Ad image

ವಿಶ್ವ ಜನಸಂಖ್ಯಾ ದಿನಾಚರಣೆ *ಚಿಕ್ಕ ಕುಟುಂಬ ಹೊಂದುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕರಿಸಿ*

Vijayanagara Vani
ವಿಶ್ವ ಜನಸಂಖ್ಯಾ ದಿನಾಚರಣೆ *ಚಿಕ್ಕ ಕುಟುಂಬ ಹೊಂದುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕರಿಸಿ*
ಸರಿಯಾದ ಸಮಯದಲ್ಲಿ ಗರ್ಭಧಾರಣೆ ಹಾಗೂ ಅಂತರ ಕಾಪಾಡುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮಗೊಳಿಸುವುದು’ ಎಂಬ ಧ್ಯೇಯ ವಾಕ್ಯದೊಂದಿಗೆ ಮತ್ತು ‘ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳಿಗೆ ಹೆಮ್ಮೆ ತರುತ್ತದೆ’ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ವಿಶ್ವ ಜನಸಂಖ್ಯಾ ದಿನಾಚರಣೆ ಆಯೋಜಿಸಲಾಗಿದ್ದು, ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆದು ಚಿಕ್ಕ ಕುಟುಂಬ ಹೊಂದುವ ಮೂಲಕ ಸುಸ್ಥಿರ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಸಹಕರಿಸಬೇಕು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಎಫ್ಪಿಎಐ, ಐಕ್ಯುಎಸಿ ವಿಭಾಗ, ಎನ್ಎಸ್ಎಸ್ ಮತ್ತು ರೆಡ್ಕ್ರಾಸ್ ವಿಭಾಗ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜು.11 ರ ಬೆಳಿಗ್ಗೆ 11 ಗಂಟೆಗೆ ಎಟಿಎನ್ಸಿಸಿ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಪ್ರತಿ ವರ್ಷ ಜುಲೈ 11 ನ್ನು ವಿಶ್ವ ಜನಸಂಖ್ಯಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಮಾನವ ಸಂಪನ್ಮೂಲ ದೇಶದ ಅಭಿವೃದ್ಧಿಗೆ ಅವಶ್ಯಕವಾದರೂ ಅದರ ಮಿತಿ ದಾಟಿದಾಗ ಅದರಿಂದ ಅಭಿವೃದ್ಧಿಗೆ ಮಾರಕವಾಗುತ್ತದೆ. ಆಹಾರ, ವಸತಿ, ಆರೋಗ್ಯ, ಶಿಕ್ಷಣ ಮತ್ತು ಮುಂತಾದ ಕ್ಷೇತ್ರಗಳಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಜನಸಂಖ್ಯಾ ಬೆಳವಣಿಗೆಯು ಕಾರಣವಾಗಿದೆ. ದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಜನನಸಂಖ್ಯೆ ಬೆಳವಣಿಗೆಗೆ ಕಡಿವಾಣ ಹಾಕುವ ನಿರ್ಣಾಯಕ ಹಂತದಲ್ಲಿದ್ದೇವೆ.
ಭಾರತದ ಜನಸಂಖ್ಯೆ 144 ಕೋಟಿಗೂ ಅಧಿಕ ಇದೆ. ಇದು ಅಪಾಯದ ಮಟ್ಟವನ್ನು ಪ್ರತಿಬಿಂಬಿಸುವ ಸೂಚ್ಯಂಕವಾಗಿದೆ. ಮುಂದಿನ ಸುಂದರ ಭವಿಷ್ಯ ಮತ್ತು ದೇಶದ ಪ್ರಗತಿಗಾಗಿ ಪ್ರತಿಯೊಬ್ಬರು ಜನಸಂಖ್ಯೆ ನಿಯಂತ್ರಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ. ಜಾತಿ, ಧರ್ಮ, ರೂಢಿ, ಸಂಪ್ರದಾಯ, ನಂಬಿಕೆ ಇಂತಹ ಭಾವನಾತ್ಮಕ ಅಥವಾ ಅಂಧಾನುಕರಣೆಗೆ ಒಳಗಾಗದೇ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವದೊಂದಿಗೆ ಕುಟುಂಬ ಕಲ್ಯಾಣ ಯೋಜನೆಯನ್ನು ಅಳವಡಿಸಿಕೊಂಡು ಸುಧಾರಿತ ಜೀವನ, ಆರೋಗ್ಯ, ಶಿಕ್ಷಣ ಪಡೆಯುವ ಮೂಲಕ ದೇಶದ ಪ್ರಗತಿಗೆ ಎಲ್ಲರೂ ಸಹಕರಿಸೋಣ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ಉಚಿತವಾಗಿ ಮತ್ತು ಸುಲಭವಾಗಿ ಹಾಗೂ ಗುಣಾತ್ಮಕವಾಗಿ ದೊರೆಯುತ್ತವೆ. ಸಾರ್ವಜನಿಕರು ಇದರ ಉಪಯೋಗ ಪಡೆಯಬೇಕೆಂದು ಮನವಿ ಮಾಡುತ್ತೇನೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಬಹುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಸ್.ನಟರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share This Article
error: Content is protected !!
";