Ad image

ವಿಎಸ್‍ಕೆ ವಿವಿಯಲ್ಲಿ ಪತ್ರಿಕಾ ದಿನಾಚರಣೆ-2024 ಉತ್ತಮ ಪತ್ರಕರ್ತರಾಗಲು ಭಾಷಾ ಜ್ಞಾನ ಹೊಂದುವುದು ಅಗತ್ಯ: ಪ್ರೊ. ತಿಪ್ಪೇರುದ್ರಪ್ಪ.ಜೆ

Vijayanagara Vani
ವಿಎಸ್‍ಕೆ ವಿವಿಯಲ್ಲಿ ಪತ್ರಿಕಾ ದಿನಾಚರಣೆ-2024 ಉತ್ತಮ ಪತ್ರಕರ್ತರಾಗಲು ಭಾಷಾ ಜ್ಞಾನ ಹೊಂದುವುದು ಅಗತ್ಯ: ಪ್ರೊ. ತಿಪ್ಪೇರುದ್ರಪ್ಪ.ಜೆ
ಬಳ್ಳಾರಿ,ಜು.11
ವಿದ್ಯಾರ್ಥಿಗಳು ವೃತ್ತಿಪರ ಉತ್ತಮ ಪತ್ರಕರ್ತರಾಗಲು ಬರವಣಿಗೆ ಕೌಶಲ್ಯದೊಂದಿಗೆ ಭಾಷೆಯ ಜ್ಞಾನ ಹೊಂದುವುದು ಅಗತ್ಯವಾಗಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ತಿಪ್ಪೇರುದ್ರಪ್ಪ ಅವರು ಅಭಿಪ್ರಾಯಪಟ್ಟರು.
ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದೊಂದಿಗೆ ವಿವಿಯ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರದಂದು ಆಯೋಜಿಸಿದ್ದ ಪತ್ರಿಕಾ ದಿನಾಚರಣೆ-2024 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪತ್ರಿಕೋದ್ಯಮ ಕ್ಷೇತ್ರವು ನೈಜತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಸಂಬಂಧಕ್ಕೆ ಬೆಲೆ ಕೊಡುವ ಮಾಧ್ಯಮ ನೀತಿಯನ್ನು ಬಿಂಬಿಸುವಂತಿರಬೇಕು ಎಂದರು.
ವಿದ್ಯಾರ್ಥಿಗಳು ಪದಗಳ ಸಂಗ್ರಹಣೆಗಾಗಿ ಹೆಚ್ಚಾಗಿ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡು, ಜೀವನ ಪರ್ಯಂತ ಕಲಿಯುವ ಕೌಶಲ್ಯದಲ್ಲಿ ನಿರತರಾಗಬೇಕು. ಭಾಷೆಯ ಬಗ್ಗೆ ಜ್ಞಾನ ಹೊಂದಿದಾಗ ಮಾತ್ರ ಉತ್ತಮ ಪತ್ರಕರ್ತರಾಗಲು ಸಾಧ್ಯ ಎಂದು ತಿಳಿಸಿದರು.
ವಿಜಯವಾಣಿ ದಿನ ಪತ್ರಿಕೆ ಗಂಗಾವತಿ ಆವೃತ್ತಿಯ ಸ್ಥಾನಿಕ ಸಂಪಾದಕ ಜಗನ್ನಾಥ ದೇಸಾಯಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಮಯ ಪಾಲನೆ ಬಹುಮುಖ್ಯವಾಗಿದ್ದು, ಉತ್ಸುಕತೆಯಿಂದ ಕಾರ್ಯ ನಿರ್ವಹಿಸಬೇಕು. ಪತ್ರಿಕೋದ್ಯಮ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವವರು ಅದಕ್ಕೆ ಬದ್ಧರಾಗಿ ಒತ್ತಡ ನಿಭಾಯಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ಪತ್ರಕರ್ತ ವೃತ್ತಿ ಆಯ್ಕೆ ಮಾಡಿಕೊಂಡವರು, ನಿರಂತರ ಅಧ್ಯಯನ, ಸಾಹಿತ್ಯ-ಕೃತಿ ಓದುವ ಹವ್ಯಾಸ, ವಿವಿಧ ಪತ್ರಿಕೆ ವಿಮರ್ಶಿಸುವ ಹಾಗೂ ಕ್ರಿಯಾಶೀಲವಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಪತ್ರಿಕೋದ್ಯಮ ವೃತ್ತಿ ಮಾತ್ರವಲ್ಲದೆ ಸಮಾಜ ಸೇವೆಯೂ ಆಗಿದ್ದು, ಒಬ್ಬ ಉತ್ತಮ ಪತ್ರಕರ್ತ ಅಥವಾ ವರದಿಗಾರನು ಸಮಾಜಕ್ಕೆ ಉಪಯುಕ್ತವಾಗುವಂತ ನಿಖರವಾದ ಮತ್ತು ವಸ್ತುನಿಷ್ಠ ಸುದ್ದಿ ಒದಗಿಸಿಬೇಕು. ಸಾರ್ವಜನಿಕರು, ವಿದ್ಯಾರ್ಥಿಗಳು ಪತ್ರಿಕೆ ಓದುವ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಜ್ಞಾನಾರ್ಜನೆ ಹೆಚ್ಚಾಗುತ್ತದೆ. ಎಂದು ಹೇಳಿದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪ್ರತಿನಿತ್ಯವೂ ವಿವಿಧ ಹೊಸ ವಿಷಯಗಳನ್ನು ಕಲಿಯುವ ಅವಕಾಶವಿದ್ದು, ಪತ್ರಕರ್ತರು ಚಾಣಾಕ್ಷತನದಿಂದ ಸುದ್ದಿ ವರದಿ ಮಾಡುವ ಕೆಲಸ ನಿರ್ವಹಿಸಬೇಕು, ಇದರ ಜೊತೆಗೆ ಬದಲಾಗುವ ತಂತ್ರಜ್ಞಾನಕ್ಕೆ ತಕ್ಕಂತೆ ಅದನ್ನು ಬಳಸಿಕೊಳ್ಳುವ ಹಾಗೂ ಅಳವಡಿಸಿಕೊಳ್ಳುವ ಕುಶಲತೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ತುಕಾರಾಂ ರಾವ್ ಬಿ.ವಿ ಅವರು ಮಾತನಾಡಿ, ಪತ್ರಿಕೋದ್ಯಮ ಸವಾಲಿನ ಕ್ಷೇತ್ರವಾಗಿದ್ದು, ಪತ್ರಕರ್ತನು ತಾಳ್ಮೆ ಮತ್ತು ನಿಷ್ಠೆಯಿಂದ ಕೆಲಸ ನಿರ್ವಹಿಸಿ, ಘಟನಾವಳಿಗಳ ಬಗ್ಗೆ ಎಚ್ಚರವಹಿಸಿ ನ್ಯಾಯಸಮ್ಮತವಾಗಿ ಸುದ್ದಿ ಮಾಡಬೇಕು ಎಂದು ಹೇಳಿದರು.
