Ad image

ಕಾರಟಗಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತಿ ಭೈರಪ್ಪನವರಿಗೆ ನುಡಿ ನಮನ

Vijayanagara Vani
ಕಾರಟಗಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತಿ ಭೈರಪ್ಪನವರಿಗೆ ನುಡಿ ನಮನ

 

ಕಾರಟಗಿ : ಭಾರತೀಯ ಸಂಸ್ಕೃತಿ ಮತ್ತು ತತ್ವಜ್ಞಾನದ ಆಳವನ್ನು ಸಾಹಿತ್ಯದಲ್ಲಿ ಪ್ರತಿಬಿಂಬಿಸಿದ, ಸಮಾಜ-ಇತಿಹಾಸ-ಪುರಾಣಗಳನ್ನು ಮರುಪರಿಶೀಲಿಸಿ ಕನ್ನಡ ಕಾದಂಬರಿಯನ್ನು ಜಾಗತಿಕ ಮಟ್ಟಕ್ಕೆ ಏರಿಸಿದ ಸಾಹಿತ್ಯ ಸಾಮ್ರಾಟ ಎಂದೇ ಡಾ.ಎಸ್.ಎಲ್ ಭೈರಪ್ಪ ಅವರನ್ನು ಗುರುತಿಸಬಹುದು ಎಂದು ವಿಕಾಸ ಅಕಾಡೆಮಿ ತಾಲೂಕಾ ಸಂಚಾಲಕ ಮಂಜುನಾಥ್ ಮಸ್ಕಿ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪಿಯು ಕಾಲೇಜು ಆವರಣದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಡಾ. ಎಸ್. ಎಲ್. ಭೈರಪ್ಪನವರ ನುಡಿ ನಮನ ಹಾಗೂ ಶೃದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಡಾ.ಎಸ್. ಎಲ್ ಭೈರಪ್ಪನವರು ಕನ್ನಡ ಸಾಹಿತ್ಯದ ಪ್ರಜ್ವಲ ತಾರೆ. ಅಭಿಜಾತ ಕಾದಂಬರಿಕಾರ. ಅವರ ಸಾಹಿತ್ಯದ ವಿಶಿಷ್ಠತೆ ಎಂದರೆ, ಸಂಶೋಧನಾ ಗಂಭೀರತೆ, ತತ್ವಶಾಸ್ತ್ರೀಯ ಆಳ, ಇತಿಹಾಸ, ಪುರಾಣಗಳ ಮರು ಅಥರ್ೈಸುವಿಕೆ ಭಾರತೀಯ ಸಂಸ್ಕೃತಿಯ ನಿಜ ಸ್ವರೂಪದ ಅನಾವರಣ ಅವರ ಕೃತಿಗಳಿಂದಾಯಿತು. ಆ ಮೂಲಕ ಪ್ರತಿಯೊಬ್ಬರಲ್ಲೂ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸಿ ತಮ್ಮ ಕೃತಿಗಳ ಮೂಲಕ ಓದುಗರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದರು. ಅಷ್ಟೇ ಅಲ್ಲ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡು ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದರು ಎಂದರು.

ಕಸಾಪ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಭೈರಪ್ಪನವರು ವಿಧಿವಶರಾದ ಸುದ್ದಿ ಕೇಳಿ ಇಡೀ ಕನ್ನಡ ಸಾಹಿತ್ಯವಲಯವೇ ಅತ್ಯಂತ ಆಘಾತಕ್ಕೊಳಗಾಗಿದೆ. ಅಗಾಧ ಪಾಂಡಿತ್ಯಪೂರ್ಣ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿ, ಇತಿಹಾಸ, ತತ್ವಶಾಸ್ತ್ರ ಮತ್ತು ಮಾನವ ಸಂಬಂಧಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಿಸುವ ಅಪೂರ್ವ ಕೃತಿಗಳನ್ನು ರಚಿಸಿ ನಾಡಿನ ಸಾರಸ್ವತ ಪ್ರಪ್ರಂಚ ಶ್ರೀಮಂತಗೊಳಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ ನಾಯಕ ತೊಂಡಿಹಾಳ, ಕಸಾಪ ಕನಕಗಿರಿ ಘಟಕದ ಮಾಜಿ ಅಧ್ಯಕ್ಷ ಬಸವರಾಜ ರ್ಯಾವಳದ್, ಸೋಮನಾಥ್ ಹೆಬ್ಬಡದ ವಕೀಲರು, ಕಸಾಪ ತಾಲೂಕಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಚಿಕೇನಕೊಪ್ಪ, ಶಿಕ್ಷಕ ಎನ್. ಮಾರುತಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಸಾಪ ತಾಲೂಕಾ ಘಟಕದ ನಿಕಟಪೂರ್ವ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಸದಸ್ಯ ವೆಂಕೋಬ ಪತ್ತಾರ, ಜಿಲ್ಲಾ ಘಟಕದ ನಿಕಟಪೂರ್ವ ಮಹಿಳಾ ಪ್ರತಿನಿಧಿ ವಿಜಯಲಕ್ಷ್ಮೀ ಮೇಲಿನಮನಿ, ಮುಖ್ಯ ಶಿಕ್ಷಕರುಗಳಾದ ರಮೇಶ ಕುಕನೂರು, ಅಮರೇಶ ಪಾಟೀಲ್, ವಿದ್ಯಾಧರಗೌಡ ಮೆಡಿಕಲ್ ಇನ್ನಿತರರು ಇದ್ದರು.

Share This Article
error: Content is protected !!
";