ಭಾರತದ ದ ಮೊದಲ ಪ್ರಧಾನಿ ಜವಾಹರಲಾಲ್ ನೆಹರುಅವರು ‘ಅಣೆಕಟ್ಟುಗಳು ಆಧುನಿಕ ಭಾರತದ ನವ ದೇಗುಲಗಳು‘ ಎಂದು ಬಣ್ಣಿಸಿದ್ದರು. ಇತ್ತೀಚಿನ ಮಾಹಿತಿಯಂತೆ ಭಾರತದಲ್ಲಿ ಸುಮಾರು 3200 ಅಣೆಕಟ್ಟು, ಬ್ಯಾರೇಜ್ಗಳಿವೆ. ಸಟ್ಲೆಜ್ ನದಿಗೆ ಅಡ್ಡವಾಗಿ ನಿರ್ಮಿಸಿರುವ ಸಾಗರ ಅಣೆಕಟ್ಟು ಸ್ವತಂತ್ರ ಭಾರತದ ಮೊದಲ ಅಣೆಕಟ್ಟು ಭಾಕ್ರಾ ಅಥವಾ ಗೋವಿಂದ. 225.55 ಮೀಟರ್ ಎತ್ತರದ (518.25 ಮೀಟರ್ ಅಗಲ) ಇದು ದೇಶದ ಎರಡನೇ ಅತಿದೊಡ್ಡ ಅಣೆಕಟ್ಟು ಕೂಡ. 260 ಮೀಟರ್ ಎತ್ತರ, 575 ಮೀಟರ್ ಅಗಲದ ತೆಹ್ರಿ ಅಣೆಕಟ್ಟು ಭಾರತದ ಮೊದಲ ದೊಡ್ಡ ಅಣೆಕಟ್ಟು. ಇದು ಉತ್ತರಾಖಂಡದಲ್ಲಿದ್ದು ಭಾಗೀರಥಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ.
ಕೆಆರ್ಎಸ್ ಎಂದು ಸಂಕ್ಷಿಪ್ತವಾಗಿ ಹೇಳಲಾಗುವ ಕೃಷ್ಣರಾಜ ಸಾಗರ ಕರ್ನಾಟಕದಮೊದಲ ಅಣೆಕಟ್ಟು. ಇದು ಸರ್ ಎಂ .ವಿಶ್ವೇಶ್ವರನ್ನು ಅವರ ಪರಿಶ್ರಮದಿಂದ ಮತ್ತು ಶ್ರೀ ನಾಲ್ಮಡಿ ಕೃಷ್ಣರಾಜ ಒಡಿಯರ್ ಅವರ ಪ್ರೊತ್ಸಾಹದಿಂದ ಆದುದು. ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಅಣೆಕಟ್ಟು 1932ರಲ್ಲಿ ಕಾರ್ಯಾರಂಭ ಮಾಡಿತು. ಇದರ ಎತ್ತರ 124.80 ಅಡಿ. ಉದ್ದ 3.5 ಕಿ.ಮೀಟರ್.
ತುಂಗಭದ್ರಾ ಅಣೆಕಟ್ಟು, ಕೃಷ್ಣಾ ನದಿಯ ಉಪನದಿಯಾದ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಅಣೆಕಟ್ಟು ಕರ್ನಾಟಕದ ಹೊಸಪೇಟೆ ನಗರದ ಹತ್ತಿರದಲ್ಲಿದೆ. ಇದು ನೀರಾವರಿ ಸೇವೆಯ ವಿವಿಧೋದ್ದೇಶವುಳ್ಳ ಅಣೆಕಟ್ಟು., ವಿದ್ಯುತ್, ಪ್ರವಾಹ ನಿಯಂತ್ರಣ, ಇತ್ಯಾದಿ ಈ ಹಿಂದಿನ ಹೈದರಾಬಾದ್ ರಾಜ್ಯದ ಹಿಂದಿನ ಮದ್ರಾಸ್ ಪ್ರಾಂತ್ಯದ ಜಂಟಿ ಯೋಜನೆಯಲ್ಲಿ ನಿರ್ಮಾಣ ಆರಂಭಿಸಿದರು. ನಂತರ 1953 ರಲ್ಲಿ ಅದು ಕರ್ನಾಟಕ ಮತ್ತು ಆಂಧ್ರ ಪ್ರದೇಶ ಜಂಟಿ ಯೋಜನೆಯ ಆಯಿತು.