ಸಾಮಾಜಿಕ ಜೀವನದಲ್ಲಿರುವವರು ಟೀಕೆ ಟಿಪ್ಪಣಿಗಳು, ಹೊಗಳಿಕೆ, ನಿಂದನೆಗಳನ್ನು ಸಮಚಿತ್ತ ಮನೋಭಾವದಿಂದ ಸ್ವೀಕರಿಸುವ ಮನಸ್ಥಿತಿ ಹೊಂದಿರಬೇಕು. ಹೊಗಳಿಕೆಗೆ ಹಿಗ್ಗಿ, ಟೀಕೆಗಳು ಬಂದಾಗ ಅದಕ್ಕೆ ಕಟುವಾಗಿ ಪ್ರತಿಕ್ರಿಯಿಸುವ ಗುಣ ಹೊಂದಿರುವವರು ಸಾಮಾಜಿಕ ಸೇವೆಗೆ ಅರ್ಹರಲ್ಲ ಎಂದರು. ಸಮಾಜದಲ್ಲಿನ ಲೋಪ-ದೋಷಗಳನ್ನು ಬಿಂಬಿಸುವ ಮಾಧ್ಯಮದವರಿಗೆ ಬೆದರಿಕೆಗಳು ಬರುವುದು ಸಹಜ, ಇವೆಲ್ಲವುಗಳನ್ನು ಧೈರ್ಯದಿಂದ ಎದುರಿಸಿ, ಸುದ್ದಿಗಳಿಗೆ ನ್ಯಾಯ ಒದಗಿಸುವುವವರು ಯಶಸ್ವಿ ಪತ್ರಕರ್ತರಾಗಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಮಾಧ್ಯಮವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಂಡು, ಜೀವನ ರೂಪಿಸುವ ವೃತ್ತಿ ಅನುಭವ ಹೊಂದಿದ ನಂತರ ಕೌಶಲ್ಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ವಿವಿಯ ಕುಲಸಚಿವರಾದ ರುದ್ರೇಶ್ ಎಸ್.ಎನ್ ಅವರು ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಾಗಿ ಪತ್ರಿಕೆಗಳೊಡನೆ ಸ್ನೇಹ ಸಂಬಂಧ ಹೊಂದಿ, ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ವಿಚಾರಧಾರೆಗಳನ್ನು ಅರಿತು ಕೊಳ್ಳಬೇಕು ಎಂದು ಹೇಳಿದರು.
ಮಾಧ್ಯಮಗಳು ಸುದ್ದಿಯ ಆಯ್ಕೆಯಲ್ಲಿ ಸಾಮಾಜಿಕ ಕಳಕಳಿ ಹಾಗೂ ಹೊಣೆಗಾರಿಕೆ ಹೊಂದಿರಬೇಕು, ನಕಾರಾತ್ಮಕ ವಿಷಯಗಳಿಗಿಂತ, ಧನಾತ್ಮಕ ವರದಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಸಾಧಕರ ಸಾಧನೆಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದರು.
ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ರಾಕೇಶ್ ವಿ.ತಾಳಿಕೋಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕೋದ್ಯಮಕ್ಕು ಮತ್ತು ಬಳ್ಳಾರಿಗೂ ಅವಿನಾಭಾವ ಸಂಬಂಧವಿದ್ದು, ರಾಜ್ಯದ ಮೊಟ್ಟ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ದಿನಪತ್ರಿಕೆಯು 1844 ರಲ್ಲಿ ಕಂನಡ ಸಮಾಚಾರ ಎಂದು ಮರುನಾಮಕರಣಗೊಂಡು ಇಲ್ಲಿಂದಲೇ ಮುದ್ರಣವಾಗಿದ್ದು ವಿಶೇಷ ಎಂದು ಸ್ಮರಿಸಿದರು.
ಈ ವೇಳೆ ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮ ಕುರಿತಂತೆ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಅಂಶಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅತಿಥಿ ಉಪನ್ಯಾಸಕ ಜಯರಾಜ್.ಹೆಚ್, ತೆಕ್ಕಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರವೀಂದ್ರ ಕೆಳಗಡಿ, ಹೊಸಪೇಟೆಯ ಸರ್ಕಾರಿ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಸುಂಕಣ್ಣ ಸೇರಿದಂತೆ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಸಿಬ್ಬಂದಿ, ವಿವಿಧ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Share This Article
error: Content is protected !!
";