ರಾಜ್ಯದಲ್ಲಿ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಜಲಾಶಯಗಳ ನೀರಿನ ಮಟ್ಟ ಕ್ರಮೇಣ ಹೆಚ್ಚಾಗುತ್ತಿದೆ. ಇದರಿಂದಾಗಿ ರೈತರು ಖುಷಿಯಾಗಿದ್ದಾರೆ. ಆದರೆ ಮಳೆಗಾಲದ ಆರಂಭದಲ್ಲಿ ಚಿಕ್ಕಮಗಳೂರಿನ ಜನರಿಗೆ ಆತಂಕ ಶುರುವಾಗಿದೆ.
ಹೌದು… ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನಲ್ಲಿ ಐದಾರು ಕಡೆ ಭೂಮಿ ಬಿರುಕುಗೊಂಡಿದೆ. ಇದರಿಂದಾಗಿ ಜನ ಭಯಭೀತರಾಗಿದ್ದಾರೆ. ರಾಜ್ಯದ ಯಾವುದೇ ಭಾಗದಲ್ಲೂ ಮಳೆ ಕಡಿಮೆಯಾದರೂ ಚಾರ್ಮಾಡಿ ಘಾಟಿನಲ್ಲಿ ಮಳೆ ಕೊರತೆ ಇರುವುದಿಲ್ಲ. ಹೀಗಿದ್ದರು ಭೂಮಿ ಬಾಯಿಬಿಟ್ಟಿರುವುದು ಆತಂಕವನ್ನು ಹೆಚ್ಚಿಸಿದೆ.
ಚಾರ್ಮಾಡಿ ಘಾಟಿಯಿಂದ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವುದರಿಂದ ಹಿಡಿದು, ಹಣ್ಣು-ತರಕಾರಿಗಳನ್ನು ಸಾಗಿಸುವವರೆಗೂ ನಿತ್ಯ ಸಾಲುಗಟ್ಟಿ ವಾಹನಗಳು ಸಂಚಾರ ಮಾಡುತ್ತವೆ. ಹೀಗೆ ನಾನಾ ಅಗತ್ಯಗಳಿಗಾಗಿ ಮಾರ್ಗವಾಗಿರುವ ಚಾರ್ಮಾಡಿ ಘಾಟಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿರುವ ಅನುಮಾನ ಮೂಡಿದೆ. ಚಾರ್ಮಾಡಿ ಘಾಟಿನಲ್ಲಿ ನಿತ್ಯ ಧಾರಾಕಾರ ಮಳೆಯಾಗುತ್ತಿದ್ದು ಭೂಮಿ ಬಿರುಕುಗೊಂಡಿದೆ. ಭೂಮಿ ಮಾತ್ರವಲ್ಲದೆ ತಡೆ ಗೋಡೆಗಳೂ ಬಿರುಕು ಬಿಟ್ಟಿವೆ. ಹೀಗಾಗಿ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದಿರುವಂತೆ ಸವಾರರಿಗೆ ಸೂಚನೆ ನೀಡಲಾಗಿದೆ.
ಈ ಘಟನೆ ಸದ್ಯ ಸ್ಥಳೀಯರಿಗೆ ಹಿಂದಿನ ಘಟನೆಯನ್ನು ನೆನಪಿಸುತ್ತಿದೆ. 2019ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ರಸ್ತೆ ಸುಮಾರು 200-300 ಅಡಿ ಆಳಕ್ಕೆ ಕುಸಿದಿತ್ತು. ಅಷ್ಟು ಆಳದಿಂದಲೂ ಕೂಡ ಕಾಂಕ್ರೀಟ್ ವಾಲ್ ನಿರ್ಮಿಸಿ ರಸ್ತೆಗೆ ಬಂದೋಬಸ್ತ್ ಮಾಡಿದ್ದರು. ಆದರೆ ಈ ವಾಲ್ ಕೂಡ ಜರುಗಲಾರಂಭಿಸಿದೆ. ಇದರಿಂದಾಗಿ ಮತ್ತಷ್ಟು ಆತಂಕ ಹೆಚ್ಚಿದೆ. ಘಾಟಿ ಕ್ರಮೇಣ ತನ್ನ ಸಾಮಾರ್ಥ್ಯ ಕಳೆದುಕೊಳ್ಳುತ್ತಿದೆ ಎಂಬ ಅನುಮಾನ ಶುರುವಾಗಿದೆ.
ಅಲ್ಲದೆ ಇಲ್ಲಿನ ಕಾಮಗಾರಿಗಳು ಕಳಪೆಯಾಗಿದ್ದು ಗುಣಮಟ್ಟದ ಕೆಲಸ ನಡೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಡೆ ಗೋಡೆ ನಿರ್ಮಾಣದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಖರ್ಚು ಮಾಡಿದ ಹಣದಷ್ಟು ಕಾಮಗಾರಿ ನಡೆದಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಚಿಕ್ಕಮಗಳೂರು ಬಾರವಾದ ವಾಹನ ಸಂಚಾರ ನಿಷೇಧ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಶುಕ್ರವಾರದಿಂದ (ಜುಲೈ 5) ಜಾರಿಗೆ ಬರುವಂತೆ ಜಿಲ್ಲೆಯಾದ್ಯಂತ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಅಧಿಕ ಭಾರ ಹೊತ್ತು ಸಂಚರಿಸುವ ವಾಹನಗಳನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಮಾನ್ಯ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜುಲೈನಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಅಧಿಕ ಬಾರಹೊತ್ತು ಸಂಚರಿಸುವ ಲಾರಿಗಳ ಓಡಾಟದಿಂದ ಗುಡ್ಡ, ರಸ್ತೆಗಳು, ಮೋರಿ/ಸೇತುವೆಗಳು ಮತ್ತು ಚರಂಡಿಗಳು ಅಧಿಕ ತೇವಾಂಶದಿಂದ ಧಾರಣೆ ಸಾಮರ್ಥ್ಯ ಕಡಿಮೆಯಾಗಿ ಕುಸಿಯುವ ಸಾಧ್ಯತೆಗಳಿದೆ. ಈ ಕಾರಣ ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂದಿನ ಕೋರಿಕೆವರೆಗೆ ಲೋಕೊಪಯೋಗಿ ಇಲಾಖೆ ವ್ಯಾಪ್ತಿಯ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 12,000 ಕೆಜಿಗೂ ಮೇಲ್ಪಟ್ಟ ಭಾರ ಹೊತ್ತ ವಾಹನಗಳ ಸಂಚಾರವನ್ನು ನಿಷೇದಿಸಲಾಗಿದೆ.