ಪ್ರತಿ ವರ್ಷ ಮೇ 24ರಂದು ಯುನೈಟೆಡ್ ಸ್ಟೇಟ್ಸ್, ಭಾರತ, ಜರ್ಮನ್ ಸೇರಿದಂತೆ ಇನ್ನಿತ್ತರ ದೇಶಗಳಲ್ಲಿ ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಇದು ಸಹೋದರರ ಮೇಲಿನ ಪ್ರೀತಿ ಹಾಗೂ ವ್ಯಾತ್ಸಲ್ಯದ ಮಹತ್ವವನ್ನು ತೋರಿಸುವ ದಿನವಾಗಿದೆ. ಈ ರಾಷ್ಟ್ರೀಯ ಸಹೋದರರ ದಿನದ ಇತಿಹಾಸ ಮತ್ತು ಮಹತ್ವದ ಬಗೆಗಿನ ಮಾಹಿತಿ ಇಲ್ಲಿದೆ.
ಅಪ್ಪನ ದಿನ, ಅಮ್ಮನ ದಿನ, ಶಿಕ್ಷಕರ ದಿನ, ಸ್ನೇಹಿತರ ದಿನ, ಪ್ರೇಮಿಗಳ ದಿನ ಹೀಗೆ ಒಂದಲ್ಲ ಒಂದು ಸಂಬಂಧಕ್ಕೂ ಒಂದೊಂದು ದಿನವನ್ನು ಮೀಸಲಾಗಿಡಲಾಗಿದೆ. ಜೀವನದಲ್ಲಿ ಜೊತೆಯಾಗುವ ಸಂಬಂಧಗಳಲ್ಲಿ ಒಡಹುಟ್ಟಿದವರುಕೂಡ ಪ್ರಮುಖ ಪಾತ್ರವಹಿಸುತ್ತಾರೆ. ಪ್ರಪಂಚದ ಎಲ್ಲಾ ಸಂಬಂಧಗಳಲ್ಲಿ ಸಹೋದರರ ಸಂಬಂಧವು ತುಂಬಾ ವಿಶೇಷವಾಗಿದೆ. ಈ ಸಂಬಂಧದಲ್ಲಿ ದ್ವೇಷ, ಜಗಳ, ಕೋಪದ ಜೊತೆಗೆ ವಿವರಿಸಲಾಗದ ಪ್ರೀತಿಯು ಇರುತ್ತದೆ. ಕಷ್ಟ ಸುಖಗಳಿಗೆ ಜೊತೆಯಾಗುವ ಸಹೋದರ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಡಹುಟ್ಟಿದವರು ಮಾತ್ರ ಅಣ್ಣ ತಮ್ಮಂದಿರು ಆಗಬೇಕಾಗಿಲ್ಲ. ಮನಸ್ಸಿನಲ್ಲಿ ನಿಷ್ಕಲ್ಮಶ ಭಾವನೆಯಿಂದ ಕಾಳಜಿ ವಹಿಸುವವರು ಸಹೋದರರೇ. ಈ ಸಂಬಂಧದ ಮೌಲ್ಯ ಹಾಗೂ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಈ ರಾಷ್ಟ್ರೀಯ ಸಹೋದರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ರಾಷ್ಟ್ರೀಯ ಸಹೋದರರ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆ ಹೇಗೆ?
ಯುಎಸ್ಎ ಮೊದಲ ಸಹೋದರ ಸಂಘಟನೆಯಾದ ಫ್ರೀಮಾಸನ್ಸ್ ಸ್ಥಾಪನೆಯನ್ನು ಸ್ಮರಿಸುವ ದಿನವಾಗಿದೆ. 2005ರಿಂದ ಮೇ 24ರಂದು ಸಹೋದರರ ದಿನವನ್ನು ಆಚರಿಸಲಾಯಿತು. ಅಲಬಾಮಾ ಮೂಲದ ಸಿ. ಡೇನಿಯಲ್ ರೋಡ್ಸ್ ಅವರು ರಾಷ್ಟ್ರೀಯ ಸಹೋದರರ ದಿನ ಮತ್ತು ಅದರ ಕಾರ್ಯವಿಧಾನಗಳನ್ನು ಮೊದಲು ಆಯೋಜಿಸಿದ್ದರು. ಅಂದಿನಿಂದ ಪ್ರತಿ ವರ್ಷ ಮೇ 24ರಂದು ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಗೌರವಿಸಲಾಗುತ್ತದೆ. ಈ ದಿನದಂದು ಸಹೋದರ ಸಹೋದರಿಯರು ಪ್ರೀತಿಯ ಉಡುಗೊರೆಯನ್ನು ನೀಡಿ ವಿಶೇಷ ದಿನವನ್ನು ಆಚರಿಸಿಕೊಳ್ಳುತ್ತಾರೆ