ಬಳ್ಳಾರಿ,ಜು.08
ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನ ಮುಂಗಾರು ಹಂಗಾಮು ಅವಧಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಹ ರೈತರು ತಮ್ಮ ಬೆಳೆಗಳಿಗೆ ವಿಮೆಗೆ ನೋಂದಾಯಿಸಿಕೊಳ್ಳಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ರತ್ನಪ್ರಿಯ ಯರಗಲ್ಲ ಅವರು ತಿಳಿಸಿದ್ದಾರೆ.
ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ ಮತ್ತು ಬೆಳೆ ಮುಳುಗಡೆ, ಗುಡುಗು ಮಿಂಚುಗಳಿಂದ ಬೆಳೆಗಳಿಗೆ ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ನಷ್ಟದ ಪರಿಹಾರ ನೀಡಲಾಗುವುದು.
ಬೆಳೆ ವಿಮೆ ಮಾಡಿಸಿರುವ ರೈತರು ನಷ್ಟದ ಬಗ್ಗೆ ಸಂಬಂಧಿಸಿದ ಇಲಾಖೆ, ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಚೇರಿಗೆ ವಿಮೆ ಮಾಡಿಸಿದ ಬೆಳೆಯ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 72 ಗಂಟೆಯೊಳಗಾಗಿ ತಿಳಿಸಬೇಕು.
ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುತ್ತದೆ. ಬೆಳೆ ಸಾಲ ಪಡೆದ ರೈತರು ಈ ಯೋಜನೆಯಡಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಬೇಕು. ಅಂತಹ ರೈತರನ್ನು ಬೆಳೆ ವಿಮೆ ನೋಂದಣಿ ಯೋಜನೆಯಿಂದ ಕೈಬಿಡಲಾಗುವುದು.
ಬೇಕಾದ ದಾಖಲೆ: ಪ್ರಸ್ತಕ ಸಾಲಿನ ಪಹಣಿ, ಕಂದಾಯ ರಸೀದಿ, ಖಾತೆ ಪುಸ್ತಕ, ಬ್ಯಾಂಕ್ ಖಾತೆಯ ಪುಸ್ತಕ, ಆಧಾರ್ಕಾರ್ಡ್ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರ ಹಾಗೂ ಗ್ರಾಮ-ಒನ್ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು.
ವಿಮಾ ಕಂಪನಿ: ಕೆಎಸ್ಹೆಚ್ಎಂಎ ಕಂಪನಿ. ವಿಮಾ ಯೋಜನೆಯಡಿ ಒಳಪಡುವ ಬೆಳೆಗಳು ಹಸಿ ಮೆಣಸಿನಕಾಯಿ ಮತ್ತು ದಾಳಿಂಬೆ ಬೆಳೆಗಳಾಗಿವೆ.
*ಹಸಿ ಮೆಣಸಿನಕಾಯಿ:* ಬಳ್ಳಾರಿ, ಕಂಪ್ಲಿ, ಕುರುಗೋಡು, ಸಿರುಗುಪ್ಪ, ಸಂಡೂರು ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯಿತಿಗಳು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್ಗೆ ವಿಮಾ ಮೊತ್ತ ರೂ.71 ಸಾವಿರ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ರೂ.3550 ಆಗಿರುತ್ತದೆ.
*ದಾಳಿಂಬೆ:* ಬಳ್ಳಾರಿ, ಕಂಪ್ಲಿ, ಕುರುಗೋಡು, ಸಿರುಗುಪ್ಪ, ಸಂಡೂರು ತಾಲೂಕುಗಳ ಎಲ್ಲಾ ಗ್ರಾಮ ಪಂಚಾಯಿತಿಗಳು ವಿಮೆಗೆ ಒಳಪಡುವ ಪ್ರದೇಶಗಳಾಗಿದ್ದು, ಪ್ರತಿ ಹೆಕ್ಟರ್ಗೆ ವಿಮಾ ಮೊತ್ತ 1 ಲಕ್ಷ 27 ಸಾವಿರ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ರೂ.6350 ಆಗಿರುತ್ತದೆ.
ರೈತರು ಅಗತ್ಯ ದಾಖಲೆಗಳೊಂದಿಗೆ ಎರಡು ಬೆಳೆಗಳ ವಿಮೆಗೆ ನೊಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ, ಕಂಪ್ಲಿ ಮತ್ತು ಕುರುಗೋಡು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ(ಜಿಪಂ) ದೂ: 08392-278177 ಹಾಗೂ ಮೊ.9481305830, ಸಂಡೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ(ಜಿಪಂ) ದೂ:08395-260389 ಹಾಗೂ ಮೊ.9740934208, ಕಂಪ್ಲಿ ಮತ್ತು ಸಿರುಗುಪ್ಪದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಪಂ) ದೂ:08396-222066 ಹಾಗೂ ಮೊ.9916794371 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
——