ದೊಡ್ಡಬಳ್ಳಾಪುರ : ಬುದ್ಧ ಒಬ್ಬ ವಿಜ್ಞಾನಿ, ಪ್ರಶ್ನಿಸದೆ ಏನನ್ನು ಒಪ್ಪಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಆದ್ದರಿಂದ ನಾವು ಯಾವುದೇ ಮೌಢ್ಯತೆಗೆ ಒಳಗಾಗದೆ, ಪ್ರಶ್ನಿಸುವುದನ್ನು ಕಲಿಯಬೇಕು. ಎಂದು ಡಾ.ಎಚ್.ಎಲ್ ಸ್ವಾಮಿ ಅವರು ಹೇಳಿದರು.
ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೊಡ್ಡಬಳ್ಳಾಪುರದ ರಾಷ್ಟ್ರೀಯ ಸೇವಾ ಯೋಜನೆ ಹಮ್ಮಿಕೊಂಡಿರುವ ಶಿಬಿರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ತಂಡ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಗೂಬೆಯನ್ನು ಒಂದು ಕೆಟ್ಟ ಪಕ್ಷಿಯಾಗಿ ನೋಡುತ್ತೇವೆ, ಆದರೆ, ಗೂಬೆ ರೈತನ ಮಿತ್ರ. ಅದೇ ರೀತಿ ಕಾಗೆ ಮತ್ತು ಕೋಗಿಲೆಗೆ ಇರುವ ವ್ಯತ್ಯಾಸವನ್ನು ತಿಳಿಸಿ, ಕೋಗಿಲೆ ಅತ್ಯಂತ ಸೋಮಾರಿ ಪಕ್ಷಿ, ಕಾಗೆ ಯಾವುದೇ ಕೆಟ್ಟ ಪಕ್ಷಿಯಲ್ಲ ಎಂದು ತಿಳಿಸಿದರು.
ಒಂದು ವಸ್ತುವನ್ನು ಮೇಲಕ್ಕೆ ಎಸೆದು ಅದು ಮತ್ತೆ ಕೆಳಗೆ ಬಂದರೆ ಗುರುತ್ವಾಕರ್ಷಣ ಬಲ, ಅ ವಸ್ತುವನ್ನು ಅವರು ಕೆಳಗಿನಿಂದ ಮೇಲಕ್ಕೆ ಹೋಗುವಂತೆ ಮಾಡಿದರೆ ಅದು ಪವಾಡ. ಅನೇಕ ರೀತಿಯ ಪವಾಡಗಳಿಂದ ಬಯಲು ಮಾಡುವುದರ ಜೊತೆಗೆ, ಕೆಲವು ಭಕ್ತರು ದೇಹಕ್ಕೆ ಸೂಜಿಗಳಿಂದ ಚುಚ್ಚಿಕೊಳ್ಳುವುದು ಹೇಗೆ ಎಂಬುದನ್ನ ಪ್ರಾಯೋಗಿಕವಾಗಿ ತೋರಿಸಿ, ಅದು ತುಕ್ಕು ಹಿಡಿದರೆ ಅಪಾಯ ಎಂದು ತಿಳಿಸಿದರು. ಈ ಮೌಢ್ಯ ವಿಮೋಚನೆಗಾಗಿ ಅಂಬೇಡ್ಕರ್ ಮತ್ತು ನೆಹರು ಹೆಚ್ಚು ಕೆಲಸವನ್ನು ಮಾಡಿದ್ದಾರೆ. ಒಂದು ದಿನವೂ ದೇವಸ್ಥಾನಕ್ಕೆ ಹೋಗದೆ ಇದ್ದ ಪ್ರಧಾನ ಮಂತ್ರಿ ಎಂದರೆ ಜವಹರಲಾಲ್ ನೆಹರು ಅವರು ಎಂದು ಮಾಹಿತಿ ನೀಡಿದರು.
ಡಾ.ಸಿದ್ದರಾಮರಾಜು ಪ್ರತಿಕ್ರಿಯಿಸಿ, ಮನುಷ್ಯನ ಜೀವನದಲ್ಲಿ ವೈಜ್ಞಾನಿಕ ಪ್ರಜ್ಞೆ ಅತ್ಯಂತ ಅವಶ್ಯಕ ವಾಗಿದೆ. ಪೂರ್ವ ಇತಿಹಾಸ ಕಾಲದಿಂದಲೂ ತನ್ನ ಅರಿವಿಗೆ ಬಾರದ ಪ್ರಾಕೃತಿಕ ಘಟನೆಗಳಿಗೆ ಮನುಷ್ಯ ಭಯದಿಂದ ಬದುಕುತ್ತಾನೆ. ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮೂಳುಗುವ ಸೂರ್ಯ ಮತ್ತು ಆಕಾಶದಲ್ಲಿ ಮಿನುಗುವ ಚಂದ್ರ, ನಕ್ಷತ್ರಗಳು ಅದ್ಭುತ ವಿಸ್ಮಯಗಳಾಗಿ ಪರಿಣಮಿಸುತ್ತದೆ. ಆದ್ದರಿಂದ ಅವುಗಳನ್ನು ಪೂಜಿಸಲು ಪ್ರಾರಂಭಿಸುತ್ತಾರೆ. ಮನುಷ್ಯನ ಚಿಂತನೆಗೆ ನಿಲುಕದ ಎಲ್ಲಾ ವಿಚಾರಗಳು ಮೌಢ್ಯಗಳಾವುತ್ತವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೇಮಂತ್ ಗ್ರಾಮೀಣ ವಿಭಾಗದ ಜನರು ಹೆಚ್ಚು ಮೌಢ್ಯತೆಗೆ ಒಳಗಾಗಿರುವುದಕ್ಕೆ ಕಾರಣ ಅಜ್ಞಾನ. ಆದರೆ ವಿದ್ಯಾವಂತರು ಸಹ ಮೌಢ್ಯತೆಗೆ ಒಳಗಾಗಿರುವುದು ಆಘಾತಕಾರಿ ವಿಷಯ. ಜ್ಞಾನವನ್ನು ಪಡೆದ ವಿದ್ಯಾರ್ಥಿಗಳು ತಮ್ಮ ಸಮುದಾಯಗಳಲ್ಲಿ ಮೂಢನಂಬಿಕೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿ ಅಶ್ವತ್ ಕಲಾ ಬಳಗದ, ನಟರಾಜು, ಮಹೇಶ್ ಮತ್ತು ಸುನೀಲ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಜಗೋಪಾಲ್, ಪ್ರೊ.ಶೈಲಾಜ, ಮುಖಂಡರಾದ, ಮಾಳವ ನಾರಾಯಣ, ಅಜಯ್.ಎಸ್, ವೀರಲಿಂಗಯ್ಯ, ಮಂಜುನಾಥ್, ಗ್ರಾಮಸ್ಥರಾದ ಶ್ರೀಕಂಠ ಮೂರ್ತಿ, ಎಂ ಗಂಗಪ್ಪ, ಚೇತನ್ ಕುಮಾರ್, ಅಂಬೇಡ್ಕರ್ ತಂಡದ ಮುಖ್ಯಸ್ಥ ಎನ್.ಪ್ರಶಾಂತ್ ಇದ್ದರು