Ad image

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಡೆಂಗ್ಯು ನಿಯಂತ್ರಣ: ಗುಣಾತ್ಮಕ ಲಾರ್ವ ಸಮೀಕ್ಷೆ, ಅಂತರ್ ವೈಯಕ್ತಿಕ ಸಮಾಲೋಚನಾ ಶಿಕ್ಷಣ ಅವಶ್ಯ

Vijayanagara Vani
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಡೆಂಗ್ಯು ನಿಯಂತ್ರಣ: ಗುಣಾತ್ಮಕ ಲಾರ್ವ ಸಮೀಕ್ಷೆ, ಅಂತರ್ ವೈಯಕ್ತಿಕ ಸಮಾಲೋಚನಾ ಶಿಕ್ಷಣ ಅವಶ್ಯ
ಚಿತ್ರದುರ್ಗ
ಡೆಂಗ್ಯೂ ನಿಯಂತ್ರಣಕ್ಕೆ ಗುಣಾತ್ಮಕ ಲಾರ್ವ ಸಮೀಕ್ಷೆ, ಅಂತರ್ ವೈಯಕ್ತಿಕ ಸಮಾಲೋಚನಾ ಶಿಕ್ಷಣ ಅವಶ್ಯಕ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಚಿತ್ರದುರ್ಗ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡೆಂಗ್ಯೂ ನಿಯಂತ್ರಣಕ್ಕಾಗಿ ಜೂನ್ 25 ರಿಂದ 27 ರವರೆಗೆ ಮೂರು ದಿನಗಳ ಕಾಲ ಡೆಂಗ್ಯೂ ಪ್ರಕರಣಗಳು ಹೆಚ್ಚು ಕಂಡು ಬಂದಿರುವ ಚಿತ್ರದುರ್ಗ ನಗರದ 35 ವಾರ್ಡ್ಗಳ ಎಲ್ಲಾ ಮನೆ ಮನೆಗಳ ಭೇಟಿ, ಲಾರ್ವಾ ಸಮೀಕ್ಷೆ, ಜ್ವರ ಸಮೀಕ್ಷೆ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಎಲ್ಲಾ ವಾರ್ಡ್ಗಳಲ್ಲಿ ವಿಶೇಷ ಲಾರ್ವ ಸಮೀಕ್ಷೆ ಹಮ್ಮಿಕೊಂಡಿದೆ. ಡೆಂಗ್ಯೂ ನಿಯಂತ್ರಣಕ್ಕೆ ಗುಣಾತ್ಮಕ ಲಾರ್ವ ಸಮೀಕ್ಷೆ, ಅಂತರ್ ವೈಯಕ್ತಿಕ ಸಮಾಲೋಚನಾ ಶಿಕ್ಷಣ ಅವಶ್ಯಕ ಎಂದರು.
ಜಿಲ್ಲಾ ಆಶ್ರಿತ ರೋಗಗಳ ರೋಗವಾಹಕ ನಿಯಂತ್ರಣಾಧಿಕಾರಿ ಡಾ.ಕಾಶಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದ್ದರಿಂದ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಭೆಯಲ್ಲಿ ಜಿಲ್ಲಾಧಿಕಾರಿಗಳವರ ಮಾರ್ಗದರ್ಶನದಂತೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಲಾರ್ವಾ ಸಮೀಕ್ಷೆ ಹಮ್ಮಿಕೊಂಡಿದೆ. ಒಟ್ಟು 36 ವಾರ್ಡ್ 3 ನಗರ ಆರೋಗ್ಯ ಕೇಂದ್ರಗಳಿಂದ ಒಟ್ಟು 41117 ಮನೆ ಮನೆ ಭೇಟಿ, ಲಾರ್ವಾ ಸಮೀಕ್ಷೆ, ಜ್ವರ ಪರೀಕ್ಷೆ ಅಲ್ಲಲ್ಲಿ ಗುಂಪು ಸಭೆಯ ಮೂಲಕ ಡೆಂಗ್ಯೂ ನಿಯಂತ್ರಣ ಮಾಹಿತಿ ಶಿಕ್ಷಣ ನೀಡುವುದರ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ. ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಿ. ಘನತ್ಯಾಜ್ಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಿ. ಹಂಚು, ಒಡೆದ ಮಡಕೆ, ಪ್ಲಾಸ್ಟಿಕ್ ಬಾಟಲ್, ಎಳನೀರಿನ ಚಿಪ್ಪು ಇವುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿ ತಾಣಗಳಾಗದಂತೆ ಕಾಳಜಿವಹಿಸಿ, ಹೂವಿನ ಗಿಡಗಳ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಡೆಂಗ್ಯೂ ಬಗ್ಗೆ ಆತಂಕ ಭಯ ಬೇಡ ವಾರಕ್ಕೊಮ್ಮೆಯಾದರು ನೀರು ಸಂಗ್ರಹಿಸುವ ತೊಟ್ಟಿ ಟ್ಯಾಂಕ್ ಬ್ಯಾರೆಲ್ ಸ್ವಚ್ಛವಾಗಿ ತೊಳೆದು ಒಣಗಿಸಿ ನೀರು ಸಂಗ್ರಹಿಸಿ ಮುಚ್ಚಳ ಮುಚ್ಚಿ. ತೀವ್ರ ಜ್ವರ, ತಲೆನೋವು ಕಣ್ಣಿನ ಹಿಂಭಾಗ ನೋವು, ಮೈಕೈ ನೋವು ಕಂಡು ಬಂದಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ ಹತ್ತಿರದ ನಗರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ, ಚಿಕಿತ್ಸೆ ಸಲಹೆ ಪಡೆದುಕೊಳ್ಳಿ. ಸಾರ್ವಜನಿಕರೆ ಎಚ್ಚರವಾಗಿ, ಬುದ್ದಿವಂತರಾಗಿ ಸೊಳ್ಳೆಗಳ ಕಡಿತದಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಿ. ಮಾರಣಾಂತಿಕ ಡೆಂಗ್ಯೂ ನಿಯಂತ್ರಿಸಿ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುರೇಶ್ ಬಾಬು, ಪ್ರಸನ್ನಕುಮಾರ್, ನಾಗರಾಜ್, ಸಿರೀಶ್, ಶ್ರೀನಿವಾಸ್, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ಪರ್ವಿನ್, ಸುಶೀಲಾ, ಆಶಾ ಕಾರ್ಯಕರ್ತೆ ಜರೀನಾ, ಗೀತಾ ಉಪಸ್ಥಿತರಿದ್ದರು.

Share This Article
error: Content is protected !!
";