ಬಳ್ಳಾರಿ,ಜೂ.27
ಕಲುಷಿತ ನೀರಿನಿಂದ ಮತ್ತು ಕಲುಷಿತ ಆಹಾರ ಸೇವನೆಯಿಂದ ಸಾಮಾನ್ಯವಾಗಿ ವಾಂತಿ ಬೇಧಿ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಲು ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದರು.
ಬಳ್ಳಾರಿ ತಾಲ್ಲೂಕಿನ ವೈ. ಕಗ್ಗಲ್ ಗ್ರಾಮದಲ್ಲಿ ಶಂಕಿತ ವಾಂತಿ ಬೇಧಿ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ನೀಡಿ ಅವರು ಮಾತನಾಡಿದರು.
ಓಆರ್ಎಸ್ ಜೀವಜಲವನ್ನು ತಯಾರಿಸುವಾಗ 1 ಲೀಟರ್ ನೀರಿಗೆ ಇಲಾಖೆಯಿಂದ ನೀಡುವ ಓಆರ್ಎಸ್ ಪೊಟ್ಟಣದ ಪುಡಿಯವನ್ನು ಸಂಪೂರ್ಣವಾಗಿ ಹಾಕಿ ಮಿಶ್ರಣ ಮಾಡಿದ ದ್ರಾವಣವನ್ನು ವಾಂತಿ ಭೇದಿ ಭಾದಿತರಿಗೆ ಕುಡಿಯಲು ಕೊಡಬೇಕು. 24 ಗಂಟೆಯೊಳಗಡೆ ಸಂಪೂರ್ಣವಾಗಿ ಬಳಸಬೇಕು ಮತ್ತು ವಾಂತಿ ಭೇದಿ ಪ್ರಕರಣ ನಿಯಂತ್ರಿಸಲು ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ಕಲುಷಿತ ನೀರಿನ ಸೇವನೆಯಿಂದ ಸಾಮಾನ್ಯವಾಗಿ ವಾಂತಿ-ಬೇದಿ, ಕಾಲರಾ, ಟೈಪಾಯಿಡ್, ಹೆಪಟೈಟಸ್-ಎ, ಗಿಯಾರ್ಡಿಯಾ, ಸಾಲ್ಮೋನೆಲ್ಲಾ ಶಿಗೆಲ್ಲೋಸಿಸ್, ಅಮೀಬಿಯಾಸಿಸ್, ಇ-ಕೋಲಿ (ಇವುಗಳಲ್ಲಿ ವಾಂತಿ-ಭೇದಿ, ಕಾಲರಾ, ಹೆಪಟೈಟಸ್-ಎ, ಕಲುಷಿತ ಆಹಾರ ಸೇವನೆ) ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಅರಿವು ಮೂಡಿಸಿದರು.
ಪ್ರಸ್ತುತ ಗ್ರಾಮದಲ್ಲಿ ರೋಗ ಸಂಪೂರ್ಣ ನಿಯಂತ್ರಣದಲ್ಲಿದ್ದು, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ದಿನದ 24 ಗಂಟೆ ವೈದ್ಯಕೀಯ ತಂಡ ಸ್ಥಳದಲ್ಲಿಯೇ ಇದ್ದು, ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಲಾಗಿದೆ ಎಂದರು.
ಸ್ಥಳೀಯ ಆಶಾ ಕಾರ್ಯಕರ್ತೆಯರು ಮತ್ತು ಕ್ಷೇತ್ರ ಸಿಬ್ಬಂದಿಯವರ 9 ತಂಡಗಳನ್ನು ರಚಿಸಿ, ಮನೆ ಮನೆಗೆ ಭೇಟಿ ನೀಡಿ ಜಾಗೃತಿ ನೀಡಲಾಗುತ್ತಿದ್ದು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಮೈಕಿಂಗ್ ಹಾಗೂ ಸ್ವಚ್ಛತೆ ಕುರಿತು ಪ್ರಾತ್ಯಕ್ಷತೆಯನ್ನು ಮಾಡಿಸಲಾಗುತ್ತಿದೆ. ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕಾಲಾರ ನಿಯಂತ್ರಣ ತಂಡವು ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಸಾರ್ವಜನಿಕರು ಶುದ್ದ ನೀರಿನ ಘಟಕದ ನೀರನ್ನು ಕುಡಿಯಬೇಕು ಎಂದು ವಿನಂತಿಸಿದರು.