ಬಳ್ಳಾರಿ ಜಿಲ್ಲೆ ಹೊಸಪೇಟೆ ಬಳಿ ಕರ್ನಾಟಕ– ಆಂಧ್ರಪ್ರದೇಶ ಸರ್ಕಾರಗಳು ಜಂಟಿಯಾಗಿ ನಿರ್ಮಿಸಿರುವ ತುಂಗಭದ್ರಾ ಅಣೆಕಟ್ಟೆ ರಾಜ್ಯದ ಅತಿ ದೊಡ್ಡ ಅಣೆಕಟ್ಟೆ ಎನ್ನುವ ಹಿರಿಮೆಗೆ ಪಾತ್ರವಾಗಿದೆ. 2441ಮೀಟರ್ ಉದ್ದ ಹಾಗೂ38 ಮೀಟರ್ ಎತ್ತರ ಹೊಂದಿರುವ ತುಂಗಭದ್ರಾ ಅಣೆಕಟ್ಟು ನೀರಾವರಿ ಉದ್ದೇಶದಿಂದ ನಿರ್ಮಾಣಗೊಂಡಿದೆ. ಇದು ಹೊಸಪೇಟೆಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. 33 ಬಹುದೊಡ್ಡ ಗೇಟುಗಳನ್ನು ಹೊಂದಿರುವ ತುಂಗಭದ್ರಾ ಅಣೆಕಟ್ಟು ಬಹುದೊಡ್ಡ ಗಾತ್ರವನ್ನು ಹೊಂದಿದೆ. ಈ ಅಣೆಕಟ್ಟಿನಿಂದ ಸಂಗ್ರಹಿಸಲಾದ ನೀರನ್ನು ಕಾಲುವೆಗಳ ಮೂಲಕ ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ ಹಾಗೂ ಆಂದ್ರಪ್ರದೇಶದ ಕರ್ನೂಲು, ಮೆಹಬೂಬ್ ನಗರ ಮುಂತಾದ ಜಿಲ್ಲೆಗಳಿಗೆ ನಿರಾವರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ.
ಬಳ್ಳಾರಿ ಜಿಲ್ಲೆಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಯ ಥಾಮಸ್‘ ಮುನ್ರೋ ಅನಂತಪುರ ಜಿಲ್ಲೆಯನ್ನು ಒಡೆದು ಅದರ ಭಾಗ ಬಳ್ಳಾರಿ ಜಿಲ್ಲೆಯನ್ನು ಹೈದರಾಬಾದ್ ನಿಜಾಮನಿಂದ ಕಿತ್ತುಕೊಂಡು ತಮ್ಮ ಅಧೀನದಲ್ಲಿದ್ದ ಮದ್ರಸ್ ಪ್ರಾಂತ್ಯಕ್ಕೆ ಸೇರಿಸಿಕೊಂಡನು. ಕ್ರಿ.ಶ 1882 ಪಾಳೇಗಾರ ಹಂಡೆ ನಾಯಕರ ಆಡಳಿತ ಕೊನೆಗೊಳಿಸಿ ರೈತವಾರಿ ಭೂಕಂದಾಯ ಪದ್ದತಿ ತಂದನು. ಭಾಷೆಯ ಆಧಾರದ ಮೇಲೆ ರಾಜ್ಯಗಳ ವಿಂಗಡಣೆಯಾದಾಗ, 1 ಅಕ್ಟೋಬರ್ 1953 ರಲ್ಲಿ, ಕನ್ನಡ ಮಾತನಾಡುವ ಗಮನಾರ್ಹ ಜನಸಂಖ್ಯೆಯ ಪ್ರದೇಶವಾದ ಬಳ್ಳಾರಿಜಿಲ್ಲೆಯನ್ನು ಮದ್ರಾಸ್ ಪ್ರಾಂತ್ಯದಿಂದ ಮೈಸೂರು ರಾಜ್ಯಕ್ಕೆ ವರ್ಗಾಯಿಸಲಾಯಿತು. ನಂತರ ಮೈಸೂರು ರಾಜ್ಯ ಕರ್ನಾಟಕ ರಾಜ್ಯ ವಾಯಿತು.
