ರಾಯಚೂರು,ಜು.08, ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದಡಿಯಲ್ಲಿ ವಿವಿಧ ಇಲಾಖೆಗಳ ಆಯ್ದ ಸೂಚ್ಯಂಕಗಳಲ್ಲಿ ಶೇಕಡಾ 100% ಪ್ರಗತಿ ಸಾಧಿಸುವ ಮೂಲಕ ಉತ್ತಮ ಸಾಧನೆ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್ ಅವರು ಹೇಳಿದರು.
ಅವರು ಜು.08ರ ಸೋಮವಾರ ದಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದಡಿ ಜುಲೈ 04ರಿಂದ ಸೆಪ್ಟೆಂಬರ್ 30ರವರೆಗೆ ಮೂರು ತಿಂಗಳ ಸಂಪೂರ್ಣತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ನೀತಿ ಆಯೋಗವು ದೇಶದಲ್ಲಿ 112 ಜಿಲ್ಲೆಗಳು ಹಾಗೂ 500 ತಾಲೂಕುಗಳನ್ನು ಗುರುತಿಸಿದ್ದು, ಅದರಲ್ಲಿ ರಾಯಚೂರಿನಿಂದ ಸಿರವಾರ ಹಾಗೂ ಮಸ್ಕಿ 2 ತಾಲೂಕುಗಳು ಆಯ್ಕೆಯಾಗಿವೆ. ನೀತಿ ಆಯೋಗದ ಸೂಚ್ಯಂಕಗಳಾದ ಶಿಕ್ಷಣ, ಆರೋಗ್ಯ ಕೃಷಿ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ ಅವರು ಮಾತನಾಡಿ, ಆಯೋಗವು ಆಶೋತ್ತರ ವಲಯಗಳಲ್ಲಿ ಅಭಿವೃದ್ಧಿಯ ಮಾನದಂಡಗಳನ್ನು ಸಾಧಿಸುವ ಗುರಿಯನ್ನು ಸಂಪೂರ್ಣತಾ ಅಭಿಯಾನ ಹೊಂದಿದ್ದು, ರಾಯಚೂರು ಜಿಲ್ಲೆಯು ನೀತಿ ಆಯೋಗದ ಪಟ್ಟಿಯಲ್ಲಿದ್ದು ಮಹತ್ವಕಾಂಕ್ಷೆ ಯೋಜನೆಯಡಿ ಜಿಲ್ಲೆಗೆ ಜಿಲ್ಲಾ ಮಟ್ಟದಲ್ಲಿ 41 ಪ್ಯಾರಾ ಮೀಟರ್, ತಾಲೂಕು ಮಟ್ಟದಲ್ಲಿ 40ಪ್ಯಾರಾಮೀಟರ್ ನಿಗದಿಪಡಿಸಲಾಗಿದ್ದು, ಗ್ರಾಮಮಟ್ಟದಿಂದ ಸರಿಯಾಗಿ ಪ್ಯಾರಮೀಟರ್‌ವನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದುವ ಮೂಲಕ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಿಂದ ಹೊರ ಬರಬೇಕೆಂದು ಹೇಳಿದರು.
ಗರ್ಭಿಣಿಯರಿಗೆ ಸೀಮಂತ; ನೀತಿ ಆಯೋಗದ ಕಾರ್ಯಕ್ರಮದಡಿ ಆಯೋಜಿಸಿದ್ದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಗರ್ಭಿಣಿಯರ ಮೊಗದಲ್ಲಿ ಉಲ್ಲಾಸದ ನಗು ಮಿಂಚಿಸಿತು. ಅರಿಷಿಣ, ಕುಂಕುಮ, ಹೂವು, ಹಣ್ಣು… ಸೇರಿದಂತೆ ಇನ್ನಿತರ ವಸ್ತುವನ್ನು ನೀಡಿದರು. ಅಲ್ಲದೆ ತಾಯಿ ಕಾರ್ಡ್ನ್ನು ಗರ್ಭಿಣಿ ಮಹಿಳೆಯರಿಗೆ ಗಣ್ಯರು ವಿತರಣೆ ಮಾಡದರು.
ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ: ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2024–25ನೇ ಶೈಕ್ಷಣಿಕ ವರ್ಷದ 6ರಿಂದ 10 ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನು ವಿತರಣೆ ಮಾಡಲಾಯಿತು. ಇದೇ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸೇರಿದಂತೆ ಇತರೆ ಇಲಾಖೆಗಳು ತಮ್ಮ-ತಮ್ಮ ಇಲಾಖೆಯಡಿ ದೊರೆಯುವ ಸೌಲಭ್ಯಗಳನ್ನು ಕುರಿತು ಮಳಿಗೆಯಲ್ಲಿ ಪ್ರದರ್ಶನ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ವಿವಿಧ ಕರಕುಶಲ ವಸ್ತುಗಳು ಪ್ರದರ್ಶನ ಮಾಡಲಾಯಿತು.
.
ಇದೇ ಸಂದರ್ಭದಲ್ಲಿ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದ ಕರ್ನಾಟಕ ನೂಡಲ್ ಅಧಿಕಾರಿ ಆಪ್ತ ಸಿಂಗ್, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರ ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಚೇತನ್ ಕುಮಾರ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕಾಳಪ್ಪ ಬಡಿಗೇರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್., ಸಿಡಾಕ್ ಜಂಟಿ ನಿರ್ದೇಶಕರಾದ ಜಿ.ಯು. ಹುಡೇದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸ್ವ-ಸಹಾಯ ಗುಂಪಿನ ಮಹಿಳೆಯರು, ಆಶಾ ಕಾರ್ಯಕರ್ತೆಯರು ಇತರರು ಇದ್ದರು ಕಾರ್ಯಕ್ರಮದ ನಿರೂಪಣೆಯನ್ನು ಮಹತ್ವಾಕಾಂಕ್ಷೆ ಜಿಲ್ಲೆ ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮದ ಅಧಿಕಾರಿಗಳಾದ ಮಹಮ್ಮದ್ ಯೂಸುಫ್ ಅವರು ಮಾಡಿದರು.