ಶಿವಮೊಗ್ಗ, ಅಕ್ಟೋಬರ್.29 ಸರ್ಕಾರಿ ನೌಕರಿ ಎಂದರೆ ಜನಸೇವೆ ಮಾಡಲು ಸಿಕ್ಕ ಅವಕಾಶವೇ ಹೊರತು ಅಧಿಕಾರ ಸಾಧಿಸುವ ವೇದಿಕೆ ಅಲ್ಲ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರ ಮನೋಭಾವ ಬದಲಾಗಬೇಕು. ಆಗ ಮಾತ್ರ ಸರ್ಕಾರಿ ಇಲಾಖೆಗಳಲ್ಲಿ ಶೇ.50 ರಷ್ಟಾದರು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ನಾಯಕ್ ರವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ಲೋಕಾಯುಕ್ತ ಇವರ ಸಂಯುಕ್ತಾಶ್ರಯದಲ್ಲಿ ಜಿ.ಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಆಯೋಜಿಸಿದ್ದ “ಭ್ರಷ್ಟಾಚಾರದ ವಿರುದ್ದ ಜಾಗೃತಿ ಅರಿವು ಸಪ್ತಾಹ-2025” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಡತನ, ನಿರುದ್ಯೋಗ ಹಾಗೂ ಭ್ರಷ್ಟಾಚಾರದ ಅಂಶಗಳು ನಮ್ಮ ದೇಶದ ಅಭಿವೃದ್ದಿಗೆ ಕಂಟಕವಾಗಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅದರ ಅನುಗುಣವಾಗಿ ಉದ್ಯೋಗದ ಅವಕಾಶ ಹಾಗೂ ಅದಕ್ಕೆ ಬೇಕಾದ ಸಂಪನ್ಮೂಲಗಳ ಕೊರತೆಯು ಉಂಟಾಗುತ್ತಿದ್ದು, ಅದಕ್ಕಾಗಿ ಪೈಪೋಟಿ ನಡೆಯುತ್ತಿದೆ. ಈ ಕಾರಣದಿಂದಲೇ ಅಧಿಕಾರಿಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ ಎಂದರು.
ಭ್ರಷ್ಟಾಚಾರ ನಿಗ್ರಹ ಕಾನೂನುಗಳಲ್ಲೆ ಬಹಳಷ್ಟು ಲೋಪಗಳಿದ್ದು, ಕಾನೂನು ಮೂಲಕ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದರ ಉಪಯೋಗವನ್ನು ಭ್ರಷ್ಟಾಚಾರದಲ್ಲಿ ತೊಡಗಿರುವವರೇ ಹೆಚ್ಚಾಗಿ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲಿ ಶೇ.90 ರಷ್ಟು ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಪಕ್ಷಗಾರರಾಗಿದ್ದು, ಭ್ರಷ್ಟಾಚಾರಕ್ಕೆ ಇದು ಕೂಡ ಕಾರಣವಾಗಿದೆ. ಹಾಗಾಗಿ ಇದರ ಸಂಪೂರ್ಣ ನಿರ್ಮೂಲನೆ ಅಸಾಧ್ಯವಾಗಿದೆ. ಆದರಿಂದ ಸರ್ಕಾರಿ ನೌಕರರಿಗೆ ಭ್ರಷ್ಟಾಚಾರ ಕುರಿತು ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್.ಎA.ಎಸ್ ಮಾತನಾಡಿ, ಸರ್ಕಾರಿ ನೌಕರರ ನಗದು ವ್ಯವಹಾರ ಪ್ರಶ್ನಾರ್ಥವಾಗಿದೆ. ಹಾಗಾಗಿ ಸರ್ಕಾರಿ ನೌಕರರು 20 ಸಾವಿರಕ್ಕಿಂತ ಅಧಿಕವಾಗಿ ಖರ್ಚು ಮಾಡುವುದಾದರೆ ಅದನ್ನು ಬ್ಯಾಂಕ್ ಮೂಲಕ ಮಾಡಬೇಕು. ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯವು ಕೂಡ ಸರ್ಕಾರಿ ನೌಕರರು 20 ಸಾವಿರಕ್ಕಿಂತ ಅಧಿಕ ನಗದು ವ್ಯವಹಾರ ಮಾಡಿದರೆ ಅದನ್ನು ಆದಾಯ ತೆರಿಗೆ ಇಲಾಖೆಯ ತನಿಖೆ ಒಳಪಡಿಸಬೇಕೆಂದು ತಿಳಿಸಿದೆ ಎಂದರು.