ಬಳ್ಳಾರಿ, ರಾಯಚೂರು ಪ್ರದೇಶ ಒಂದು ಮಳೆಯಾಧಾರಿತ ಹುಲ್ಲುಗಾವಲಾಗಿತ್ತು. ಇದು ಕೃಷ್ಣಮೃಗ, ಚಿಂಕಾರಾ ಎಂಬ ಜಿಂಕೆಗಳ ಬೀಡಾಗಿತ್ತು. ಇವುಗಳನ್ನು ಬೇಟೆಯಾಡಲು ಸಂಡೂರು ಕಾಡಿನಿಂದ ಹುಲಿಗಳು, ಚಿರತೆಗಳು ಬರುತ್ತಿದ್ದವು.ಬರ:ದಕ್ಷಿಣ ಭಾರತದಲ್ಲಿ, ಅದೂ ಆಂಧ್ರದಲ್ಲಿ 1876ರಲ್ಲಿ ಭೀಕರ ಬರ ಎದುರಾಯಿತು. ಮಳೆ ಅಭಾವದಿಂದ ಬೆಳೆ ನಾಶವಾಯಿತು. ಈ ಅವಧಿಯಲ್ಲಿ ಬಳ್ಳಾರಿ, ರಾಯಚೂರು, ಕರ್ನೂಲು ಸೇರಿದಂತೆ ದಕ್ಷಿಣ ಭಾರತವನ್ನೇ ನಲುಗಿಸಿದ್ದ ಭೀಕರ ಬರಕ್ಕೆ 50ಲಕ್ಷಕ್ಕೂ ಹೆಚ್ಚು ಜನ ಬಲಿಯಾದರು. ಅಲ್ಲಿಯವರೆಗೆ ರಾಗಿ, ಜೋಳ, ಸಜ್ಜೆ ಬೆಳೆಯುತ್ತಿದ್ದ ರೈತರಿಗೆ ಹತ್ತಿ, ಅಫೀಮು, ನೀಲಿಗಿಡ ಬೆಳೆದು ಹೆಚ್ಚು ಹಣ ಗಳಿಸುವಂತೆ ಬ್ರಿಟಿಷ್ ಸರ್ಕಾರ ಪ್ರೋತ್ಸಾಹಿಸತೊಡಗಿತ್ತು. ಇಲ್ಲಿ ಬೆಳೆದ ಹತ್ತಿಯನ್ನು ಇಂಗ್ಲೆಂಡಿನ ಬಟ್ಟೆ ಗಿರಣಿಗಳಿಗೆ, ಕಾಳು ಕಡಿಗಳನ್ನು ಇಂಗ್ಲೆಂಡಿನ ಮಾರುಕಟ್ಟೆಗೆ ಕಳುಹಿಸಿ ರಫ್ತು ಮಾಡತೊಡಗಿದರು
ಈ ಭೀಕರ ಬರದ ಸಂದರ್ಭದಲ್ಲೇ ಭಾರತದಿಂದ20ಲಕ್ಷ ಟನ್ ಗೋಧಿಯನ್ನು ಇಂಗ್ಲೆಂಡಿಗೆ ಕಳುಹಿಸಲಾಗಿತ್ತು. ಆದ್ದರಿಂದ ಮನೆಯಲ್ಲಿ ಆಹಾರ ಧಾನ್ಯಗಳ ಕೊರತೆಯುಂಟಾಯಿತು. ಅಂಗಡಿಗಳಲ್ಲೂ ಲಭ್ಯ ಇರಲಿಲ್ಲ. ಜನರ ಜೊತೆ ಜಾನುವಾರುಗಳೂ ಅನ್ನ ನೀರಿಲ್ಲದೇ ಮೂಳೆ ಚಕ್ಕಳಗಳಾಗಿ, ಜೀವಂತ ಅಸ್ಥಿಪಂಜರದಂತಾಗಿ ಪ್ರಾಣ ಬಿಟ್ಟವು. ಮಲೇರಿಯಾ, ಕಾಲರಾ, ಪ್ಲೇಗು ಮಾರಿ ರೋಗಗಳ ಕಾಟದಿಂದಾಗಿ ಸತ್ತ ಜನರಿಂದ ಊರು ಕೇರಿಗಳು ತುಂಬಿದ್ದವು. ಸತ್ತವರ ಸಂಸ್ಕಾರಕ್ಕೂ ಜನರಿಲ್ಲದೇ, ನರಿ ನಾಯಿ, ರಣಹದ್ದು, ಕಾಗೆಗಳಿಗೆ ಆಹಾರವಾಗಿ ಹೋದರು. ಇಡೀ ದಕ್ಷಿಣ ಭಾರತದಲ್ಲಿ ಸುಮಾರು ಒಂದು ಕೋಟಿಯಷ್ಟು ಜನಸಂಖ್ಯೆ ಬರದಿಂದ ಅಳಿಸಿಹೋಯಿತು.
ಬ್ರಿಟಿಷರು ಬರ ಪರಿಹಾರಕ್ಕಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು, ಸಶಕ್ತರಿಗೆ ಕೂಲಿಗಾಗಿ ಕಾಳು, ದುರ್ಬಲರು, ಮುದುಕರು ಹಾಗೂ ಮಕ್ಕಳಿಗೆ ಉಚಿತ ಗಂಜಿ ಕೇಂದ್ರ ತೆರೆದರು.ಬರಪರಿಹಾರಕ್ಕೆ ಆರ್ಥರ್ ಕಾಟನ್ ವರದಿ:ಬಳ್ಳಾರಿ, ರಾಯಚೂರು, ಕರ್ನೂಲು, ಅನಂತಪುರ ಪ್ರಾಂತ್ಯದ ಜನರ ಬರವನ್ನು ಕಾಯಂ ಆಗಿ ಅಳಿಸಿ ಹಾಕಬೇಕೆಂದರೆ ತುಂಗಭದ್ರಾ ನದಿಗೆ ಅಡ್ಡಲಾಗಿ ಒಂದು ಅಣೆಕಟ್ಟನ್ನು ಈಗಿನ ಹೊಸಪೇಟೆಯ ಪಕ್ಕದಲ್ಲಿ ನಿರ್ಮಿಸಬೇಕೆಂದು ಮಾನವೀಯ ಬ್ರಿಟಿಷ್ ನೀರಾವರಿ ತಜ್ಞ ಆರ್ಥರ್ ಕಾಟನ್ ವರದಿ ನೀಡಿದರು. ಬರ ಪರಿಹಾರಕ್ಕಾಗಿ ಸರ್ಕಾರ ಖರ್ಚು ಮಾಡುವ ಹಣದ ಸ್ವಲ್ಪ ಮೊತ್ತದಲ್ಲೇ ಈ ಅಣೆಕಟ್ಟು ಹಾಗೂ ಕಾಲುವೆಗಳನ್ನು ನಿರ್ಮಿಸಿ ಈ ಭಾಗದ ಶಾಶ್ವತ ಬರವನ್ನು ನೀಗಬಹುದು ಎಂದು ಸಲಹೆ ನೀಡಿದರು. ಆರ್ಥರ್ ಕಾಟನ್ ತಮಿಳು ನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದೆಲ್ಲೆಡೆ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿ ನೀರಾವರಿ ಒದಗಿಸಿ ಪ್ರಸಿದ್ಧರಾಗಿದ್ದರು. ಆದರೆ ಬ್ರಿಟಿಷ್ ಸರ್ಕಾರ, ಹಣಕಾಸಿನ ಕೊರತೆ ನೆಪದಲ್ಲಿ ಈ ಯೋಜನೆಯನ್ನು ಮುಂದಕ್ಕೆ ಹಾಕಿತು1902ರಲ್ಲಿ ಮದ್ರಾಸ್ ಸರ್ಕಾರದ ಮುಖ್ಯ ಎಂಜಿನಿಯರ್ ಆಗಿದ್ದ ಕರ್ನಲ್ ಸ್ಮಾರ್ಟ್ ತುಂಗಭದ್ರಾ ಅಣೆಕಟ್ಟಿನ ನಿರ್ಮಾಣಕ್ಕಾಗಿ ವಿವರವಾದ ವರದಿಯನ್ನು ಸಿದ್ಧಪಡಿಸಿ ಅದೇ ತಾನೇ ರಚಿಸಲಾಗಿದ್ದ ನೀರಾವರಿ ಆಯೋಗಕ್ಕೆ ಸಲ್ಲಿಸಿದರು.ನಂತರ ಬಂದ ಮಕೆಂಜೀ ಎಂಬ ಮುಖ್ಯ ಎಂಜಿನಿಯರ್ ಹೊಸಪೇಟೆ ಪಕ್ಕದಲ್ಲಿದ್ದ ಮಲ್ಲಾಪುರದಲ್ಲಿ ಎರಡು ಗುಡ್ಡಗಳ ನಡುವೆ ಅಣೆಕಟ್ಟನ್ನು ನಿರ್ಮಿಸಿ ಅಲ್ಲಿಂದ ಈ ಜಿಲ್ಲೆಗಳಿಗೆ ವಿವಿಧ ಕಾಲುವೆಗಳ ಮೂಲಕ ನೀರು ಒದಗಿಸಬೇಕು ಎಂದು ವರದಿ ನೀಡಿದರು.
ಆದರೆ, ಹೈದರಾಬಾದ್ ನಿಜಾಮ ಸರ್ಕಾರದ ಅಧಿಕಾರಿಗಳು ನದಿಯ ಮೇಲೆ ತಮಗೂ ಹಕ್ಕಿದೆ ಎಂದು ತಮ್ಮ ಪ್ರದೇಶದಲ್ಲಿಯೇ ಅಣೆಕಟ್ಟನ್ನು ನಿರ್ಮಿಸಲು ಹಕ್ಕೊತ್ತಾಯ ಮಾಡಿದರು.ಮುಂಬಯಿ ಪ್ರಾಂತ್ಯ, ಮೈಸೂರು ರಾಜರ ಸರ್ಕಾರ, ಹೈದರಾಬಾದ್ ನಿಜಾಮ, ಮತ್ತು ಮದ್ರಾಸ್ ಪ್ರಾಂತೀಯ ಸರ್ಕಾರ ಹೀಗೆ ನಾಲ್ಕೂ ಸರ್ಕಾರಗಳು ತಮ್ಮ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಿದವು. ಅಣೆಕಟ್ಟಿನ ನಿರ್ಮಾಣ ನೆನೆಗುದಿಗೆ ಬಿತ್ತು. 1940ರಲ್ಲಿ ಮದ್ರಾಸ್ ಸರ್ಕಾರ ಮತ್ತೆ ಯೋಜನೆ ಕೈಗೆತ್ತಿಕೊಂಡಿತು. ಆಗಿನ ಮುಖ್ಯ ಎಂಜಿನಿಯರ್ ತಿರುಮಲೆ ಅಯ್ಯಂಗಾರ್ ನೇತೃತ್ವದಲ್ಲಿ ಒಂದು ವಸ್ತುನಿಷ್ಠ ಕಾರ್ಯಯೋಜನಾ ವರದಿ ತಯಾರಿಸಲು ನೇಮಿಸಲಾಯಿತು.
