, ಚಂಡಮಾರುತದ ಪ್ರಭಾವದಿಂದ ಮಳೆಯಾಗುತ್ತಿದೆ. ನೈಋತ್ಯ ಮುಂಗಾರು ಹಂಗಾಮು 2024 ಸಹ ಆರಂಭವಾಗಲು ಕೆಲವೇ ದಿನ ಉಳಿದಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.ಕಳೆದ ವರ್ಷದ ಮಳೆ ಕೊರತೆ, ಬೆಳೆ ನಷ್ಟ, ಬೇಸಿಗೆಯಿಂದ ಕಂಗಾಲಾಗಿದ್ದ ರೈತರಿಗೆ ಪೂರ್ವ ಮುಂಗಾರು ಮಳೆ ಕೊಂಚ ನೆಮ್ಮದಿ ತಂದಿದೆ.
ನೈಋತ್ಯ ಮುಂಗಾರು ಮಳೆ ಸಹ ಉತ್ತಮವಾಗಿ ಸುರಿಯಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಕೃಷಿ ಚಟುವಟಿಕೆಗೆ ಚಾಲನೆ ನೀಡಿದ್ದಾರೆ.ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಕೃಷಿ ಇಲಾಖೆ ರೈತರಿಗೆ ಹಲವಾರು ಸಲಹೆಗಳನ್ನು ನೀಡಿದೆ. ಅವುಗಳಲ್ಲಿ ಪ್ರಮುಖವಾಗಿ ಬಿತ್ತನೆ ಬೀಜ ಖರೀದಿ ಕುರಿತು ಮಾಹಿತಿ ನೀಡಲಾಗಿದೆ. ರೈತರು ಬೀಜ ಖರೀದಿ ಮಾಡುವಾಗ ಎಚ್ಚರ ವಹಿಸಬೇಕು ಎಂದು ಕರೆ ನೀಡಲಾಗಿದೆ.ರೈತರಿಗೆ ಸಲಹೆಗಳು: ರೈತರು ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು ಮತ್ತು ಅಧಿಕೃತ ಬಿಲ್ಲು ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ
ಯಾರಾದರೂ ನೇರವಾಗಿ ಬಂದು ಲೂಸ್ ಪ್ಯಾಕೆಟ್ಗಳಲ್ಲಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡಿದ್ದಲ್ಲಿ ಅಂತಹ ಬಿತ್ತನೆ ಬೀಜಗಳನ್ನು ಖರೀದಿಸಬಾರದು ಎಂದು ಸಲಹೆ ನೀಡಲಾಗಿದೆ.ಪ್ರಸ್ತಕ ಸಾಲಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಸರಿಯಾದ ಸಮಯಕ್ಕೆ ಬಿತ್ತನೆ ಕಾರ್ಯ ಪ್ರಾರಂಭವಾಗುವ ಅವಕಾಶವಿದೆ. ಹತ್ತಿ, ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆ ಬೆಳೆಯುವ ರೈತರು ಬಿತ್ತನೆ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದ ಮಾತ್ರ ಅಧಿಕೃತ ಬಿಲ್ಲು ಪಡೆದು ಖರೀದಿಸಬೇಕು ಎಂದು ಮನವಿ ಮಾಡಲಾಗಿದೆ.
ಯಾವುದೇ ಕಾರಣಕ್ಕೂ ಲೂಸ್ ಪ್ಯಾಕೆಟ್ಗಳಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಬಾರದು. ಅಂತಹ ಬೀಜ ಮಾರಾಟಗಾರರ ಕಂಡುಬಂದಲ್ಲಿ ಕೃಷಿ ಇಲಾಖೆಗೆ ಮಾಹಿತಿ ನೀಡಬೇಕು ರೈತರಿಗೆ ಕರೆ ನೀಡಲಾಗಿದೆ. ಹಳ್ಳಿಗಳಿಗೆ ಆಗಮಿಸಿ ಮಾರಾಟ ಪ್ರತಿನಿಧಿಗಳಂತೆ ಲೂಸ್ ಪ್ಯಾಕೆಟ್ಗಳಲ್ಲಿ ನಕಲಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ರೈತರಿಗೆ ಎಚ್ಚರಿಕೆ ನೀಡಲಾಗಿದೆ.
ಜೂನ್ 1ರಿಂದ ಸೆಪ್ಟೆಂಬರ್ 30ರ ಅವಧಿಯನ್ನು ದೇಶದಲ್ಲಿ ನೈಋತ್ಯ ಮುಂಗಾರು ಅವಧಿ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಸುರಿಯುವ ನೈಋತ್ಯ ಮುಂಗಾರು ಮಳೆ ದೇಶದ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದೆ. ಈ ಅವಧಿಯಲ್ಲಿ ಮಳೆಯ ಕೊರತೆ ಉಂಟಾದರೆ ಕೃಷಿ ಚಟುವಟಿಕೆಗಳ ಮೇಲೆ ಪ್ರಭಾವ ಉಂಟಾಗಿ, ದೇಶದ ಆಹಾರ ಉತ್ಪಾದನಾ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುತ್ತದೆ. ರೈತರು ಅಪಾರ ನಷ್ಟವನ್ನು ಅನುಭವಿಸುತ್ತಾರೆ. ಕಳೆದ ವರ್ಷ ಮಳೆ ಕೊರತೆಯ ಕಾರಣ ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರಿಗೆ ಅಪಾರವಾದ ನಷ್ಟ ಉಂಟಾಗಿದೆ. ಮುಂಗಾರು ಹಂಗಾಮಿನಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇರೆಗೆ ಫ್ರೂಟ್ಸ್ ಐಡಿ ಹೊಂದಿರುವ, ಪಹಣಿ ಜೋಡಣೆಯಾಗಿರುವ ರೈತರಿಗೆ ಡಿಬಿಟಿ ಮೂಲಕ ಎಸ್ಡಿಆರ್ಎಫ್ ಮಾರ್ಗಸೂಚಿಯಂತೆ ಬೆಳೆ ಹಾನಿ ಪರಿಹಾರವನ್ನು ವಿತರಣೆ ಮಾಡಲಾಗುತ್ತಿದೆ. ಆದರೆ ಬೆಳೆ ಹಾನಿ ಪರಿಹಾರ, ಹಣ ಖಾತೆಗೆ ಜಮಾ ಆಗದೇ ಇರುವ ಬಗ್ಗೆ ದೂರುಗಳು ಬರುತ್ತಿವೆ. ಆದ್ದರಿಂದ ರೈತರು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ, ಜಿಲ್ಲಾ ಮತ್ತು ತಾಲ್ಲೂಕುವಾರು ಸಹಾಯವಾಣಿಗಳನ್ನು ತೆರೆಯಲಾಗುತ್ತಿದೆ. ಆದರೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಲಿದೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.