ಬಳ್ಳಾರಿ,ಅ.15
ಬರುವ ಡಿಸೆಂಬರ್ ತಿಂಗಳಲ್ಲಿ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣ ಪ್ರಕಾಶ ಆರ್.ಪಾಟೀಲ ಅವರು ಹೇಳಿದರು.
ನಗರದ ಸುಧಾಕ್ರಾಸ್ ಬಳಿಯ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ, ಬಾಕಿ ಕಾಮಗಾರಿಗಳ ಕುರಿತು ವೈದ್ಯಾಧಿಕಾರಿಗಳೊಂದಿಗೆ ಸಭೆ ಜರುಗಿಸಿ ಅವರು ಮಾತನಾಡಿದರು.
450 ಹಾಸಿಗೆಯುಳ್ಳ ಈ ಆಸ್ಪತ್ರೆಯು 2008 ರಲ್ಲಿ ಮಂಜೂರಾಗಿತ್ತು. ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಆಸ್ಪತ್ರೆಯನ್ನು 2018 ರಲ್ಲಿ ಮರು ಟೆಂಡರ್ ಕರೆಯಲಾಗಿತ್ತು. ಈಗ ನಮ್ಮ ಸರ್ಕಾರಾವಧಿಯಲ್ಲೇ ಪೂರ್ಣಗೊಳಿಸಿ ಡಿಸೆಂಬರ್ ತಿಂಗಳಲ್ಲಿ ಉದ್ಘಾಟನೆಗೊಳಿಸಿ ಸಾರ್ವಜನಿಕರಿಗೆ ಅರ್ಪಿಸಲಾಗುವುದು ಎಂದರು.
11,204 ಲಕ್ಷ ಮೊತ್ತದ ಮೊದಲ ಹಂತ-1 ದ ಕಾಮಗಾರಿ ಶೇ.97 ರಷ್ಟು ಪೂರ್ಣಗೊಂಡಿದೆ. 2,438 ಲಕ್ಷದ ಎರಡನೇ ಹಂತದ ಕಾಮಗಾರಿಗಳೂ ಸಹ ಶೇ.96 ರಷ್ಟು ಮುಗಿದಿದ್ದು, ಈ ತಿಂಗಳ ಕೊನೆಯ ಹಂತದಲ್ಲಿ ವಿದ್ಯುತ್ ಕಾಮಗಾರಿ ಸೇರಿದಂತೆ ಬಾಕಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಕಾರ್ಡಿಯಾಲಜಿ, ಪ್ಲಾಸ್ಟಿಕ್ ಸರ್ಜರಿ, ಡಯಾಲಿಸಿಸ್ ಯಂತ್ರ, ಆರ್‌ಒ ಪ್ಲಾಂಟ್, ಬೆಡ್ ವ್ಯವಸ್ಥೆ ಹಾಗೂ ಇತರೆ ಸಾಮಾಗ್ರಿ ಅಳವಡಿಕೆ ಕಾರ್ಯ ಪೂರ್ಣಗೊಳಿಸಿ ಜನರಿಗೆ ಉಪಯುಕ್ತ ಆರೋಗ್ಯ ಸೇವೆ ನೀಡಲು ಮುಂದಾಗಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ನ್ಯೂರಾಲಜಿ ಸೇರಿದಂತೆ ಆಸ್ಪತ್ರೆಯಲ್ಲಿ ಖಾಲಿಯಿರುವ ವಿವಿಧ ವಿಭಾಗಗಳ ವೈದ್ಯರು ಮತ್ತು ಗ್ರೂಪ್-ಬಿ, ಸಿ ಹುದ್ದೆಗಳನ್ನು ಗುತ್ತಿಗೆ ಆಧಾರದಡಿ ಪಡೆಯಲು ಕೂಡಲೇ ಕ್ರಮವಹಿಸಬೇಕು ಎಂದು ನಿರ್ದೇಶಕರಿಗೆ ಸೂಚನೆ ನೀಡಿದರು.
ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಆಸ್ಪತ್ರೆಯು, ಅನುದಾನದ ಕೊರತೆಯಾದಲ್ಲಿ ಡಿಎಂಎಫ್, ಕೆಎಂಇಆರ್‌ಸಿ ಹಾಗೂ ಸಿಎಸ್‌ಆರ್ ಅನುದಾನಕ್ಕಾಗಿ ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು ಎಂದರು.
ಕಳೆದ 2 ತಿಂಗಳುಗಳಿoದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಇನ್ನೊಂದು ತಿಂಗಳಲ್ಲಿ ಒಳರೋಗಿ ವಿಭಾಗ ಆರಂಭಿಸಲಾಗುವುದು ಎಂದು ಬಿಎಂಸಿಆರ್‌ಸಿ ನಿರ್ದೇಶಕ ಡಾ.ಗಂಗಾಧರ ಗೌಡ ಅವರು ಸಚಿವರ ಗಮನಕ್ಕೆ ತಂದರು.
ವಿದ್ಯುತ್ ಪೂರೈಕೆಯ ಪರಿವರ್ತಕ ಅಳವಡಿಕೆ ಕಾರ್ಯ, ವಿವಿಧ ಅಗತ್ಯ ಸಾಮಾಗ್ರಿ-ಸಲಕರಣೆ ಪೂರೈಕೆ ಬಾಕಿ ಇದ್ದು, ಉಳಿದಂತೆ ಎಲ್ಲಾ ಕಾರ್ಯ ಮುಗಿದಿದ್ದು, ನವೆಂಬರ್ ತಿಂಗಳ ಅಂತ್ಯಕ್ಕೆ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಅಗತ್ಯ ಸೌಲಭ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂದು ಸಭೆಗೆ ತಿಳಿದರು.
ಸಭೆಯಲ್ಲಿ ಬಿಎಂಸಿಆರ್‌ಸಿ, ಟಿಬಿ ಆಸ್ಪತ್ರೆಗಳಲ್ಲಿ ಕೆಎಂಇಆರ್‌ಸಿ ಯೋಜನೆಯಡಿ ಕೈಗೊಂಡ ವಿವಿಧ ಕಾಮಗಾರಿಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡರಲ್ಲದೇ, ಇದೇ ವೇಳೆ ಅಗತ್ಯ ಸಲಹೆ ಸೂಚನೆ ನೀಡಿದರು.
*26 ಎಕರೆ ಪ್ರದೇಶದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ:*
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಗುರುತಿಸಿದ 26 ಎಕರೆ ಪ್ರದೇಶದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಡಿಪಿಆರ್ ಸಿದ್ಧವಿದ್ದು, ಸಮಿತಿಯಲ್ಲಿ ಅನುಮೋದನೆಗೊಂಡರೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಮಾಧ್ಯಮದವರಿಗೆ ತಿಳಿಸಿದರು.
ಬಳಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮುಸೇನ್, ಬೆಂಗಳೂರು ವೈದ್ಯಕೀಯ ನಿರ್ದೇಶನಾಲಯದ ನಿರ್ದೇಶಕಿ ಸುಜಾತ ರಾಠೋಡ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೇರ್ ಸೇರಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರು, ಪ್ರಾಂಶುಪಾಲರು, ವೈದ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.