ಬಳ್ಳಾರಿ, ಮೇ 16: ಈ ಬಾರಿಯ ಬೇಸಿಗೆಗೆ ಜನರು ಕಂಗೆಟ್ಟಿದ್ದಾರೆ. ಮಲೆನಾಡು, ಕರಾವಳಿ ಎಂಬ ವ್ಯತ್ಯಾಸವಿಲ್ಲದೇ ಎಲ್ಲಾ ಜಿಲ್ಲೆಗಳಲ್ಲೂ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಮತ್ತೊಂದು ಕಡೆ ಕಾಡಿನಲ್ಲಿರುವ ಪ್ರಾಣಿಗಳು ಸಹ ನೀರು, ಮೇವು ಸಿಗದೇ ಪರದಾಡಿವೆ.
ಈ ವರ್ಷ ಸುದೀರ್ಘ ಬೇಸಿಗೆಯ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎರಡೂ ವಲಯಗಳಲ್ಲಿ ನೀರಿನ ಕೊರತೆ ನೀಗಿಸಲು ಅರಣ್ಯ ಇಲಾಖೆಯು ಇಡೀ ತಾಲೂಕಿನ ಎಲ್ಲಾ ಕಾಡುಗಳ ಆಯಕಟ್ಟಿನ ಸ್ಥಳಗಳಲ್ಲಿ ವಿಶಾಲವಾದ ನೀರು ತೊಟ್ಟಿಗಳನ್ನು ನಿರ್ಮಿಸಿ ಕಾಲಕಾಲಕ್ಕೆ ನೀರು ತುಂಬಿಸಿತು
ಬಳ್ಳಾರಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಮಾತನಾಡಿ, “ಈ ನೀರಿನ ತೊಟ್ಟಿಗಳಿಂದಾಗಿ ಮೊದಲ ಬಾರಿಗೆ ತಾಲೂಕಿನಲ್ಲಿ ಮಾನವ ಮತ್ತು ವನ್ಯ ಪ್ರಾಣಿಗಳ ನಡುವಿನ ಸಂಘರ್ಷವನ್ನು ತಪ್ಪಿಸಲಾಗಿದೆ” ಎಂದು ಹೇಳಿದರು.
ಹಲವು ಪ್ರಾಣಿ, ಪಕ್ಷಿಗಳಿವೆ: ಸಂಡೂರಿನ ಕಾಡುಗಳಲ್ಲಿ ಚಿರತೆ, ಕರಡಿ, ಕೊಂಡುಕುರಿ, ಕಾಡುಹಂದಿ, ಮುಳ್ಳುಹಂದಿ, ತಾಳೆ ಪುನುಗು, ಚುಕ್ಕೆ ಪುನುಗು, ಕೆಂಪು ಮೂತಿಯ ಮಂಗ, ಕೋಡುಗ, ಮುಂಗುಸಿ ಮುಂತಾದ ಸಸ್ತನಿಗಳು, ವಿವಿಧ ಸರಿಸೃಪಗಳು ಹಾಗೂ ಅಪಾರ ಸಂಖ್ಯೆಯ ಹಕ್ಕಿಗಳಿವೆ.
ಬೇಸಿಗೆಯಲ್ಲಿ ನೀರಿನ ಅವಶ್ಯಕತೆ ಹೆಚ್ಚು ಇದ್ದು, ಕಾಡಿನಲ್ಲಿರುವ ಕೆರೆ ಕಟ್ಟೆಗಳು, ಚೆಕ್ಡ್ಯಾಂಗಳಲ್ಲಿ ನೀರು ಬತ್ತಿಹೋದ ನಂತರ ಪ್ರಾಣಿ, ಪಕ್ಷಿಗಳು ನೀರನ್ನು ಅರಸಿ ಕೃಷಿಭೂಮಿ ಹಾಗೂ ಜನ ವಸತಿ ಪ್ರದೇಶದ ಕಡೆಗೆ ಬಂದಾದ ಮನುಷ್ಯನ ಮೇಲೆ ಉದ್ದೇಶ ಪೂರ್ವಕವಲ್ಲದ ದಾಳಿ ನಡೆಯುವ ಸಾಧ್ಯತೆ ಹೆಚ್ಚಿತ್ತು. ಇದನ್ನು ತಪ್ಪಿಸಲು ಅರಣ್ಯ ಇಲಾಖೆ ವತಿಯಿಂದ ತೊಟ್ಟಿಗಳನ್ನು ನಿರ್ಮಿಸಿ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗಿದೆ. ತಾಲೂಕಿನ ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ ಅನೇಕ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿ ನೀರು ತುಂಬಿಸಲಾಗಿದೆ. ಇದರಿಂದಾಗಿ ಎಲ್ಲಾ ಪ್ರಾಣಿಗಳು ತೊಟ್ಟಿಗಳ ನೀರನ್ನು ಕುಡಿದು ಕಾಡಿನಲ್ಲಿಯೇ ಉಳಿಯಲು ಸಾಧ್ಯವಾಗಿದೆ.
