Ad image

ದಾಖಲೆಗಾಗಿ ಅಷ್ಟೇ ಐಪಿ ಸೆಟ್ ಆರ್.ಆರ್ ನಂಬರ್‍ಗಳಿಗೆ ಅಧಾರ್ ಜೋಡಣೆ: ಕೆ.ಜೆ.ಜಾರ್ಜ್ ಪರ್ಯಾಯ ವ್ಯವಸ್ಥೆವರೆಗೆ 10 ಎಚ್.ಪಿ ವರೆಗಿನ ಅಕ್ರಮ ಪಂಪ್ ಸೆಟ್‍ಗಳಿಗೆ ವಿದ್ಯುತ್ ಕಡಿತ ಇಲ್ಲ

Vijayanagara Vani
ದಾಖಲೆಗಾಗಿ ಅಷ್ಟೇ ಐಪಿ ಸೆಟ್ ಆರ್.ಆರ್ ನಂಬರ್‍ಗಳಿಗೆ ಅಧಾರ್ ಜೋಡಣೆ: ಕೆ.ಜೆ.ಜಾರ್ಜ್ ಪರ್ಯಾಯ ವ್ಯವಸ್ಥೆವರೆಗೆ 10 ಎಚ್.ಪಿ ವರೆಗಿನ ಅಕ್ರಮ ಪಂಪ್ ಸೆಟ್‍ಗಳಿಗೆ ವಿದ್ಯುತ್ ಕಡಿತ ಇಲ್ಲ
ರಾಜ್ಯದಲ್ಲಿ ಐಪಿ ಸೆಟ್ ಆರ್.ಆರ್ ನಂಬರ್ಗೆ ಆಧಾರ್ ಸಂಖ್ಯೆ ಲಿಂಕ್ ಮಾಡುತ್ತಿರುವುದು ದಾಖಲಾತಿಗಾಗಿ ಮಾತ್ರವೇ ಹೊರತು ಬೇರೆ ಉದ್ದೇಶವಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಇಲಾಖೆ ಅಧಿಕಾರಿಗಳೊಂದಿಗಿನ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಐಪಿ ಸೆಟ್ಗಳ ಸಂಖ್ಯೆ ತಿಳಿದುಕೊಂಡು ಸಮರ್ಪಕ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ ಐಪಿ ಸೆಟ್ಗಳ ಆರ್.ಆರ್.ನಂಬರ್ ಗೆ ಆಧಾರ್ ಸಂಖ್ಯೆ ಜೋಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
“ರಾಜ್ಯದಲ್ಲಿ 10 ಎಚ್.ಪಿ.ವರೆಗಿನ ಕೃಷಿ ಪಂಪ್ ಸೆಟ್ಗಳಿಗೆ ಈಗಾಗಲೇ ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಅವುಗಳಿಗೆ ಎಷ್ಟು ವಿದ್ಯುತ್ ಬೇಕು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೆ ಗೊಂದಲ ಉಂಟಾಗುತ್ತಿದೆ. ಅಕ್ರಮ ಪಂಪ್ ಸೆಟ್ಗಳಿಂದಾಗಿ ಸಕ್ರಮ ಪಂಪ್ಸೆಟ್ಗಳಿಗೂ ವಿದ್ಯುತ್ ಸಮಸ್ಯೆಯಾಗುತ್ತಿದೆ. ಐಪಿ ಸೆಟ್ಗಳ ಆರ್.ಆರ್ ನಂಬರ್ಗಳಿಗೆ ಆಧಾರ್ ಜೋಡಣೆ ಮಾಡಿದರೆ ಎಷ್ಟು ಪಂಪ್ ಸೆಟ್ಗಳಿವೆ ಮತ್ತು ಅವುಗಳಿಗೆ ಎಷ್ಟು ವಿದ್ಯುತ್ ಬೇಕು ಎಂಬ ಸ್ಪಷ್ಟತೆ ಸಿಗುತ್ತದೆ. ಅದಕ್ಕೆ ತಕ್ಕಂತೆ ಸಮರ್ಪಕ ವಿದ್ಯುತ್ ಪೂರೈಸಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
“ಬರಗಾಲದ ಸಂದರ್ಭದಲ್ಲೂ ರಾಜ್ಯದ ರೈತರಿಗೆ ದಿನದ ಏಳು ಗಂಟೆ ವಿದ್ಯುತ್ ಪೂರೈಸಲಾಗಿದೆ. ಲೋಡ್ ಶೆಡ್ಡಿಂಗ್ ಮಾಡಿಲ್ಲ. ಭವಿಷ್ಯದಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಲಭ್ಯವಿರುತ್ತದೆ. ಆದರೂ ಬೇರೆ ಬೇರೆ ಕಾರಣಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿದೆ. ಈ ಸಮಸ್ಯೆ ಬಗೆಹರಿಸಿ ಸಮರ್ಪಕ ವಿದ್ಯುತ್ ಪೂರೈಕೆ ಉದ್ದೇಶದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲು ನಿರ್ಧರಿಸಿದ್ದೇನೆ” ಎಂದು ಹೇಳಿದರು.
ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ ಬರುವ ಅಕ್ರಮ ಐಪಿ ಸೆಟ್ಗಳನ್ನು ಸಕ್ರಮಗೊಳಿಸಲಾಗುವುದು. ಅದಕ್ಕಿಂತ ಹೆಚ್ಚು ಅಂತರವಿರುವ ಕಡೆಗಳಲ್ಲಿ ಕುಸುಮ್ ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್ಗಳನ್ನು ಒದಗಿಸಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದಿಂದ ಶೇ.30 ಮತ್ತು ರಾಜ್ಯ ಸರ್ಕಾರದಿಂದ ಶೇ.50 ಸಬ್ಸಿಡಿ ನೀಡಲಾಗುತ್ತದೆ. ರೈತರು ಶೇ.20 ರಷ್ಟು ಮೊತ್ತ ಭರಿಸಿ ಪಂಪ್ ಸೆಟ್ ಹಾಕಿಸಿಕೊಳ್ಳಬಹುದು ಎಂದು ತಿಳಿಸಿದರು.
*ವರ್ಗಾವಣೆ ತಡೆಗಟ್ಟಲು ಏಕಕಾಲದಲ್ಲಿ ಲೈನ್ಮೆನ್ಗಳ ನೇಮಕ:*
ರಾಜ್ಯದಲ್ಲಿ 2000 ಲೈನ್ಮೆನ್ಗಳ ನೇಮಕಕ್ಕೆ ಇನ್ನು 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ಸಾಮಾನ್ಯವಾಗಿ ಲೈನ್ಮೆನ್ಗಳ ನೇಮಕ ವೇಳೆ ಒಂದು ಜಿಲ್ಲೆಯವರು ಇನ್ನೊಂದು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿ ನೇಮಕಗೊಳ್ಳುತ್ತಾರೆ. ಬಳಿಕ ತಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಇದರಿಂದ ಕೆಲವು ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಲೈನ್ಮೆನ್ಗಳ ಕೊರತೆಯಾಗುತ್ತದೆ. ಈ ಹಿನ್ನೆಲೆಯಲ್ಲಿ 2000 ಲೈನ್ಮೆನ್ಗಳನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಆಯಾ ಜಿಲ್ಲೆಯವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದರು.
“ವಿದ್ಯುತ್ ಪೂರೈಕೆ ಕುರಿತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಎಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಆಯಾ ಜಿಲ್ಲೆಯ ಎಸ್ಕಾಂ ಮುಖ್ಯ ಎಂಜಿನಿಯರ್ಗಳನ್ನು ಒಳಗೊಂಡಂತೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ನಿರಂತರವಾಗಿ ಸಭೆ ನಡೆಸಬೇಕು ಎಂದು ಸೂಚಿಸಲಾಗಿದೆ. ಈ ಹಿಂದೆ ಸೂಚನೆ ನೀಡಿದ್ದರೂ ಕೆಲವರು ಸಭೆ ಕರೆದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ರೀತಿಯ ಸಭೆಗಳನ್ನು ತಪ್ಪದೆ ಕರೆಯುವಂತೆ ನಿರ್ದೇಶನ ನೀಡಲಾಗಿದೆ. ಅಲ್ಲದೆ, ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಿಗೆ ಕೆಪಿಟಿಸಿಎಲ್ ನಿಂದ ಒಬ್ಬ ಪ್ರತಿನಿಧಿಯನ್ನು ಕಡ್ಡಾಯವಾಗಿ ಕಳುಹಿಸುವಂತೆ ಸೂಚಿಸಲಾಗಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಜೆ.ಎನ್.ಗಣೇಶ್, ಬಿ.ಎಂ.ನಾಗರಾಜ್, ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
*ಬಾಕ್ಸ್:*
*10 ಎಚ್.ಪಿ. ವರೆಗಿನ ಅಕ್ರಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಡಿತ ಇಲ್ಲ*
ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಪಂಪ್ ಸೆಟ್ಗಳಿವೆ. ಕೆಲವರು ಇಂತಹ ಅಕ್ರಮ ಪಂಪ್ ಸೆಟ್ಗಳ ಮೂಲಕ ನದಿ ಮತ್ತು ಕಾಲುವೆಗಳಿಂದ ಅನುಮತಿ ಇಲ್ಲದೆ ನೀರು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ 10 ಅಶ್ವಶಕ್ತಿಗಿಂತ ಹೆಚ್ಚು ಸಾಮಥ್ರ್ಯದ ಅಕ್ರಮ ಪಂಪ್ ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಆದರೆ, 10 ಅಶ್ವಶಕ್ತಿವರೆಗಿನ ವಿದ್ಯುತ್ ಪಂಪ್ ಸೆಟ್ಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ವಿದ್ಯುತ್ ಪೂರೈಕೆ ಮುಂದುವರಿಯಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ನದಿ ಮತ್ತು ಕಾಲುವೆಗಳಿಂದ ಅಕ್ರಮ ಪಂಪ್ ಸೆಟ್ಗಳ ಮೂಲಕ ನೀರು ಮೇಲೆತ್ತುವವರ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಜಲ ಸಂಪನ್ಮೂಲ ಇಲಾಖೆಯಿಂದ ಬೇಡಿಕೆ ಬಂದಿದೆ. ಆದರೆ, 10 ಅಶ್ವಶಕ್ತಿವರೆಗಿನ ಪಂಪ್ ಸೆಟ್ಗಳ ಸಂಪರ್ಕ ಕಡಿತಗೊಳಿಸುವುದಿಲ್ಲ. ಅದಕ್ಕಿಂತ ಹೆಚ್ಚು ಅಶ್ವಶಕ್ತಿಯ ಪಂಪ್ಗಳನ್ನು ಬಳಸುವುದಕ್ಕೆ ಅವಕಾಶವಿಲ್ಲ. ವಿದ್ಯುತ್ ಪಂಪ್ ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುವುದು. ಡೀಸೆಲ್ ಪೆಪ್ ಸೆಟ್ಗಳ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
Share This Article
error: Content is protected !!
";