ಅಣೆಕಟ್ಟೆ ನಿರ್ಮಾಣಾ ಆರಂಭ28ನೇ ಫೆಬ್ರುವರಿ 1945ರಂದು ಇಂದಿನ ಮುನಿರಾಬಾದ್ ಬಳಿ ಹೈದರಾಬಾದ್ ನಿಜಾಮ, ಇತ್ತ ಹೊಸಪೇಟೆಯ ಕಡೆ ಮದ್ರಾಸ್ ಪ್ರಾಂತೀಯ ಸರ್ಕಾರದ ಗವರ್ನರ್ ಆಗಿದ್ದ ಸರ್ ಆರ್ಥರ್ ಹೋಪ್ ಅಡಿಗಲ್ಲನ್ನು ಹಾಕಿ ಯೋಜನೆಯನ್ನು ಉದ್ಘಾಟಿಸಿದರು. ತಿರುಮಲೆ ಅಯ್ಯಂಗಾರ್ ನೇತೃತ್ವದಲ್ಲಿ ನಿರ್ಮಾಣ ಕಾರ್ಯ ಭರದಿಂದ ಆರಂಭವಾಯಿತು. ಆದರೆ ನಿರ್ಮಾಣ ವಸ್ತುಗಳ ಬಳಕೆಯ ವಿವಾದ, ನಿಜಾಮರ ಆಳ್ವಿಕೆಯ ಅಂತ್ಯ, ದೇಶಕ್ಕೆ ದೊರೆತ ಸ್ವಾತಂತ್ರ್ಯ, ಬದಲಾದ ಆಡಳಿತ ಮುಂತಾದ ಕಾರಣಗಳಿಂದ ಯೋಜನೆ ಕುಂಟುತ್ತಾ ಸಾಗಿತು.
ಸರ್ ಎಂ.ವಿಶ್ವೇಶ್ವರಯ್ಯ ನೇತೃತ್ವದ ಎಂಜಿನಿಯರ್ಗಳ ಮಂಡಳಿಯ ಮೇಲ್ವಿಚಾರಣೆಯಲ್ಲಿ ಪುನಃ ನಿರ್ಮಾಣ ಕಾರ್ಯ ಭರದಿಂದ ಸಾಗಿತು. 90 ಗ್ರಾಮಗಳು ಮುಳುಗಡೆಯಾಗಿ ಸುಮಾರು 55 ಸಾವಿರ ಜನರನ್ನು ಸ್ಥಳಾಂತರಿಸಲಾಯಿತು. 1953ರಲ್ಲಿ ಮೊದಲ ಬಾರಿಗೆ ಕಾಲುವೆಯಲ್ಲಿ ನೀರು ಹರಿಯಿತು. ನೂರಾರು ಕಿಲೋ ಮೀಟರ್ ಉದ್ದದ ಮೂರು ಕಾಲುವೆಗಳ ನಿರ್ಮಾಣವೂ ಮುಂದುವರೆದು 1960ರ ವೇಳೆಗೆ ಸಂಪೂರ್ಣಗೊಂಡಿತು. ಈಗಿನ ಹಾಗೆ ಅತ್ಯಾಧುನಿಕ ಯಂತ್ರಗಳು ಇಲ್ಲದೇ 340 ಕಿ.ಮೀ ಉದ್ದದ ಕಾಲುವೆಗಳ ನಿರ್ಮಾಣಕ್ಕೆ ಮಾನವ ಶಕ್ತಿ ಬಳಕೆಯಾಯಿತು! ಕಲ್ಲು ಗುಡ್ಡಗಳಲ್ಲಿ ಕಿಲೋಮೀಟರ್ಗಟ್ಟಲೆ ಸುರಂಗವನ್ನು ಕೊರೆದು ಕಾಲುವೆ ನಿರ್ಮಿಸಿದರು. ಕಠಿಣ ಸವಾಲುಗಳನ್ನು ಎದುರಿಸಿ ಅಣೆಕಟ್ಟನ್ನು ನಿರ್ಮಿಸಿದ ತಿರುಮಲೆ ಅಯ್ಯಂಗಾರ್ ಆಧುನಿಕ ಭಗೀರಥನೇ ಸರಿ.
ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಐದು ಜಿಲ್ಲೆಗಳ ಒಂದು ಕೋಟಿಗೂ ಅಧಿಕ ಜನರು ತುಂಗಭದ್ರಾ ಅಣೆಕಟ್ಟಿನ ನೀರನ್ನು ಬಳಸುತ್ತಿದ್ದಾರೆ. ಅನೇಕ ಸಕ್ಕರೆ ಕಾರ್ಖಾನೆಗಳು, ಅಕ್ಕಿಯ ಗಿರಣಿಗಳು, ವಿವಿಧ ಕೈಗಾರಿಕೋದ್ಯಮಗಳು ಈ ಜಿಲ್ಲೆಗಳಲ್ಲಿ ನೆಲೆಯೂರಿವೆ. ಮೀನುಗಾರಿಕೆ ಒಂದು ದೊಡ್ಡ ಉದ್ಯಮವಾಗಿದೆ. ಇಡೀ ಈ ಭಾಗದ ಸಾಮಾಜಿಕ–ಆರ್ಥಿಕ ಅಭಿವೃದ್ಥಿ ಸುಧಾರಿಸಿದೆ. ಈ ಸಮೃದ್ಧಿಗೆ ಕಾರಣಕರ್ತರಾದ ತಿರುಮಲೆ ಅಯ್ಯಂಗಾರರ ಪ್ರತಿಮೆಯನ್ನು ಕೆಲ ರೈತರು ಸೇರಿ ಅಣೆಕಟ್ಟಿನ ಬಲದಂಡೆಯಲ್ಲಿ ನಿರ್ಮಿಸಿದ್ದಾರೆ. ಟಿ.ಬಿ.ಡ್ಯಾಮ್ ಜನವಸತಿ ಪ್ರದೇಶದಲ್ಲಿ ನಿರ್ಮಿಸಿದ ಸಮುದಾಯ ಭವನಕ್ಕೆ ತಿರುಮಲೆ ಅಯ್ಯಂಗಾರ್ ಹಾಲ್ ಎಂದು ಹೆಸರಿಸಲಾಗಿದೆ
ಅರವತ್ತು ವರ್ಷಗಳ ನಂತರ ಅನೇಕ ಸಮಸ್ಯೆಗಳು ಈ ಜಲಾಶಯದಲ್ಲಿ ತಲೆದೋರಿದೆ.ಅಣೆಕಟ್ಟು ಎದುರಿಸುತ್ತಿರುವ ಅಪಾಯಗಳು: ಈ ವರ್ಷ ಪಶ್ಚಿಮ ಘಟ್ಟಗಳಲ್ಲೇ ಅತಿಕಡಿಮೆ ಮಳೆಯಾದ ಕಾರಣ ಅಣೆಕಟ್ಟಿಗೆ ನೀರಿನ ಹರಿವು ಕಡಿಮೆಯಾಗಿದೆ. ಕಳೆದ ವರ್ಷಕ್ಕಿಂತ 10 ಟಿ.ಎಂ.ಸಿ ನೀರು ಕೊರತೆ ಇರುವ ಕಾರಣ ಈ ವರ್ಷ ಬೇಸಿಗೆ ಬೆಳೆ ನಿಷೇಧಿಸಿದೆ. ಇದರಿಂದ ಭತ್ತದ ಇಳುವರಿ ಕಡಿಮೆಯಾಗಿ ಬೆಲೆಯೇರಿಕೆ ಆಗುವ ಸಾಧ್ಯತೆ ಇದೆ. ಇನ್ನು ಜಲಾನಯನ ಪ್ರದೇಶದಲ್ಲಿನ ಕೃಷಿ ಚಟುವಟಿಕೆ, ಅರಣ್ಯ ನಾಶ, ಅವೈಜ್ಞಾನಿಕ ಕೃಷಿ ಚಟುವಟಿಕೆ, ಅಪಾರ ರಸಗೊಬ್ಬರಗಳ ಬಳಕೆ, ದ್ರವ ಹಾಗೂ ಘನತ್ಯಾಜ್ಯವನ್ನು ನದಿಗೆ ಹರಿಸುವುದು, ಕೈಗಾರಿಕಾ ತ್ಯಾಜ್ಯಗಳ ವಿಲೇವಾರಿ ಮುಂತಾದ ಕಾರಣಗಳಿಂದ ಜಲಾಶಯದಲ್ಲಿ ಹೂಳು ಹೆಚ್ಚುತ್ತಿದೆ.
