ಬರಗಾಲ, ಬೇಸಿಗೆಯ ಹೊಡೆತಕ್ಕೆ ಸಿಲುಕಿದ ತುಂಗಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಭಾರೀ ಕುಸಿತವಾಗಿದೆ. ಪ್ರಸ್ತುತ ಡ್ಯಾಂನಲ್ಲಿ 3.40 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿದ್ದು, ಡ್ಯಾಂ ಡೆಡ್‌ಸ್ಟೋರೇಜ್ ಹಂತವನ್ನು ತಲುಪಿದೆ.
ತುಂಗಭದ್ರಾ ಡ್ಯಾಂನ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 105.79 ಟಿಎಂಸಿ ಅಡಿ. ಆದರೆ ಮೇ 18ರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಪ್ರಕಾರ ಡ್ಯಾಂನಲ್ಲಿ 3.40 ಟಎಂಸಿ ಅಡಿ ನೀರಿನ ಸಂಗ್ರಹವಿದೆ.ತುಂಗಭದ್ರಾ ಜಲಾಶಯದ ನೀರಿನ ಮೇಲೆ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಹಕ್ಕಿದೆ. ರಾಜ್ಯದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಕುಡಿಯುವ ನೀರು ಸಹ ಇಲ್ಲಿಂದ ಪೂರೈಕೆಯಾಗುತ್ತದೆ
ಆದರೆ ಕಳೆದ ಬಾರಿ ನೈಋತ್ಯ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಲಾಶಯ ಭರ್ತಿ ಆಗಿರಲಿಲ್ಲ. ಈಗ ಬೇಸಿಗೆ ಧಗೆಗೆ ಡ್ಯಾಂ ಸಂಪೂರ್ಣ ಖಾಲಿಯಾಗಿದ್ದು,
ನೀರಿನ ಮಟ್ಟ ಡೆಡ್‌ಸ್ಟೋರೇಜ್‌ಗೆ ಕುಸಿದಿದೆ. ಒಳಹರಿವು ಇಲ್ಲ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಎಂಡಿಸಿ) ವರದಿಯ ಪ್ರಕಾರ ತುಂಗಭದ್ರಾ ಡ್ಯಾಂನ ಒಳಹರಿವು ಶೂನ್ಯ, ಹೊರ ಹರಿವು 45 ಕ್ಯುಸೆಕ್ ಆಗಿದೆ.ಮಲೆನಾಡಿನಲ್ಲಿ ಮಳೆ ಸುರಿದು ತುಂಗ ಮತ್ತು ಭದ್ರಾ ನದಿಗಳಿಗೆ ಒಳಹರಿವು ಬಂದು ಅದರ ನೀರು ಗಾಜನೂರಿನಲ್ಲಿರುವ ತುಂಗ ಮತ್ತು ಶಿವಮೊಗ್ಗದ ಭದ್ರಾ ಡ್ಯಾಂ ತಲುಪಬೇಕು. ಡ್ಯಾಂನ ಬಾಗಿಲು ತೆರೆದು ನದಿಗೆ ನೀರು ಬಿಟ್ಟ ಬಳಿಕ ದಾವಣಗೆರೆ, ಹರಿಹರ ಮೂಲಕ ನೀರು ತುಂಗಭದ್ರಾ ಡ್ಯಾಂಗೆ ಬರಬೇಕು. ನೈಋತ್ಯ ಮುಂಗಾರು ಮಳೆ ಆರಂಭವಾಗಿ ಉತ್ತಮವಾಗಿ ಮಳೆ ಸುರಿದಲ್ಲಿ ತುಂಗ ಡ್ಯಾಂ ಬೇಗ ಭರ್ತಿಯಾಗುತ್ತದೆ. ಭದ್ರಾ ಡ್ಯಾಂನಲ್ಲಿ ಪ್ರಸ್ತುತ 13.41 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಆದರೆ ನದಿಗೆ ಸದ್ಯ ನೀರನ್ನು ಹರಿಸುವುದಿಲ್ಲ. ಆದ್ದರಿಂದ ಮುಂದಿನ ಒಂದು ತಿಂಗಳ ಕಾಲ ತುಂಗಭದ್ರಾ ಡ್ಯಾಂಗೆ ಒಳಹರಿವು ಹೆಚ್ಚಳವಾಗುವುದಿಲ್ಲ. 2023ರ ಮೇ 18ರಂದು ಡ್ಯಾಂನಲ್ಲಿ 3.83 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು.
45 ಕ್ಯುಸೆಕ್ ಒಳಹರಿವು ಇತ್ತು. ಆದರೆ ಈ ಬಾರಿ ನೀರು ಸಂಪೂರ್ಣ ಖಾಲಿಯಾಗಿದೆ. ಡ್ಯಾಂನಲ್ಲಿ ಜಲಚರಗಳಿಗೆ ಅನುಕೂಲವಾಗುವಂತೆ 4 ಟಿಎಂಸಿ ಅಡಿ ನೀರಿನ ಸಂಗ್ರಹ ಇರಬೇಕು ಎಂಬ ನಿಯಮವಿದೆ. ಆದರೆ ಇದಕ್ಕಿಂತಲೂ ಕಡಿಮೆ ನೀರು ತುಂಗಭದ್ರಾ ಡ್ಯಾಂನಲ್ಲಿ ಇದ್ದು, ಡ್ಯಾಂ ನಂಬಿಕೊಂಡಿರುವ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಪ್ರಸ್ತುತ ಡ್ಯಾಂನಲ್ಲಿರುವ 3.40 ಟಎಂಸಿ ಅಡಿ ನೀರಿನ ಸಂಗ್ರಹದಲ್ಲಿ 1.40 ಟಿಎಂಸಿ ಅಡಿ ನೀರನ್ನು ಬಳಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ನೀರು ಸಹ ಕುಡಿಯಲು ಯೋಗ್ಯವಾಗಿರುತ್ತದೆಯೇ? ಎಂಬುದು ಪ್ರಶ್ನೆಯಾಗಿದೆ. ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತುಂಗಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಹಲವು ಬಾರಿ ಕುಡಿಯುವ ನೀರಿಗೆ ಮಾತ್ರ ನೀರು ಹರಿಸಲಾಗುತ್ತದೆ ಎಂದು ತೀರ್ಮಾನ ಕೈಗೊಳ್ಳಲಾಗಿತ್ತು. ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ, ಮೆಣಸು ಮುಂತಾದ ಅಧಿಕ ನೀರು ಬೇಡುವ ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ ನೀಡಲಾಗಿತ್ತು. ಪೂರ್ವ ಮುಂಗಾರು ಮತ್ತು ಚಂಡ ಮಾರುತದ ಪ್ರಭಾವದಿಂದ ತುಂಗ ಮತ್ತು ಭದ್ರಾ ನದಿ ವ್ಯಾಪ್ತಿಯ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಆದರೆ ಈ ನೀರು ಡ್ಯಾಂಗೆ ಹರಿದು ಬರಲು ಸುಮಾರು ಒಂದು ತಿಂಗಳು ಬೇಕಿದೆ.