Ad image

ಸ್ಕಿಜೋಪ್ರೀನಿಯಾ”- ಭಯಬೇಡ ತಿಳುವಳಿಕೆ ಇರಲಿ: ನ್ಯಾ.ರಾಜೇಶ್ ಹೊಸಮನೆ

Vijayanagara Vani
ಸ್ಕಿಜೋಪ್ರೀನಿಯಾ”- ಭಯಬೇಡ ತಿಳುವಳಿಕೆ ಇರಲಿ: ನ್ಯಾ.ರಾಜೇಶ್ ಹೊಸಮನೆ

ಬಳ್ಳಾರಿ,ಮೇ 24: ಮಾನಸಿಕ ಖಾಯಿಲೆಗಳಲ್ಲಿಯೇ ತೀವ್ರ ಸ್ವರೂಪವಾದ ಸ್ಕಿಜೋಪ್ರೀನಿಯಾ ಖಾಯಿಲೆಯ ಬಗ್ಗೆ ಜಾಗೃತಿ ಇರಬೇಕು. ಭಯಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಹೊಸಮನೆ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ಕಿಜೋಪ್ರೇನಿಯ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಸ್ಕಿಜೋಫ್ರೇನಿಯ ರೋಗಿಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದು ಅಪಾಯ ಎಂಬ ನಂಬಿಕೆ ಇತ್ತು. ಆದರೆ ಕಳೆದ 30 ವರ್ಷಗಳಿಂದ ಈಚೆಗೆ ವೈದ್ಯಕೀಯ ಕ್ಷೇತ್ರದಲ್ಲಾದ ಸಂಶೋಧನೆ ಹಾಗೂ ಬದಲಾದ ಚಿಕಿತ್ಸೆ ವಿಧಾನಗಳಿಂದ ಆರಂಭದಲ್ಲಿಯೇ ರೋಗಿಯ ಮನಃಸ್ಥಿತಿಗೆ ಅನುಸಾರವಾಗಿ ಕುಟುಂಬದ ಸದಸ್ಯರ ನೆರವಿನಿಂದ ಚಿಕಿತ್ಸೆ ನೀಡಿದರೆ ಖಾಯಿಲೆ ಬೇಗ ವಾಸಿಯಾಗಬಹುದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ಬಾಬು ಅವರು ಮಾತನಾಡಿ, ಸಾಮಾನ್ಯವಾಗಿ 15 ರಿಂದ 25 ವರ್ಷ ವಯಸ್ಸಿನ ಅವಧಿಯ ತರುಣರಲ್ಲ್ಲಿ ಗ್ರಾಮೀಣಪಟ್ಟಣ, ಬಡತನಶ್ರೀಮಂತಿಕೆ ಎಂಬ ಬೇಧಬಾವವಿಲ್ಲದೇ ಎಲ್ಲರಿಗೂ ಬರಬಹುದಾದ ಖಾಯಿಲೆಯಾಗಿದೆ. ವ್ಯಕ್ತಿಯ ಮನಸ್ಸಿನ ಕ್ರಿಯೆಗಳಲ್ಲಿ ಆಲೋಚನೆ, ಭಾವನೆಗಳನ್ನು ಹಾಗೂ ಪಂಚೇಂದ್ರಿಯಗಳ ಮೂಲಕ ತನ್ನ ಸುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳಲಾಗದ ಪರಿಸ್ಥಿತಿಗೆ ಹೋಗುತ್ತಾನೆ ಎಂದರು.

ಮಾತ್ರೆ ಮತ್ತು ಚುಚ್ಚು ಮದ್ದು ರೂಪದಲ್ಲಿ ಔಷಧಿ ಲಭ್ಯವಿದ್ದು, ಖಾಯಿಲೆ ಕಾಣಿಸಿಕೊಂಡ ಕೆಲವೇ ವಾರದೊಳಗೆ ಔಷಧೋಪಚಾರ ಪ್ರಾರಂಭಿಸಿದರೆ ಬೇಗನೇ ಹತೋಟಿಗೆ ಬರುತ್ತದೆ ಎಂದು ತಿಳಿಸಿದರು.

ಈಗಾಗಲೇ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದಿಂದ ಮನೋಚೈತನ್ಯ ಕಾಯ್ದೆ ಕಾರ್ಯಕ್ರಮದಡಿ ಪ್ರತಿ ಮಂಗಳವಾರ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಉಚಿತ ಆರೋಗ್ಯ ಶಿಬಿರ ತಪಾಸಣೆ ಏರ್ಪಡಿಸಿ, ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ರಮೇಶ್.ಜಿ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮ.ಎಸ್.ಕಟ್ಟಿಮನಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮಾನಸಿಕ ತಜ್ಞೆ ಡಾ.ರೋಹನ್ ವನಗುಂದಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಸೇರಿದಂತೆ ಇತರರು ಉಪಸ್ಥಿತರಿದ್ದರು

Share This Article
error: Content is protected !!
";