Ad image

ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ಶೀಘ್ರ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್”

Vijayanagara Vani
ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ಶೀಘ್ರ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್”
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 29: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ವಿಳಂಬ ಮಾಡದೆ ಕೂಡಲೇ ಸಂಭಂದಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 2024ನೇ ಕ್ಯಾಲೆಂಡರ್ ವರ್ಷದ 2ನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಯಾವುದೇ ರೀತಿಯ ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ಶೀಘ್ರವಾಗಿ ಪ್ರಕರಣ ದಾಖಲಿಸಿ ಅದರ ವಿರುದ್ಧ ಕ್ರಮ ಕೈಗೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ಇಂತಹ ಘಟನೆಗಳು ಸಂಭವಿಸದಂತೆ ಅಧಿಕಾರಿಗಳು ಎಚ್ಚರವಹಿಸಲು ಸೂಚನೆ ನೀಡಿದರು.
ಎಲ್ಲಾ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಕುಂದು ಕೊರತೆ ಸಭೆಯನ್ನು ಪ್ರತಿ 3 ತಿಂಗಳಿಗೊಮ್ಮೆ ವರ್ಷದಲ್ಲಿ ಒಟ್ಟು 4 ಸಭೆಗಳನ್ನು ನಡೆಸಬೇಕಾಗಿದ್ದು, 2024ನೇ ಕ್ಯಾಲೆಂಡರ್ ವರ್ಷಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಸಭೆಗಳನ್ನು ಶೀಘ್ರವಾಗಿ ನಡೆಸಿ ಎಂದು ಹೇಳಿದರು.
ಉಪವಿಭಾಗದ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಗಳನ್ನು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ವರ್ಷದಲ್ಲಿ ಒಟ್ಟು ನಾಲ್ಕು ಸಭೆಗಳನ್ನು ನಡೆಸಬೇಕಾಗಿರುತ್ತದೆ, ಈಗಾಗಲೇ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಒಂದು ಸಭೆಯನ್ನು ನಡೆಸಲಾಗಿದ್ದು, ಇನ್ನು ಬಾಕಿ ಇರುವ 3 ಸಭೆಗಳು ನಡೆಸಲು ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಕಾಯ್ದೆಯಲ್ಲಿ ಪ್ರಕರಣಗಳು ದಾಖಲಾದ ಕೂಡಲೇ ಪ್ರಥಮ ವರ್ತಮಾನ ವರದಿ ಆಧಾರದ ಮೇಲೆ ಪರಿಹಾರ ಧರವನ್ನು ಮಂಜೂರು ಮಾಡಬೇಕಾಗಿರುವುದರಿಂದ ಪ್ರಥಮ ವರ್ತಮಾನ ವರದಿ ಹಾಗೂ ಇತರ ದಾಖಲಾತಿಗಳನ್ನು ಜಿಲ್ಲಾ ತಾಲೂಕು ಕಚೇರಿಗಳಿಗೆ ಇ-ಮೇಲ್ ಮೂಲಕ ಕಳುಹಿಸಲು‌ ತಿಳಿಸಿದರು.
ದೌರ್ಜನ್ಯ ಪ್ರಕರಣಗಳ ದಾಖಲು, ಪರಿಹಾರ ಧನದ ಮಂಜೂರಾತಿ ವಿವರಗಳ ಪರಿಶೀಲನೆ ನಡೆಸಿದ ಅವರು ದಿನಾಂಕ ಜನವರಿ ಮಾಹೆಯಿಂದ ದಿನಾಂಕ ಜೂನ್ ಮಾಹೆಯ ವರೆಗೆ ಒಟ್ಟು 41 ಜನ ಸಂತ್ರಸ್ತರಿಗೆ ಒಟ್ಟು ರೂ. 30,62,500 ಗಳ ಪರಿಹಾರ ಧನವನ್ನು ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸುವ ಚಾರ್ಜ್ ಶೀಟ್ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಳ್ಳೆಯ ಪ್ರಗತಿ ಇದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಹಾಗೂ ಗಲಭೆ/ಗುಂಪು ಗಲಭೆಗಳು ಹೆಚ್ಚಾಗಿ ಕಂಡುಬಂದ ಹಳ್ಳಿಗಳನ್ನು ಗುರುತಿಸಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಶಾಂತಿಸಭೆ ನಡೆಸಲು ನಿರ್ದೇಶನ‌ ನೀಡಿದರು.
ಪೊಲೀಸ್ ಠಾಣೆಗಳಲ್ಲಿ ನಡೆಯುವ ಕುಂದು ಕೊರತೆ ಸಭೆಗಳಿಗೆ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರನ್ನು ಆಹ್ವಾನಿಸಿದ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಬಳಿ ಪಡೆದುಕೊಂಡರು.
ಮಾರ್ಚ್ 16 ರಿಂದ ಜೂನ್ 27 ರ ವರೆಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ದೌರ್ಜನ್ಯ ಕಾಯ್ದೆ 1989 ರನ್ವಯ ದೌರ್ಜನ್ಯದಲ್ಲಿ ನೊಂದ ಸಂತ್ರಸ್ತರಿಗೆ ಮಂಜೂರು ಮಾಡಿದ ಪರಿಹಾರ ಒಟ್ಟು ಮೊತ್ತ ರೂ.18,94,958 ಆಗಿರುತ್ತದೆ.
ಜನವರಿ ಮಾಹೆಯಿಂದ ಮೇ ಮಾಹೆಯ ವರೆಗೆ ಜಿಲ್ಲೆಯಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳ ಸಂಖ್ಯೆ 34 ಆಗಿದೆ‌. ಪರಿಹಾರಕ್ಕೆ ಮಂಜೂರು ಮಾಡಿದ ಒಟ್ಟು ಮೊತ್ತ ರೂ‌.30,62,500 ಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್ ಅನುರಾಧ, ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ನಾಗಾರಜು, ಉಪ ವಿಭಾಗಾಧಿಕಾರಿ ಶ್ರೀನಿವಾಸ್, ದೊಡ್ಡಬಳ್ಳಾಪುರ ತಾಲ್ಲೂಕು ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ಹೊಸಕೋಟೆ ತಾಲ್ಲೂಕು ತಹಶೀಲ್ದಾರ್ ವಿಜಯ ಕುಮಾರ್, ನಾಲ್ಕು ತಾಲ್ಲೂಕು ಡಿವೈಎಸ್ಪಿ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪ್ರೇಮಾ ಟಿ.ಎಲ್‌.ಎಸ್ , ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Share This Article
error: Content is protected !!
";