ರಾಯಚೂರು,ಜು.14- ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣದ ಆರೋಪದ ಶಾಸಕ ಬಸನಗೌಡ ದದ್ದಲ್ ಅವರು ಪಶ್ಚಿಮ ಬಂಗಾಳ ಅಥವಾ ಹೈದರಾಬಾದ್ಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ತಲೆಮರೆಸಿಕೊಂಡಿರುವ ದದ್ದಲ್ ಅವರ ಪತ್ತೆಗೆ ಜಾರಿ ನಿರ್ದೇಶನಾಲಯ(ಇಡಿ) ಬಲೆ ಬೀಸಿದೆ.
ಬಸನಗೌಡ ದದ್ದಲ್ ಅವರು ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಎದುರು ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದರು. ಸೋಮವಾರ ಮತ್ತೆ ವಿಚಾರಣೆಗೆ ಬರುವಂತೆ ಎಸ್ಐಟಿ ಅಧಿಕಾರಿಗಳು ಸೂಚಿಸಿದ್ದರು. ನಂತರ ಅವರು ನಾಪತ್ತೆಯಾಗಿದ್ದಾರೆ.
ಇಡಿ ಅಧಿಕಾರಿಗಳು ಅವರ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಬೆಂಗಳೂರಿನ ಯಲಹಂಕದಲ್ಲಿರುವ ಅವರ ನಿವಾಸ, ಕಚೇರಿಯಲ್ಲಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಮಂತ್ರಾಲಯ ಮಾರ್ಗವಾಗಿ ಹೈದರಾಬಾದ್ಗೆ ತೆರಳಿದ್ದು, ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಈ ಜಾಡು ಹಿಡಿದಿರುವ ಇಡಿ ಅವರನ್ನು ವಶಕ್ಕೆ ಪಡೆಯಲು ಮುಂದಾಗಿದೆ.
ಮಂಗಳವಾರ ಮತ್ತು ಬುಧವಾರ ಇಡಿ ಅಧಿಕಾರಿಗಳು ದದ್ದಲ್ ಅವರ ಯಲಹಂಕದಲ್ಲಿರುವ ನಿವಾಸ, ರಾಯಚೂರಿನ ನಿವಾಸ ಸೇರಿ ವಿವಿಧೆಡೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.