ಹೈದರಾಬಾದ್: ಆಂಧ್ರಪ್ರದೇಶದ ಕರ್ನೂಲ್ ಹೆದ್ದಾರಿಯಲ್ಲಿ ಇಂದು ಶುಕ್ರವಾರ ಮುಂಜಾನೆ ಚಲಿಸುತ್ತಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡು ಪ್ರಾಥಮಿಕ ವರದಿಗಳ ಪ್ರಕಾರ, ಕನಿಷ್ಠ 32 ಜನರು ಮೃತಪಟ್ಟಿದ್ದಾರೆ, ಬಸ್ಸಿನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕರ್ನೂಲು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರ ಚಿನ್ನತೇಕೂರು ಗ್ರಾಮದ ಬಳಿ ಈ ದುರಂತ ಸಂಭವಿಸಿದ್ದು, ಖಾಸಗಿ ಟ್ರಾವೆಲ್ ಬಸ್ ಬೆಂಕಿಗೆ ಆಹುತಿಯಾಗಿ ಕನಿಷ್ಠ 20 ಪ್ರಯಾಣಿಕರು ಸಜೀವ ದಹನವಾಗಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.
ಕಾವೇರಿ ಟ್ರಾವೆಲ್ಸ್ ನಿರ್ವಹಿಸುತ್ತಿದ್ದ ನೋಂದಣಿ ಸಂಖ್ಯೆ DD09 N9490 ನ್ನು ಹೊಂದಿರುವ ಈ ದುರದೃಷ್ಟಕರ ಬಸ್ ಬೆಂಗಳೂರಿನಿಂದ ಹೈದರಾಬಾದ್ಗೆ ತೆರಳುತ್ತಿದ್ದಾಗ ಇಂದು ನಸುಕಿನ ಜಾವ 3:30 ರ ಸುಮಾರಿಗೆ ಚಿನ್ನತೇಕೂರು ಗ್ರಾಮದ ಬಳಿ ದ್ವಿಚಕ್ರ ವಾಹನವೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಅಪಘಾತದ ಪರಿಣಾಮವಾಗಿ ಬೈಕ್ ವಾಹನದ ಕೆಳಗೆ ಸಿಲುಕಿಕೊಂಡಿತು, ಕೂಡಲೇ ಬೆಂಕಿ ಹತ್ತಿಕೊಂಡು ಇಡೀ ಬಸ್ಸನ್ನು ವ್ಯಾಪಿಸಿ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಯಿತು.
ಘಟನೆಯ ಸಮಯದಲ್ಲಿ ಬಸ್ನಲ್ಲಿ ಸುಮಾರು 42 ಪ್ರಯಾಣಿಕರಿದ್ದರು. ತುರ್ತು ನಿರ್ಗಮನ ಮತ್ತು ಕಿಟಕಿ ಗಾಜುಗಳನ್ನು ಒಡೆದು 12 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದರೆ, ಬೆಂಕಿಯು ವಾಹನವನ್ನು ಸುಟ್ಟುಹಾಕಿದ್ದರಿಂದ ಹಲವರು ಒಳಗೆ ಸಿಲುಕಿಕೊಂಡರು.
ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಭೇಟಿ, ಬಸ್ ಚಾಲಕ, ನಿರ್ವಾಹಕ ಪರಾರಿ
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದಾಗ್ಯೂ, ಪ್ರದೇಶದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯಾಯಿತು. ಅಪಘಾತದ ನಂತರ ಬಸ್ ಚಾಲಕ ಸೇರಿದಂತೆ ಬಸ್ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿ, ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಂಡವು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಿಎಂ ಕಂಬನಿ
ಪ್ರಸ್ತುತ ದುಬೈಗೆ ಅಧಿಕೃತ ಭೇಟಿಯಲ್ಲಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ, ಅವರು ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿದರು. ಉನ್ನತ ಆಡಳಿತ ಸಿಬ್ಬಂದಿಗೆ ಅಪಘಾತ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳನ್ನು ನೋಡಿಕೊಳ್ಳಲು ನಿರ್ದೇಶನ ನೀಡಿದ್ದಾರೆ.
ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ನೆರವು ಒದಗಿಸುವಂತೆ ಮತ್ತು ಮೃತರ ಕುಟುಂಬಗಳಿಗೆ ಬೆಂಬಲ ನೀಡಬೇಕೆಂದು ಮುಖ್ಯಮಂತ್ರಿ ಸೂಚನೆ ನೀಡಿದರು. ಹೆಚ್ಚಿನ ಸಾವುನೋವುಗಳನ್ನು ತಡೆಗಟ್ಟಲು ತ್ವರಿತ ಕ್ರಮ ಕೈಗೊಳ್ಳುವ ಅಗತ್ಯವನ್ನು ಹೇಳಿದ್ದು, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಸಚಿವರಾದ ಬಿ.ಸಿ. ಜನಾರ್ದನ ರೆಡ್ಡಿ ಮತ್ತು ಕೆ. ಅಚ್ಚನ್ನಾಯ್ಡು ಕೂಡ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.





