ಈ ಕುರಿತು ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳ (Celebrities) ಹಾಗೂ ಅವರ ಮಕ್ಕಳ ಹುಟ್ಟುಹಬ್ಬ ಆಚರಣೆಯನ್ನು ನಿಷೇಧಿಸುವ ಕುರಿತು ಎಂಬ ವಿಷಯ ಒಳಗೊಂಡಿದೆ.
ಸುತ್ತೋಲೆಯ ವಿವರ: ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು, Celebrities, ರಾಜಕೀಯ ಮುಖಂಡರುಗಳು, ಮಠಾಧೀಶರು ಇತ್ಯಾದಿ ತಮ್ಮ ಅಥವಾ ತಮ್ಮ ಮಕ್ಕಳ ಜನ್ಮ ದಿನವನ್ನು ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಇತ್ಯಾದಿ ಹಂಚುವ ಮೂಲಕ ಅದ್ದೂರಿಯಾಗಿ ಆಚರಿಸುತ್ತಿರುವುದು ತಿಳಿದು ಬಂದಿದೆ.ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲಾಗುವ ಮಕ್ಕಳು ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು. ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ, ಬಾಲ್ಯ ವಿವಾಹಕ್ಕೆ ಒಳಗಾದ, ಅತ್ಯಾಚಾರಕ್ಕೆ ಒಳಗಾದ, ತಂದೆ-ತಾಯಿಯಿಂದ ತಿರಸ್ಕರಿಸಲ್ಪಟ್ಟ, ತಾಯಿ ಅಥವಾ ತಂದೆ ಇಲ್ಲದ, ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟ ಇತ್ಯಾದಿ ಪಾಲನೆ ಮತ್ತು ರಕ್ಷಣೆಯ ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಬಾಲನ್ಯಾಯ ಮಂಡಳಿಗಳ ಆದೇಶದ ಮೂಲಕ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲು ಮಾಡಲಾಗಿರುತ್ತದೆ.
ಈ ಎಲ್ಲಾ ವರ್ಗದ ಮಕ್ಕಳು ಸಮಾಜದಿಂದ ವಂಚಿತರಾಗಿ ಮನನೊಂದವರಾಗಿರುವುದರಿಂದ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಾಗಿರುವ ಮಕ್ಕಳ ಮನಸ್ಸಿಗೆ ಖುಷಿ ತರುವಂತಹ ಸೃಜನಶೀಲತೆಯ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಕ್ಕಳ ಮನಸ್ಸು ಸಧೃಡ ಹಾಗೂ ಆಹ್ಲಾದಕರವಾಗುವಂತೆ ಪ್ರೋತ್ಸಾಹಿಸಬೇಕಾಗುತ್ತದೆ. ಆದರೆ ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು, Celebrities ಇತ್ಯಾದಿ ಗಣ್ಯವ್ಯಕ್ತಿಗಳು ಅವರ ಹಾಗೂ ಅವರ ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಇತ್ಯಾದಿ ಹಂಚುವ ಅದ್ಧೂರಿ ಕಾರ್ಯಕ್ರಮಗಳು ಸಂಸ್ಥೆಯಲ್ಲಿ ಆಚರಿಸುವುದರಿಂದ ಮಕ್ಕಳ ಪಾಲನಾ ಸಂಸ್ಥೆಯ ಮಕ್ಕಳಿಗೆ ಅವರ ಹುಟ್ಟು ಹಬ್ಬ ಈ ರೀತಿ ಆಚರಿಸಿಕೊಳ್ಳಲು ಸಾಧ್ಯವಾಗದೇ ಆಚರಿಸಲ್ಪಡುತ್ತಿರುವ ಹುಟ್ಟುಹಬ್ಬದೊಂದಿಗೆ ಹೋಲಿಕೆ (comparision) ಮಾಡಿಕೊಂಡಲ್ಲಿ ಈ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿ, ಮನಸ್ಸಿಗೆ ಆಘಾತವಾಗಿ ಮಕ್ಕಳ ಮನಸ್ಸು ದುರ್ಬಲವಾಗುವ ಸಂಭವ ಹೆಚ್ಚಾಗಿರುತ್ತದೆ
ಇಂತಹ ಆಚರಣೆಗಳು, ಸದರಿ ಮಕ್ಕಳ ಆತ್ಮಾಭಿಮಾನ, ಆತ್ಮಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ. ಸದರಿ ಮಕ್ಕಳು ಕುಟುಂಬದಲ್ಲಿ ಬೆಳೆಯುವ ಬೇರೆ ಯಾವುದೇ ಮಗುವಿಗಿಂತ ಕಡಿಮೆ ಇಲ್ಲ ಎಂಬ ಭಾವನೆಯನ್ನು ಕಾಪಾಡುವ ಸಲುವಾಗಿ ಈ ಮಕ್ಕಳ ಹುಟ್ಟು ಹಬ್ಬ ಹಾಗೂ ಸರ್ಕಾರದ ಆದೇಶದ ಮೂಲಕ ನಿಗದಿಪಡಿಸಿದ ವ್ಯಕ್ತಿಗಳ ಹುಟ್ಟುಹಬ್ಬ ಆಚರಣೆಯನ್ನು ಹೊರತು ಪಡಿಸಿ, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಬೇರೆ ಯಾರ ಹುಟ್ಟುಹಬ್ಬ ಆಚರಿಸುವುದನ್ನು ಈ ಮೂಲಕ ನಿಷೇಧಿಸಿದೆ ಎಂದು ಸೊತ್ತೋಲೆ ಹೇಳಿದೆ. ಕರ್ನಾಟಕದಲ್ಲಿ ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ಕಾಯ್ದೆ, 2015ರ ಸೆಕ್ಷನ್ 41(1) ಹಾಗೂ ಬಾಲನ್ಯಾಯ ಕಾಯ್ದೆ, ಮಾದರಿ ನಿಯಮಗಳು, 2016ರಂತೆ ನಿರ್ದೇಶಕರು, ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಇವರನ್ನು ಬಾಲನ್ಯಾಯ ಕಾಯ್ದೆ, 2015ರಡಿ ಮಕ್ಕಳ ಪಾಲನಾ ಸಂಸ್ಥೆಗಳನ್ನು ನೋಂದಣಿ ಮಾಡುವ ಅಧಿಕಾರಿಯೆಂದು ಸರ್ಕಾರದ ಆದೇಶ ಹೊರಡಿಸಿದೆ. ರಾಜ್ಯದಲ್ಲಿ 2021-22ನೇ ಮಾರ್ಚ್ ಅಂತ್ಯದವರೆಗೆ 909 ಸಂಸ್ಥೆಗಳು ನೋಂದಣಿಯಾಗಿದ್ದು, 140 ಸಂಸ್ಥೆಗಳ ನೋಂದಣಿಯನ್ನು ರದ್ದು ಮಾಡಲಾಗಿದೆ. 39 ಸಂಸ್ಥೆಗಳ ನೋಂದಣಿ ಮತ್ತು ನವೀಕರಣ ಮಾಡಲಾಗಿರುತ್ತದೆ ಮತ್ತು 240ಕ್ಕೂ ಹೆಚ್ಚು ಮಕ್ಕಳ ಪಾಲನಾ ಸಂಸ್ಥೆಗಳ ಪ್ರಸ್ತಾವನೆಗಳು ನೋಂದಣಿ ಮತ್ತು ನವೀಕರಣಕ್ಕಾಗಿ ಬಂದಿದ್ದು, ಅಗತ್ಯ ದಾಖಲಾತಿಗಳ ಪರೀಶಿಲನೆ ನಡೆಸಿದ ಬಳಿಕ ಅನುಮತಿ ನೀಡಲಾಗುತ್ತದೆ.