ್ತಿಗಳನ್ನು ಕೆತ್ತಿದ್ದಾರೆ. ಆದರೆ ಅಸಂಖ್ಯಾತ ತಾಯಂದಿರು ಮನೆಮನೆಯಲ್ಲಿ ತಮ್ಮ ಮಕ್ಕಳನ್ನು ತಿದ್ದಿ ತೀಡಿ ಸಂಸ್ಕಾರಕೊಟ್ಟು ದೇವಮಾನವರನ್ನಾಗಿ ಮಾಡಿದ್ದಾರೆ. ಶಿವಾಜಿ, ಭಗತ್‌ಸಿಂಗ್, ರಾಮ್‌ಪ್ರಸಾದ ಬಿಸ್ಮಿಲ್, ಸ್ವಾಮಿ ವಿವೇಕಾನಂದ, ಸರ್.ಎಂ. ವಿಶ್ವೇಶ್ವರಯ್ಯ, ವಿನೋಬಾ ಭಾವೆ – ಇವರೆಲ್ಲರನ್ನು ನಿರ್ಮಿಸಿದ್ದು ಅವರವರ ತಾಯಂದಿರು. ಆದ್ದರಿಂದ ಒಬ್ಬ ವ್ಯಕ್ತಿಯನ್ನು ಸಮಾಜಸೇವಕನನ್ನಾಗಿ ಅಥವಾ ಸಮಾಜಘಾತುಕನನ್ನಾಗಿ ಮಾಡುವುದು ತಾಯಿಯ ಕೈಯಲ್ಲಿದೆ.
ಆದ್ದರಿಂದ ತಾಯಂದಿರು ಯಾವುದೇ ರೀತಿಯ ಕೊರತೆಯನ್ನು ಮಾಡದೆ ತಮ್ಮ ಮಕ್ಕಳನ್ನು ಸಂಸ್ಕಾರ ಉಳ್ಳವರನ್ನಾಗಿ ಬೆಳೆಸಬೇಕು.
ಏನಂತೀರಾ ಸ್ನೇಹಿತರೆ
ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್