ಸರ್ಕಾರಿ ನೌಕರರು ತಮ್ಮ ಹೆಂಡತಿ, ಮಕ್ಕಳ ಆದಾಯ ಇದ್ದರೆ ಅದನ್ನು ವರದಿ ಮಾಡಿ. ಹೊಸದಾಗಿ ಅಧಿಕಾರ ವಹಿಸಿಕೊಳ್ಳುವ ಇಲಾಖೆಯಲ್ಲಿ ಹಿಂದಿನ ಅಧಿಕಾರದ ಅವಧಿಯಲ್ಲಿ ಮಾಡಿದ ಲೋಪದ ಬಗ್ಗೆ ಲೋಕಾಯುಕ್ತರು ನಿಮ್ಮನ್ನು ಪ್ರಶ್ನಿಸಿದರೆ ಅದಕ್ಕೆ ಹಾರಿಕೆ ಉತ್ತರ ನೀಡದೆ ಹಿಂದಿನ ಅಧಿಕಾರದಲ್ಲಿದ್ದ ಅಧಿಕಾರಿಯ ಸಂಕ್ಷೀಪ್ತ ಮಾಹಿತಿಯನ್ನು ಲೋಕಾಯುಕ್ತರಿಗೆ ಒದಗಿಸಿ ಹಾಗೂ ನೀವು ಯಾವಾಗ ಅಧಿಕಾರ ವಹಿಸಿಕೊಂಡಿದ್ದಿರಾ ಎಂಬ ಮಾಹಿತಿಯನ್ನು ಕೂಡ ನೀಡಿ ಎಂದು ಹೇಳಿದರು.
ಅಧಿಕಾರಿಗಳು ತಮ್ಮ ಖಾಸಗಿ ಜೀವನದಲ್ಲಿ ಬೇರೆ ಇಲಾಖೆಯ ಬಗ್ಗೆ ನಕರಾತ್ಮಕವಾಗಿ ಮಾತನಾಡಬಾರದು. ಇದರಿಂದ ಸರ್ಕಾರಿ ಅಧಿಕಾರಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಅಧಿಕಾರಿಗಳು ತಮ್ಮ ಖಾಸಗಿ ಜೀವನದಲ್ಲಿ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರ ಅಧ್ಯಕ್ಷ ಭಾಷಣದಲ್ಲಿ ಭ್ರಷ್ಟಾಚಾರದ ನಿರ್ಮೂಲನೆ ಆರಂಭವಾಗಬೇಕಿರುವುದು ಉನ್ನತ ಅಧಿಕಾರಿಗಳ ಖುರ್ಚಿಯಿಂದ. ಸರ್ಕಾರಿ ವ್ಯವಸ್ಥೆ ಹಾಗೂ ಸರ್ಕಾರಿ ನೌಕರರ ತಮ್ಮ ಖುರ್ಚಿಯನ್ನು ಶುದ್ಧವಾಗಿಕೊಟ್ಟುಕೊಳ್ಳಬೇಕು. ಆಗ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಶುದ್ದವಾಗಿದ್ದರೆ ವ್ಯವಸ್ಥೆಯು ಶುದ್ದವಾಗಿರುತ್ತದೆ ಎಂದು ಸಲಹೆ ನೀಡಿದರು.
ಹಣ ಹಾಗೂ ಅಧಿಕಾರದ ಪ್ರಭಾವದಿಂದ ಭ್ರಷ್ಟಾಚಾರ ಆರಂಭವಾಗುತ್ತದೆ. ಇದರಿಂದ ಬಡವರಿಗೆ ಹಾಗೂ ದುರ್ಬಲರಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಅಧಿಕಾರಿಗಳು ಯಾರ ಪ್ರಭಾವಕ್ಕೆ ಒಳಗಾಗದೆ ಕಾನೂನು ಹಾಗೂ ಕಾಯ್ದೆಯ ಅಡಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಹೇಮಂತ್.ಎನ್. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಹನುಮಂತಪ್ಪ ಕೆ.ಟಿ, ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಮಂಜುನಾಥ ಚೌದರಿ ಎಂ.ಹೆಚ್, ಹಾಗೂ ಉಪಾಧೀಕ್ಷರಾದ ಬಿ.ಪಿ.ಚಂದ್ರಶೇಖರ್, ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಲೋಕಾಯುಕ್ತ ಪೊಲೀಸ್ ನಿರೀಕ್ಷಕ ರುದ್ರೇಶ್.ಕೆ.ಪಿ. ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.




