ಬೆಂಗಳೂರು, ಮೇ 14: ಈ ವರ್ಷ ಮಳೆ ಇಲ್ಲದ ಕಾರಣ ನಿರೀಕ್ಷಿತ ಮಾವು ಫಸಲು ಬಾರದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನಲ್ಲಿ ಮಾವು ಮೇಳ ನಡೆಯುವುದು ಡೌಟು ಎನ್ನಲಾಗಿತ್ತು. ಪರಿಸ್ಥಿತಿ ಹೀಗಿದ್ದರೂ ಸಹಿತ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ‘ಮಾವು ಮೇಳ’ (Bengaluru Mango Fair 2024) ಆಯೋಜನೆ ಮಾಡುವುದಾಗಿ ತಿಳಿಸಿದೆ.
ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ ಉದ್ಯಾನದಲ್ಲಿ ಇದೇ ತಿಂಗಳ ಮೇ 24ರಿಂದ ಜೂನ್ 10 ರವರೆಗೆ ಈ ಮಾವು ಮಹಾಮೇಳ ನಡೆಯಲಿದೆ. ಮಾವಿನ ಜೊತೆಗೆ ಹಲಸಿನ ಮೇಳವು ಜರುಗಲಿದೆ. ವಿವಿಧ ತರಹೇವಾರಿ ರುಚಿ, ತಳಿಯ ಮಾವಿನ ಹಣ್ಣುಗಳು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರಲಿವೆ.
ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಧಾರವಾಡದಂತಹ ದೂರದ ಜಿಲ್ಲೆಗಳಿಂದಲೂ ಮಾವು ಬೆಳೆಗಾರರು ತಾವು ಬೆಳೆದ ಮಾವಿನ ಸಮೇತ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಿಗಮ ಮಾಹಿತಿ ನೀಡಿದೆ. ಅನೇಕ ಜಾತಿಯ ಹಣ್ಣುಗಳು ಮಾರಾಟ ಬೆಂಗಳೂರು ಮಾವು ಮೇಳದಲ್ಲಿ ‘ರಸಪುರಿ, ಮಲಗೋವಾ, ಸೆಂಧೂರ, ನೀಲಂ, ಮಲ್ಲಿಕಾ, ತೋತಾಪುರಿ’ ಸೇರಿದಂತೆ ಅನೇಕ ತಳಿಯ ಮಾವಿನ ಹಣ್ಣುಗಳನ್ನು ಸವಿಯಬಹುದಾಗಿದೆ. ಅಷ್ಟೇ ಅಲ್ಲದೇ ಅಪ್ಪೆಮಿಡಿ ಉಪ್ಪಿನಕಾಯಿ, ಮಿಡಿ ಉಪ್ಪಿನಕಾಯಿ ಅನೇಕ ಬಗೆಯ ಉಪ್ಪಿನಕಾಯಿಗಳನ್ನು ಇಲ್ಲಿ ಖರೀದಿಸಬಹುದಾಗಿದೆ.
ಈ ವರ್ಷ ಮಳೆ ಕೊರತೆ, ಬರಗಾಲ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಮಾವಿನ ಇಳುವರಿ ಬಂದಿಲ್ಲ. ಶೇಕಡಾ 30ರಷ್ಟು ಮಾತ್ರವೇ ಮಾವಿನ ಬೆಳೆ ಕೈಗೆ ಸಿಕ್ಕಿದೆ. ಹೀಗಾಗಿ ಮಾರುಕಟ್ಟೆಯಲ್ಲಿಯೂ ಮಾವು ಮಾರಾಟ, ಖರೀದಿ ಭರಾಟೆ ಕಂಡು ಬಂದಿಲ್ಲ. ಹೆಚ್ಚಿನ ಪ್ರಮಾಣದ ಮಾವು ಬಾರದ ಕಾರಣ ಈ ಬಾರಿ ಹಣ್ಣು ತುಟ್ಟಿಯಾಗಿದೆ. ಹೀಗಾಗಿ ಜನರು ಖರೀದಿಗೂ ಹಿಂದೆ ನೋಡುವ ಸ್ಥಿತಿ ಎದುರಾಗಿದೆ.
ರಿಯಾಯಿತಿ ಬೆಲೆಗೆ ಹಣ್ಣು ಸಿಗುತ್ತಾ? ಪ್ರತಿ ವರ್ಷದಂತೆ ಈ ವರ್ಷವು ಲಾಲ್ ಬಾಗ್ ಉದ್ಯಾನದಲ್ಲಿ ಮಾವು ಮೇಳ ನಡೆಯುತ್ತಿದೆ. ಆದರೆ ಈ ಭಾರಿ ಇಳುವರಿ ಕಡಿಮೆ ಕಾರಣಕ್ಕೆ ರೈತರಿಂದ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾವು ಲಭ್ಯವಾಗುವುದು ಅನುಮಾನ ಎನ್ನಲಾಗುತ್ತಿದೆ. ಈ ಕುರಿತು ಸ್ಪಷ್ಟತೆ ಮೇಳದಲ್ಲಿ ಸಿಗುವ ಸಾಧ್ಯತೆ ಇದೆ.
ಮಾವಿನ ಜೊತೆ ಹಲಸು ಮೇಳ ಅನೇಕ ಜಾತಿ ಮಾವಿನ ಹಣ್ಣುಗಳ ಜೊತೆಗೆ ಹಲಸಿನ ಹಣ್ಣುಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ. ರೈತರ ತಮ್ಮ ತೋಟದಲ್ಲಿ ಬೆಳೆದ ಮಾವು ಜೊತೆಗೆ ಹಲಸಿನ ಹಣ್ಣುಗಳ ಲೋಡ್ ಸಮೇತರಾಗಿ ಮೇಳಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಹಲಸಿನ ಹಣ್ಣು, ಇನ್ನಿತರ ಹಲಸಿನ ಕಾಯಿಯಿಂದ ಮಾಡಿದ ಆಹಾರ ಪದಾರ್ಥಗಳ ಪ್ರದರ್ಶನ ಮಾರಾಟ ಇಲ್ಲಿರಲಿದೆ. ಸದ್ಯ ಮಾಹಿತಿ ಪ್ರಕಾರ, ಮೇಳದಲ್ಲಿ ಎಷ್ಟು ಮಳಿಗೆಗಳು ಇರುತ್ತವೆ. ಪಾರ್ಕಿಂಗ್ ವ್ಯವಸ್ಥೆ ಹಾಗೂ ಇನ್ನಿತರ ಮೂಲಸೌಕರ್ಯಗಳ ಕುರಿತು ಮಾಹಿತಿ ತಿಳಿಯಬೇಕಿದೆ.