133 ಟಿ.ಎಂ.ಸಿ. ಸಾಮರ್ಥ್ಯದ ಜಲಾಶಯದಲ್ಲಿ ಇಂದು 30 ಟಿ.ಎಂ.ಸಿಯಷ್ಟು ಹೂಳು ತುಂಬಿದೆ ಎಂದು ಹೇಳಲಾಗುತ್ತಿದೆ. ಹೂಳು ತುಂಬಲು ಕಾರಣವಾಗುತ್ತಿರುವ ಚಟುವಟಿಕೆಗಳನ್ನು ಪ್ರತಿಬಂಧಿಸುವುದು ಪ್ರಸ್ತುತ. ಜಲಾಶಯದ ಹಿನ್ನೀರು ಸರಿದಂತೆಲ್ಲಾ ತೆರೆದುಕೊಳ್ಳುವ ಕೆಸರಿನಲ್ಲಿ ಕೆಲವು ರೈತರು ಉದ್ದು, ಅಲಸಂದಿ ಮುಂತಾದ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಇತ್ತೀಚಿಗೆ ಹಿನ್ನೀರಿನ ಅನೇಕ ಭಾಗದಲ್ಲಿ ಕಿಲೋಮೀಟರ್ಗಟ್ಟಲೆ ವಿದ್ಯುತ್ ಕಂಬಗಳನ್ನು ಹಾಕಿ, ಬೋರ್ವೆಲ್ ಕೊರೆದು ಸಾವಿರಾರು ಎಕರೆ ಪ್ರದೇಶದಲ್ಲಿ ಶೇಂಗಾ, ಮೆಕ್ಕೆಜೋಳ ಮುಂತಾದ ಬೆಳೆಯನ್ನು ಬೆಳೆಯುತ್ತಿದ್ದಾರೆ. ಒಂದು ದೃಷ್ಟಿಯಿಂದ ಇದು ನಿರಪಾಯಕಾರಿ ಹಾಗೂ ರೈತರಿಗೆ ಲಾಭ ತಂದುಕೊಡುವ ಮಾರ್ಗ ಎಂದು ಅನಿಸುತ್ತದೆ. ಆದರೆ ಇದು ಹೂಳು ತುಂಬಲು ಕಾರಣವಾಗುತ್ತಿದೆ. ಲಕ್ಷಾಂತರ ಹಕ್ಕಿಗಳು ಮೊಟ್ಟೆ ಇಟ್ಟು ಮರಿಮಾಡುವ ಸ್ಥಳದಲ್ಲಿ ಏಕಾಏಕಿ ಕೃಷಿ ಚಟುವಟಿಕೆ ಹೆಚ್ಚಾಗುತ್ತಿದೆ. ಇದರಿಂದ ಅಪರೂಪದ ಹಕ್ಕಿಗಳ ಸಂತಾನೋತ್ಪತ್ತಿಗೆ ಕುತ್ತು ಬಂದಿದೆ.