ಮಲ-ಮೂತ್ರ ವಿಸರ್ಜನೆಗಾಗಿ ಶೌಚಾಲಯಗಳನ್ನೇ ಬಳಸಬೇಕು. ತಂಗಳು ಆಹಾರ ಸೇವಿಸದೇ ಬೆಳಗಿನ ಆಹಾರ ಬೆಳಿಗ್ಗೆ ಹಾಗೂ ರಾತ್ರಿ ಆಹಾರ ರಾತ್ರಿ ಮಾತ್ರ ಬಳಸಬೇಕು. ತಯಾರಿಸಿದ ಅಹಾರದÀ ಮೇಲೆ ನೊಣಗಳು ಕೂಡದಂತೆ ಮುಚ್ಚಳ ಮುಚ್ಚಬೇಕು. ಕುಡಿಯುವ ನೀರು ತುಂಬಿದ ನಂತರ ಪಾತ್ರೆಗಳಿಗೆ ಮುಚ್ಚಳ ಮುಚ್ಚಿ. ಆದಷ್ಟು ನಳ ಇರುವ ಪಾತ್ರೆಗಳನ್ನು ಬಳಸಿ. ನೀರಿನಲ್ಲಿ ಕೈ ಅದ್ದದಂತೆ ಮುಂಜಾಗೃತೆ ವಹಿಸಿ ಎಂದರು.
ವಾಂತಿ-ಭೇದಿ ಅಥವಾ ಕಾಲರಾ ಸೋಂಕಿತರಿಗೆ ಮನೆಯಲ್ಲಿಯೆ ತಯಾರಿಸಿದ ಗಂಜಿ, ಬೇಳೆ ತಿಳಿ, ನಿಂಬು ಪಾನಕ ಹಾಗೂ ಎಳೆನೀರು ಕೊಡುವುದನ್ನು ನಿಲ್ಲಿಸಬಾರದು. ಊಟದ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತಪ್ಪದೇ ತೊಳೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ಲಾ, ಚೆಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಕಾವ್ಯಶ್ರೀ, ಡಾ.ಪ್ರಹ್ಲಾದ್, ಡಾ.ಕಮ್ಮರ್ ತಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಾ.ಸಾತ್ವಿಕ್, ಡಾ.ಪ್ರಸನ್ನ, ಸಿಹೆಚ್ಓ ಮೌನಿಕ, ಸಂತೋಷ್ ಕವಿತ, ಬಿಹೆಚ್ಇಓ ಶಾಂತಮ್ಮ ಉಪ್ಪಾರ, ಜಿಲ್ಲಾ ಕಾಲರಾ ನಿಯಂತ್ರಣ ತಂಡದ ಕೆ.ಎಮ್.ಶಿವಕುಮಾರ, ತಿಪ್ಪೆಸ್ವಾಮಿ, ಕಾಸಿಂ ವಲಿ, ಉಮಾ ಮಹೇಶ್ವರಿ, ಎಲ್ಹೆಚ್ವಿ ವೈ.ಚಂದ್ರಕಲಾ, ಹೆಚ್ಐಓ ಹುಲಿಗೇಶ್, ಸಿದ್ದರಾಮಪ್ಪ, ಕುಮಾರ್, ಪಿಹೆಚ್ಸಿಓ ದುರುಗಮ್ಮ, ನಾಗಮ್ಮ, ಕವಿತ ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಹಾಜರಿದ್ದರು.