ಮಸ್ಕಿ : ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮ ಯಶಸ್ಸಿಗೆ ಪ್ರತಿಯೊಂದು ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸಬೇಕು ಎಂದು ಮಸ್ಕಿ ಕ್ಷೇತ್ರದ ಶಾಸಕರಾದ ಬಸನಗೌಡ ತುರ್ವಿಹಾಳ ಕರೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಹತ್ವಕಾಂಕ್ಷೆ ತಾಲೂಕು ಕಾರ್ಯಕ್ರಮ (ಎಬಿಪಿ) ದ ಸಂಪೂರ್ಣತಾ ಆಂದೋಲನಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಬಿಪಿ ಅಡಿ ಕೃಷಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಇಲಾಖೆ, ಶಿಕ್ಷಣ, ಒಟ್ಟು ಆರು ಇಲಾಖೆಗಳಿಂದ ವಿವಿಧ ಚಟುವಟಿಕೆ ಕೈಗೊಂಡು, ಸಮುದಾಯದ ಪ್ರಗತಿಗೆ ಪ್ರತಿಯೊಬ್ಬರು ಶ್ರಮಿಸಬೇಕು. ಶಿಕ್ಷಕರ ಪರಿಶ್ರಮದಿಂದ ಪರೀಕ್ಷೆಗಳಲ್ಲಿ ಫಲಿತಾಂಶ ಸುಧಾರಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ ಸಾಮಾನ್ಯರ ಅಭಿವೃದ್ಧಿಗೆ ಅನೇಕ ಯೋಜನೆ ಜಾರಿಗೊಳಿಸುತ್ತಿದೆ. ಅಧಿಕಾರಿಗಳು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು. ಮಳೆಗಾಲ ಆರಂಭವಾಗಿರುವುದರಿಂದ ಡೆಂಘೆ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉಮೇಶ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು, 75 ವರ್ಷ ಪೂರೈಸಿದ್ದು, ಕೇಂದ್ರ ಸರ್ಕಾರ ಗ್ರಾಮೀಣ ಜನರ ಜೀವನ ಸುಧಾರಿಸುವ ನಿಟ್ಟಿನಲ್ಲಿ ಎಬಿಪಿ ಕಾರ್ಯಕ್ರಮ ಜಾರಿ ಮಾಡಿರುತ್ತದೆ.
ರಾಜ್ಯದ 28 ತಾಲೂಕುಗಳು ಈ ಯೋಜನೆಗೆ ಆಯ್ಕೆಯಾಗಿವೆ. ಶಾಸಕರ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳ ರೂಪುರೇಷ ಸಿದ್ಧಪಡಿಸಿ, ಜಾರಿಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಉಡಿ ತುಂಬಲಾಯಿತು. ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲಾಯಿತು. ಶಾಲೆ ಮಕ್ಕಳಿಗೆ ಪಠ್ಯ ಪುಸ್ತಕಗಳ ಜೊತೆಗೆ ಶುಚಿ ಪ್ಯಾಡ್ ವಿತರಿಸಲಾಯಿತು. ಪೋಷಕಾಂಶ ಹೆಚ್ಚಿಸಲು ನುಗ್ಗೆ, ಲಿಂಬು, ಕರಿಬೇವು ಸಸಿ ವಿತರಿಸಲಾಯಿತು. ಸ್ವ ಸಹಾಯ ಗುಂಪುಗಳಿಗೆ ಸುತ್ತು ನಿಧಿ ವಿತರಿಸಲಾಯಿತು.
ತಾಪಂ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳಿಂದ ಹಾಕಲಾಗಿದ್ದ ಸ್ಟಾಲ್ಗಳು ಸಾರ್ವಜನಿಕರ ಗಮನ ಸೆಳೆದವು. ಸ್ವ ಸಹಾಯ ಗುಂಪಿನ ಮಹಿಳೆಯರು ಉಪ್ಪಿನ ಕಾಯಿ ಚಟ್ನಿ, ಹಪ್ಪಳ ಸೇರಿ ದಿನ ನಿತ್ಯ ಬಳಸುವ ಸಾಮಗ್ರಿ ಮಾರಾಟ ಮಾಡಿದರು. ಲಮಾಣಿ ಸಮುದಾಯದ ವೇಷ ಭೂಷಣಗಳ ಪ್ರದರ್ಶನ ಮತ್ತು ಮಾರಾಟ ಆಕರ್ಷಕವಾಗಿತ್ತು.
ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದೊತ್ತಡ, ಮಧುಮೇಹ ಪರೀಕ್ಷೆಗೆ ಒಳಗಾದರು.
ತಾಲೂಕು ವೈದ್ಯಧಿಕಾರಿ ಅಮರೇಶ್ ಪಾಟೀಲ್, ತುರ್ವಿಹಾಳ ವಲಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಉಂಬಣ್ಣ ರಾಥೋಡ್, ಮಸ್ಕಿ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಬಳಗಾನೂರು ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್, ಸಹಾಯಕ ಕೃಷಿ ನಿರ್ದೇಶಕರಾದ ನಾಗರತ್ನ ಹುಲಕೋಟೆ, ಪ್ರಭಾರ ಶಿಕ್ಷಣಾಧಿಕಾರಿ ಬಸ್ಸಪ್ಪ, ಸಹಾಯಕ ನಿರ್ದೇಶಕರಾದ (ಗ್ರಾಉ) ಶಿವಾನಂದರಡ್ಡಿ, ಸಹಾಯಕ ನಿರ್ದೇಶಕರಾದ (ಪಂರಾ) ಸೋಮನಗೌಡ, ವಿವಿಧ ಗ್ರಾಪಂಗಳ ಅಭಿವೃದ್ದಿ ಅಧಿಕಾರಿಗಳು, ಪಿಎಸ್ಐ ತಾರಾಬಾಯಿ, ತಾಪಂ ವ್ಯವಸ್ಥಾಪಕರಾದ ಗಂಗಾಧರ ಮೂರ್ತಿ, ಸಿಬ್ಬಂದಿ ಚಂದ್ರಶೇಖರ್, ಬಸವರಾಜ್, ನವೀನ್, ಗಿರಿಯಪ್ಪ, ಮೌನೇಶ್, ಪ್ರಕಾಶ್, ಅರ್ಜುನ, ಮಹ್ಮದ್ ಯಾಸೀನ್, ಎಬಿಪಿ ಸಂಯೋಜಕರಾದ ಅಶೋಕ್, ಆಶಾ ಮತ್ತು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಗುಂಪಿನ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು. ಸಿಆರ್ಪಿ ರಾಮಸ್ವಾಮಿ ನಿರೂಪಿಸಿದರು.