ವನ್ಯಜೀವಿ ಸಂಶೋಧಕ ಡಾ. ಸಮದ್ ಕೊಟ್ಟೂರು ಅವರು ನೀರಿನ ತೊಟ್ಟಿಗಳ ಹಾಗೂ ಸುತ್ತಮುತ್ತ ಕಾಡು ಪ್ರಾಣಿಗಳ ಚಲನವಲನ ಅಧ್ಯಯನ ಮಾಡಿ ಆಯ್ದ ನೀರಿನ ತೊಟ್ಟಿಗಳ ಸುತ್ತಮುತ್ತ ಸುಮಾರು 30 ಕ್ಯಾಮೆರಾ ಟ್ರಾಪ್ಗಳನ್ನು ಕಟ್ಟಿ ಅಲ್ಲಿಗೆ ಬರುವ ಪ್ರಾಣಿಗಳನ್ನು ದಾಖಲಿಸಿದ್ದಾರೆ. ಗಣಿ ಪ್ರದೇಶದ ಸುತ್ತಲೂ ಸಹ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಅಲ್ಲಿಯೂ ಸಹ ಎಲ್ಲಾ ವನ್ಯಜೀವಿಗಳ ಸಂಚರಿಸಿ
ಈ ತೊಟ್ಟಿಗಳ ನೀರನ್ನು ಕುಡಿಯುವುದನ್ನು ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗುವುದು. ಅಲ್ಲದೇ ವನ್ಯಜೀವಿಗಳು ಸೇವಿಸುವ ಸ್ಥಳೀಯ ಹಣ್ಣಿನ ಮರಗಿಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಿ, ಅರಣ್ಯದ ಜೀವ ವೈವಿಧ್ಯತೆಯನ್ನು ಹೆಚ್ಚಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಹೇಳಿದ್ದಾರೆ. ಗಿರೀಶ್ ಕುಮಾರ್, ವಲಯ ಅರಣ್ಯಾಧಿಕಾರಿ, ಸಂಡೂರು ದಕ್ಷಿಣ ವಲಯ ಮಾತನಾಡಿ, “ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಮಾರ್ಗದರ್ಶನದಲ್ಲಿ ಸಂಡೂರು ದಕ್ಷಿಣ ವಲಯ ಆಯಕಟ್ಟಿನ ಸ್ಥಳದಲ್ಲಿ ಹೊಸದಾಗಿ 35 ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಕಳೆದ 5 ತಿಂಗಳಿಂದ ಅವುಗಳಲ್ಲಿ ಕಾಲಕಾಲಕ್ಕೆ ನೀರನ್ನು ತುಂಬಿಸಲಾಗುತ್ತಿದೆ. ಇದರಿಂದ ನಮ್ಮ ವಲಯದಲ್ಲಿ ಮಾನವ ವನ್ಯಜೀವಿ ಸಂಘರ್ಷ ಕಡಿಮೆಯಾಗಿದೆ” ಎಂದರು. ಸಯ್ಯದ್ ದಾದಾ ಖಲಂದರ್, ವಲಯ ಅರಣ್ಯಾಧಿಕಾರಿ, ಸಂಡೂರು ಉತ್ತರ ವಲಯ ಮಾತನಾಡಿ,”ಸಂಡೂರು ಉತ್ತರ ವಲಯದಲ್ಲಿ ಈ ವರ್ಷ 15 ನೀರಿನ ತೊಟ್ಟಿಗಳನ್ನು ಕಾಡಿನ ಮಧ್ಯೆ ನಿರ್ಮಿಸಲಾಗಿದ್ದು, ಎಲ್ಲಾ ನೀರಿನ ತೊಟ್ಟಿಗಳಿಗೆ ಕರಡಿ, ಚಿರತೆ, ಕೊಂಡು ಕುರಿ, ವಾನರಗಳು, ಹಕ್ಕಿಗಳು ಭೇಟಿ ನೀಡಿ ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಿರುವುದು ತುಂಬಾ ಹರ್ಷದ ಸಂಗತಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಕಾಲ ಕಾಲಕ್ಕೆ ನೀರು ತುಂಬಿಸಲಾಗುವುದು” ಎಂದು ಹೇಳಿದರು.