Ad image

ಪೂರ್ಣತ್ವದ ದರ್ಶನವೇ ಶ್ರೀಸಿದ್ಧಾಂತ ಶಿಖಾಮಣಿ’ ಕನ್ನಡಿಗ ವನಿತೆಯರ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ಮಂಗಲ ಸಮಾರಂಭದಲ್ಲಿ ಶ್ರೀಕಾಶಿ ಜಗದ್ಗುರುಗಳ ನುಡಿ

Vijayanagara Vani
ಪೂರ್ಣತ್ವದ ದರ್ಶನವೇ ಶ್ರೀಸಿದ್ಧಾಂತ ಶಿಖಾಮಣಿ’ ಕನ್ನಡಿಗ ವನಿತೆಯರ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ಮಂಗಲ ಸಮಾರಂಭದಲ್ಲಿ ಶ್ರೀಕಾಶಿ ಜಗದ್ಗುರುಗಳ ನುಡಿ
?????????????

 

ವಾರಾಣಾಸಿ(ಉ.ಪ್ರ.): ದಟ್ಟವಾದ ಅನುಭಾವ ಸಿದ್ಧಾಂತದ ನೆಲೆಯಲ್ಲಿ ಬಯಲ ಬೆಳಗನ್ನು ಕಾಣುವ ಹಂಬಲಕ್ಕೆ ಪೂರಕವಾಗಿ ತನ್ನಂತರ0ಗವನ್ನು ಇಣಿಕಿ ನೋಡಲು ಅಗತ್ಯವಾದ ಪೂರ್ಣತ್ವದ ದರ್ಶನವೇ ಶ್ರೀಸಿದ್ಧಾಂತ ಶಿಖಾಮಣಿ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.

ಅವರು ಶನಿವಾರ ಉತ್ತರಪ್ರದೇಶದ ವಾರಾಣಾಸಿ ನಗರದ ತಮ್ಮ ಶ್ರೀಪೀಠದಲ್ಲಿ ಕರ್ನಾಟಕದ ಮತ್ತು ಗೋವಾ ರಾಜ್ಯದ ಕನ್ನಡಿಗ ವನಿತೆಯರು ನಡೆಸಿದ ವೀರಶೈವ ಧರ್ಮಗ್ರಂಥ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ಸಪ್ತಾಹದ ಮಂಗಲ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳ ಮೇರು ಮೆಟ್ಟಿಲುಗಳನ್ನೇರಿ ಸಾಕ್ಷಾತ್ಕಾರ ಸಂಪಾದನೆಯ ಅಂತಿಮ ಗುರಿ ಮುಟ್ಟುವಲ್ಲಿ ಮನುಕುಲಕ್ಕೆ ಶ್ರೇಷ್ಠ ಜೀವನ ವಿಧಾನ ಬೋಧಿಸಿದ ಶ್ರೀಸಿದ್ಧಾಂತ ಶಿಖಾಮಣಿಯು ಉತ್ಕೃಷ್ಟ ಶಾಸ್ತçಗ್ರಂಥವಾಗಿ ದಾರ್ಶನಿಕರೆಲ್ಲರ ಗಮನಸೆಳೆದಿದೆ ಎಂದೂ ಅವರು ಹೇಳಿದರು.

ಸಂಪೂರ್ಣ ಜನಕಲ್ಯಾಣದ ಬಯಕೆಯನ್ನೇ ಕೇಂದ್ರೀಕರಿಸಿರುವ ಮತ್ತು ಅನ್ಯ ಧರ್ಮಗಳನ್ನು ಅಲ್ಲಗಳೆಯದೇ ಇರುವ ಕೇವಲ ತತ್ವಪ್ರಧಾನವಾದ ಶ್ರೀಸಿದ್ಧಾಂತ ಶಿಖಾಮಣಿ ಗ್ರಂಥವು ಸಂಕುಚಿತ ವಾದ ಸ್ವಾರ್ಥದ ಪರಾಕಾಷ್ಠೆಯಿಂದ ಕೂಡಿದ ಪೂರ್ವಾಗ್ರಹ ಪೀಡಿತ ಮನಸ್ಸುಗಳಿಗೆ ಅರ್ಥವಾಗುವದಿಲ್ಲ ಎಂದೂ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕಿ ಕಮಲಾ ಪಾಂಡೆ ಮಾತನಾಡಿ, ಸಂಸ್ಕೃತ ಕಲಿಯದೇ ಇರುವ ಕರ್ನಾಟಕ ರಾಜ್ಯದ ಗ್ರಾಮೀಣ ಮಹಿಳೆಯರು ಶುದ್ಧ ಉಚ್ಛಾರಣೆಯೊಂದಿಗೆ ಶ್ರೀಸಿದ್ಧಾಂತ ಶಿಖಾಮಣಿಯ 21 ಪರಿಚ್ಛೇದಗಳ 1400 ಶ್ಲೋಕಗಳ ಪಾರಾಯಣವನ್ನು ನಿರರ್ಗಳವಾಗಿ ಮಾಡುತ್ತಿರುವುದು ಗಮನಸೆಳೆಯುತ್ತದೆ. ಕರ್ನಾಟಕ, ಮಹಾರಾಷ್ಟç, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ಉತ್ತರಪ್ರದೇಶ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ಮಾಢುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದು ಸಂತೋಷದ ಸಂಗತಿ ಎಂದರು.

ಮಹಿಳೆಯರಿಗೆ ನೇರವಾಗಿ ಇಲ್ಲವೇ ಆನ್‌ಲೈನ್ ಮೂಲಕ ಧಾರವಾಡದ ಕವಿತಾ ಗುರುಸಿದ್ಧಯ್ಯ ಹಿರೇಮಠ ಹಾಗೂ ಬೆಂಗಳೂರಿನ ಟಿ.ಎಸ್.ಇಂದುಕಲಾ ಅವರು ನೀಡಿದ ಮಾರ್ಗದರ್ಶನದಲ್ಲಿ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣವನ್ನು ಕಲಿತಿರುವ ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಬೆಂಗಳೂರು, ಮೈಸೂರು ಮತ್ತು ಗೋವಾ ರಾಜ್ಯದ ಸುಮಾರು 300 ಜನ ಮಹಿಳೆಯರು ಕಾಶಿ ಜ್ಞಾನ ಪೀಠದಲ್ಲಿದ್ದು ನಡೆಸಿದ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ಸಪ್ತಾಹವು ಯಶಸ್ವಿಯಾಗಿ ನೆರವೇರಿತು. ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಧಾರವಾಡದ ಕವಿತಾ ಹಿರೇಮಠ ಹಾಗೂ ಬೆಂಗಳೂರಿನ ಟಿ.ಎಸ್.ಇಂದುಕಲಾ ಸೇರಿದಂತೆ ಎಲ್ಲರನ್ನೂ ಗೌರವಿಸಿ ಆಶೀರ್ವದಿಸಿದರು.

Share This Article
error: Content is protected !!
";