ಬೆಂಗಳೂರು, ಜುಲೈ 15: ಕರ್ನಾಟಕದಲ್ಲಿ ವಿಧಾನಮಂಡಲ ಉಭಯ ಸದನಗಳ ಮುಂಗಾರು ಅಧಿವೇಶನ (Assembly Monsoon Session) ಇಂದು ಜುಲೈ 15 ಸೋಮವಾರದಿಂದ ಆರಂಭವಾಗಲಿದೆ. ಅಧಿಕಾರಕ್ಕೆ ಬಂದ 14 ತಿಂಗಳಲ್ಲಿ ವಿವಿಧ ಹಗರಣ, ಸಚಿವರ ಮೇಲೆ ನೇರ ಆರೋಪಗಳಿಗೆ ಸಾಕ್ಷಿಯಾದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.
ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಕಲ್ಯಾಣಕ್ಕೆ ಸಿಮಿತವಾದ ವಾಲ್ಮಿಕಿ ನಿಗಮದ ಹಗರಣ, ಮುಡಾ ಹಗರಣ, ಸಚಿವ ನಾಗೇಂದ್ರ ತಲೆದಂಡ ಮತ್ತು ಬಂಧನ, ಅಧಿಕಾರಿಗಳ ವರ್ಗಾವಣೆ, ಬೆಲೆ ಏರಿಕೆ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಬಿಜೆಪಿಗೆ ಚರ್ಚೆಗೆ ತರಲಿದೆ. ಸರ್ಕಾರದ ಮೇಲೆ ಮುಗಿಬೀಳಲಿದೆ.
ವಾಲ್ಮಿಕ ಅಭಿವೃದ್ಧಿ ಹಗರಣ, ಅಧಿಕಾರಿ ಆತ್ಮಹತ್ಯೆ ಬೆನ್ನಲ್ಲೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣವು ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಇದು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನೇ ಸುತ್ತಿಕೊಂಡಿದೆ. ಹೀಗಾಗಿ ಈ ಅಧಿವೇಶನ ಸಿಎಂ ಸಿದ್ದರಾಮಯ್ಯಗೆ ಅಗ್ನಿ ಪರೀಕ್ಷೆ ಎನ್ನಬಹುದಾಗಿದೆ. ಬೆಲೆ ಏರಿಕೆಯು ಅಧಿವೇಶನದ ಪ್ರಮುಖ ವಿಷಯ? ಇಂಧನ ದರ ಏರಿಕೆ, ಹಾಲಿನ ಬೆಲೆ ಬೆಲೆ, ವಿದ್ಯುತ್ ಮತ್ತು ನೀರಿನ ದರ ಏರಿಕೆ ಪ್ರಸ್ತಾವನೆ, ಸಾರ್ವಜನಿಕ ಸಾರಿಗೆ ಪ್ರಯಾಣ ದರಿ ಏರಿಕೆಯ ಮನವಿ ವಿಚಾರಗಳು ಸಹ ಅಧಿವೇಶನದಲ್ಲಿ ಬಿಜೆಪಿ ಮುನ್ನೆಲೆಗೆ ತರಲಿದೆ. ಬೆಲೆ ಏರಿಕೆ ಬಗ್ಗೆ ಈಗಾಗಲೇ ಬಿಜೆಪಿ ಒಂದು ಸುತ್ತಿನ ಹೋರಾಟ ಮಾಡಿತ್ತು. ಎಸ್ಸಿ ಎಸ್ಟಿಗೆ ಅಭಿವೃದ್ಧಿಗೆ ಮೀಸಲಾದ ಅಪಾರ ಹಣವನ್ನು ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡಿರುವುದು ಮುನ್ನೆಲೆಗೆ ಬರುವ ಸಾಧ್ಯತೆ ಇದೆ.
ಸಿಎಂ ಸಿದ್ದರಾಮಯ್ಯ ಸೂಚನೆ ಏನಿದೆ? ಇದೆಲ್ಲ ಗಮನಿಸಿರುವ ಸಿಎಂ ಸಿದ್ದರಾಮಯ್ಯ, ಅಧಿವೇಶನದಲ್ಲಿ ಬಿಜೆಪಿ ಎತ್ತುವ ಚರ್ಚೆಗಳಿಗೆ ಆಯಾ ವಿಷಯಗಳಿಗೆ ಅನುಗುಣವಾಗಿ ತಕ್ಕ ಉತ್ತರ ನೀಡಲು ನಿಗದಿತ ಸಚಿವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೇ ಬಿಜೆಪಿ ಅವಧಿಯಲ್ಲಿ ಆಗಿರುವ ಹಗರಣ, ಭ್ರಷ್ಟಾಚಾರ ಪ್ರಸ್ತಾಪಿಸಿ ತಕ್ಕ ಉತ್ತರ ಕೊಡುವಂತೆ ಸಚಿವರಿಗೆ ನಿರ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಮೇಲಿನ ಎಲ್ಲ ಅಂಶಗಳಿಂದ ಈ ಭಾರಿ ಮುಂಗಾರು ರಾಜ್ಯ ವಿಧಾನಮಂಡಲ ಅಧಿವೇಶನ ಹೈವೋಲ್ಟೇಜ್ ಅಧಿವೇಶನ ಆಗುವುದರಲ್ಲಿ ಸಂಶಯವಿಲ್ಲ. ಸಾರ್ವಜನಿಕರ ಚಿತ್ತವು ಈ ಅಧಿವೇಶನದತ್ತ ನೆಟ್ಟಿದೆ.