ಬಳ್ಳಾರಿ,
ಸದೃಢ ಸಮಾಜಕ್ಕಾಗಿ ಸಾರ್ವಜನಿಕರ ವಿವಿಧ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಹೇಳಿದರು.
ಶನಿವಾರ, ನಗರದ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಿಡಿಯೋ ಸಭಾಂಗಣದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಸಣ್ಣ ಪುಟ್ಟ ವ್ಯಾಜ್ಯಗಳಿಗೂ ನ್ಯಾಯಾಲಯದ ಬಾಗಿಲು ತಟ್ಟುತ್ತಿದ್ದಾರೆ. ಸಕಾಲದಲ್ಲಿ ನ್ಯಾಯ ದೊರಕಿಸಿಕೊಡಲು ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ನಿರಂತರವಾಗಿ ಶ್ರಮ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಉಭಯ ಪಕ್ಷಕಾರರ ಶಾಂತಿ ನೆಮ್ಮದಿಗೆ ಹಾಗೂ ಅವರ ಸಮಯ, ಹಣ, ಸಮೃದ್ಧಿ ಪಡೆಯಲು ನ್ಯಾಯಾಲಯಗಳಲ್ಲಿ ನಡೆಯುವ ಲೋಕ್ ಅದಾಲತ್ಗಳಲ್ಲಿ ಭಾಗವಹಿಸಿ ಬಾಕಿಯಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ನ್ನು ಆಯೋಜಿಸಲಾಗಿದ್ದು, ಈ ಅದಾಲತ್ನಲ್ಲಿ ಒಟ್ಟು 31 ಪೀಠಗಳನ್ನು ಸ್ಥಾಪಿಸಲಾಗಿದೆ ಎಂದರು.
ಜಿಲ್ಲೆಯ ವಿವಿಧ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ನಾನಾ ರೀತಿಯ ರಾಜೀ ಆಗಬಹುದಾದಂತಹ 16,284 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿದೆ. ಅವುಗಳ ಪೈಕಿ 11,902 ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಗಿದ್ದು, ಒಟ್ಟು ರೂ.44,06,24,929.5 ಮೊತ್ತದ ಪರಿಹಾರ ಸಂಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೌಟುಂಬಿಕ ನ್ಯಾಯಾಲಯದಲ್ಲಿ ಲೋಕ್ ಅದಾಲತ್ ನ ಪೀಠದಲ್ಲಿ ಸುಮಾರು 6 ಜೋಡಿ ದಂಪತಿಗಳನ್ನು ಯಶಸ್ವಿಯಾಗಿ ರಾಜೀ ಸಂಧಾನದ ಮೂಲಕ ಒಂದುಗೂಡಿಸಲಾಗಿದೆ.
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಿವಿಧ ವಿಮೆ ಕಂಪನಿಯ ಅಧಿಕಾರಿಗಳು, ವಿಮೆ ಕಂಪನಿಯ ಪ್ಯಾನಲ್ ವಕೀಲರು, ಅರ್ಜಿದಾರರ ಪರ ವಕೀಲರು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಕಕ್ಷಿದಾರರು ಭಾಗವಹಿಸಿ, ಯಶಸ್ವಿಗೊಳಿಸಿದ್ದಾರೆ.
ಕಕ್ಷಿದಾರರು ಹಾಗೂ ವಕೀಲರು ಸೇರಿ ರಾಷ್ಟ್ರೀಯ ಲೋಕ್ಅದಾಲತ್ನ ಬೈಠಕ್ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ತಮ್ಮ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ರಾಜಿ ಸಂಧಾನ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಇದ್ದರು