ಹೊಸಪೇಟೆ (ವಿಜಯನಗರ) ಜೂನ್ 19 ವಿಜಯನಗರ ಜಿಲ್ಲೆಯ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜೂನ್ 21ರಂದು ಕೆಡಿಪಿ ಸಭೆ ನಡೆಸಲು ವಿಜಯನಗರ ಜಿಲ್ಲೆಯ ಪ್ರವಾಸದಲ್ಲಿರುವ ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶಿಷ್ಟಾಚಾರ ಪಾಲನೆ ಆಗಬೇಕು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಶಿಸ್ತನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲನಲ್ಲಿ ಜೂನ್ 19ರಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಅವರು ಮಾತನಾಡಿದರು.
ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ಆಗಿರುವುದರಿಂದ ಮಹತ್ವದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮರ್ಪಕವಾದ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು. ಇಲಾಖೆಗಳ ಪ್ರಗತಿಗೆ ಪೂರಕವಾಗಿ ಮುಖ್ಯಮಂತ್ರಿಗಳು ಬಯಸುವ ಯಾವುದೇ ಮಾಹಿತಿಯನ್ನು ತಕ್ಷಣ ಕೊಡುವ ಹಾಗೆ ಎಲ್ಲಾ ಮಾಹಿತಿಯೊಂದಿಗೆ ಅಧಿಕಾರಿಗಳು ಬರಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡಬೇಕು. ಕಚೇರಿಯ ಇನ್ನೀತರ ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸದೇ ಜಿಲ್ಲಾಮಟ್ಟದ ಅಧಿಕಾರಿಗಳೇ ಸಭೆಗೆ ಖುದ್ದು ಹಾಜರಾಗಬೇಕು. ನಿಗದಿತ ಸಮಯಕ್ಕೆ ಸಭೆಗೆ ಹಾಜರಾಗಬೇಕು. ಸಭೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಅನವಶ್ಯಕವಾಗಿ ವಿವರಣೆ ನೀಡದೇ ನೇರವಾಗಿ ಉತ್ತರಿಸಬೇಕು. ಗೊಂದಲಕ್ಕೆ ಅವಕಾಶವಿಲ್ಲದ ಹಾಗೆ ವಸ್ತುನಿಷ್ಠವಾಗಿ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜನಪ್ರತಿನಿಧಿಗಳು, ನಾಮ ನಿರ್ದೇಶಿತ ಸದಸ್ಯರು, ಅಧಿಕಾರಿಗಳು, ಪತ್ರಕರ್ತರಿಗೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಮಾಡಬೇಕು. ಪಾಸು ಪಡೆದ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಈ ಬಾರಿ ಮುಂಗಾರು ಮಳೆಗಳು ಉತ್ತಮವಾಗಿ ಸುರಿದಿವೆ. ಬಿತ್ತನೆಯು ಕಾರ್ಯಾರಂಭವಾಗಿದೆ. ಹೋಬಳಿ, ತಾಲೂಕುವಾರು ಮಳೆ ವಿವರ,
ಬಿತ್ತನೆ ಗುರಿ, ಬಿತ್ತನೆ ಬೀಜ ಮತ್ತು ರಸಗೊಬ್ಬರದ ದಾಸ್ತಾನು ಸೇರಿ ಈ ಮಾಹಿತಿಯನ್ನು ಸ್ಪಷ್ಟವಾಗಿ ನೀಡಬೇಕು.
ಜಿಲ್ಲೆಯಲ್ಲಿ ನಡೆಯುತ್ತಿರುವ ಮಹತ್ವದ ಕಾಮಗಾರಿಗಳು, ಅವುಗಳ ಪ್ರಗತಿ, ಟೆಂಡರ್ ಹಂತದಲ್ಲಿರುವ ಕಾಮಗಾರಿಗಳ ಮಾಹಿತಿಯನ್ನು ಅನುಷ್ಠಾನಾಧಿಕಾರಿಗಳು ಸಭೆಗೆ ಸರಿಯಾಗಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತನ ನರೇಗಾ ಯೋಜನೆಯು ಸಹ ಅಚ್ಚುಕಟ್ಟಾಗಿ ಅನುಷ್ಠಾನವಾಗಿದೆ. ಇಂತಹ ಮಹತ್ವದ ಅನೇಕ ಯೋಜನೆಗಳು ವಿಜಯನಗರ ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಂಡ ಬಗ್ಗೆ ಯಶೋಗಾಥೆಯನ್ನು ಆಯಾ ಇಲಾಖೆಯ ಅಧಿಕಾರಿಗಳು
ಪ್ರಾತ್ಯಕ್ಷಿಕೆಯ ಮೂಲಕ ಸಭೆಗೆ ಸಾದರಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಓ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿ ಬಾಬು,
ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ, ಜಿಪಂ ಮುಖ್ಯ ಯೋಜನಾಧಿಕಾರಿ ಅನ್ನದಾನೇಶ್ವರ ಸ್ವಾಮಿ ಜೆ ಎಂ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.