ದಾವಣಗೆರೆ ಜು.04ತುಂಗಭದ್ರಾ ನದಿಯಿಂದ ಜಗಳೂರು ತಾಲ್ಲೂಕಿನ 47 ಹಾಗೂ ಹರಪನಹಳ್ಳಿ ತಾಲ್ಲೂಕಿನ 6 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದ್ದು ಮುಂಗಾರಿನಲ್ಲಿ 30 ಕೆರೆಗಳಿಗೆ ನೀರು ತುಂಬಿಸಲು ಪ್ರಾಯೋಗಿಕ ಹರಿವು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಗುರುವಾರ ತುಂಗಭದ್ರಾ ನದಿಗೆ ದೀಟೂರು ಬಳಿ ನಿರ್ಮಿಸಿರುವ ಪಂಪ್ ಹೌಸ್ ಮತ್ತು ಜಗಳೂರು ತಾಲ್ಲೂಕಿನ ತುಪ್ಪದಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆ ವೀಕ್ಷಣೆ ಮಾಡಿ ಮಾತನಾಡಿದರು.
ಜಗಳೂರು ತಾಲ್ಲೂಕಿನ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಯನ್ನು ರೂ. 660.34 ಕೋಟಿಯಲ್ಲಿ ಕೈಗೊಂಡು 2019 ರ ಡಿಸೆಂಬರ್ 9 ರಿಂದ ಕಾಮಗಾರಿ ಆರಂಭಿಸಲಾಗಿದೆ. ಯೋಜನೆಯಡಿ 1.379 ಟಿಎಂಸಿ ನೀರು ಮಳೆಗಾಲದಲ್ಲಿ ಬಳಕೆ ಮಾಡಿಕೊಂಡು ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ.
ಈ ಯೋಜನೆಯಿಂದ 65 ಗ್ರಾಮಗಳಿಗೆ ಅನುಕೂಲವಾಗಲಿದ್ದು 1 ಲಕ್ಷ ರೈತರಿಗಿಂತ ಹೆಚ್ಚು ಜನರಿಗೆ ಉಪಯೋಗವಾಗುವ ಜೊತೆಗೆ ತಾಲ್ಲೂಕಿನ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಸಮಸ್ಯೆ ನಿವಾರಣೆಯಾಗಲಿದೆ.
ಯೋಜನೆಯಡಿ 220.68 ಕಿ.ಮೀ ಮುಖ್ಯ ಪೈಪ್ ಲೈನ್ ಉದ್ದ ಇರಲಿದೆ. ಎಂ.ಎಸ್ ಪೈಪ್ 142.62 ಕಿ.ಮೀ ಇದ್ದು 115 ಕಿ.ಮೀ ಅಳವಡಿಸಲಾಗಿದೆ. ಜಾಕ್ ವೆಲ್ ಮತ್ತು ಪಂಪ್ ಹೌಸ್ ಕಾಮಗಾರಿ ಮುಗಿದಿರುವುದರಿಂದ ಈಗಾಗಲೇ ನೀರೆತ್ತುವ ಪ್ರಾಯೋಗಿಕ ಕಾರ್ಯ ಆರಂಭಿಸಲಾಗಿದ್ದು ಪ್ರಸಕ್ತ ಮುಂಗಾರಿನಲ್ಲಿ 30 ಕೆರೆಗಳಿಗೆ ನೀರು ಪಂಪ್ ಮಾಡಿ ಭರ್ತಿ ಮಾಡಲಾಗುತ್ತದೆ ಎಂದರು.
ವೀಕ್ಷಣೆಯಲ್ಲಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.