ಚಿತ್ರದುರ್ಗಜುಲೈ18:
ಜಿಲ್ಲೆಯಲ್ಲಿ ಈ ಬಾರಿ ಪದವಿ ಪೂರ್ವ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ ಹೇಳಿದರು.
ಇಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕಂಪ್ಯೂಟರ್ ವಿಭಾಗ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.
ರಾಜ್ಯದ ನೂರು ಕಾಲೇಜುಗಳಲ್ಲಿ ಕಂಪ್ಯೂಟರ್ ಕೋರ್ಸ್ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಅವಕಾಶ ಸಿಗಲು ಇಲ್ಲಿನ ಉಪನ್ಯಾಸಕರ ಬದ್ಧತೆಯೇ ಮೂಲ ಕಾರಣ ಎಂದರು.
ಬಹಳಷ್ಟು ಸರ್ಕಾರಿ ಕಾಲೇಜುಗಳಲ್ಲಿ ಫಲಿತಾಂಶ ಕುಸಿತಕ್ಕೆ ಕಾಲೇಜಿಗೆ ನಿರಂತರ ಗೈರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡುವುದೇ ಮೂಲ ಕಾರಣ ಆಗಿದೆ. ಆದ್ದರಿಂದ ಕಾಲೇಜು ಮುಖ್ಯಸ್ಥರು ಇಲಾಖೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿದ್ಯಾರ್ಥಿಗಳ ಗೈರು ಪದ್ಧತಿಗೆ ಕಡಿವಾಣ ಹಾಕಲು ಪ್ರತಿ ತಿಂಗಳ ಹಾಜರಿ ಅವಲೋಕಿಸಬೇಕು, ಅಲ್ಲದೆ ಅಂತಹವರ ಪಾಲಕರ ಗಮನಕ್ಕೆ ತರಬೇಕು. ಈ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಸೂಚಿಸಿದರು.
ಬಾಲಕರ ಸರ್ಕಾರಿ ಪದವಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗುತ್ತಿಗೆದಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮಂಜುನಾಥ್ ಮಾತನಾಡಿ, ಬಾಲಕರ ಸರ್ಕಾರಿ ಜೂನಿಯರ್ ಕಾಲೇಜು 75 ವರ್ಷ ಪೂರೈಸುತ್ತಿದ್ದು, ಜಿಲ್ಲೆಯಲ್ಲಿಯೇ ಅತ್ಯಂತ ಹಳೇ ಕಾಲೇಜು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇದರ ಅಭಿವೃದ್ಧಿಗೆ ಶ್ರಮಿಸುವುದು ಪ್ರತಿ ನಾಗರಿಕನ ಜವಾಬ್ದಾರಿ ಎಂದರು.
ಚಿತ್ರದುರ್ಗ ಜಿಲ್ಲೆ ಹಿಂದುಳಿದ, ಬಡವರೇ ಹೆಚ್ಚು ಇರುವ ಪ್ರದೇಶ. ಇಲ್ಲಿನ ಬಡ, ಮಧ್ಯಮ ವರ್ಗದ ಪಾಲಿಗೆ ಆಶಾಕಿರಣ ಆಗಿರುವ ಈ ಕಾಲೇಜು ಸಹಸ್ರಾರು ಮಂದಿಗೆ ವಿದ್ಯಾ ದಾನ ಮಾಡಿದೆ. ಇಲ್ಲಿ ಅಕ್ಷರ ಕಲಿತ ಅನೇಕರು ಐಎಎಸ್, ಕೆಎಎಸ್ ಸೇರಿ ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ. ನಾಡಿಗೆ ಈ ಮೂಲಕ ಕೊಡುಗೆ ನೀಡಿ 75 ವರ್ಷದ ಸಂಭ್ರಮದ ಸಮೀಪದಲ್ಲಿರುವ ಈ ಕಾಲೇಜಿನ ಅಭಿವೃದ್ಧಿ ಚಿತ್ರದುರ್ಗ ಜಿಲ್ಲೆಯ ಪ್ರತಿ ವ್ಯಕ್ತಿಯ ಹೊಣೆಗಾರಿಕೆ ಆಗಿದೆ. ಅದರಲ್ಲೂ ಕಾಲೇಜು ಅಭಿವೃದ್ಧಿ ಸಮಿತಿ ಜವಾಬ್ದಾರಿ ಹೆಚ್ಚು ಇದೆ ಎಂದರು.
ಕಾಲೇಜಿನ ಸದ್ಯದ ಸಮಸ್ಯೆ ಆಗಿರುವ ಶೌಚಗೃಹ ಹಾಗೂ ನಾಲ್ಕು ಕೊಠಡಿಗಳಿಗೆ ವಿದ್ಯುತ್ ಪೂರೈಕೆ ವೈಯಕ್ತಿವಾಗಿ ವೆಚ್ಚ ಭರಿಸುವ ಮೂಲಕ ನೆರವಾಗುತ್ತೇನೆ. ಈ ಸಣ್ಣ ಸೇವೆ ಮಾಡುವ ಅವಕಾಶ ದೊರೆತಿರುವುದು ನನಗೆ ಲಭಿಸಿದ ಪುಣ್ಯ ಎಂದರು.
ಕಾಲೇಜಿಗೆ 75 ವರ್ಷ ತುಂಬಲು ಒಂದೆರಡು ತಿಂಗಳು ಇರುವುದರಿಂದ 75ನೇ ವರ್ಷದ ಕಾರ್ಯಕ್ರಮ ಆಚರಿಸಲು ಸ್ವಾಗತ ಸಮಿತಿ ರಚಿಸಬೇಕು. ಇಲ್ಲಿ ಓದಿ ಉನ್ನತ ಹುದ್ದೆಗಳಲ್ಲಿರುವವರ ಪಟ್ಟಿ ಮಾಡಿ ಸಮಿತಿ ರಚಿಸಬೇಕು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಮಿತಿಯಲ್ಲಿರುವಂತೆ ಆಸಕ್ತಿ ವಹಿಸಿ, ಅದ್ದೂರಿಯಾಗಿ ಬಾಲಕರ ಸರ್ಕಾರಿ ಜೂನಿಯರ್ ಕಾಲೇಜ್-75 ಸಂಭ್ರಮ ಕಾರ್ಯಕ್ರಮ ಮಾಡುವ ಮೂಲಕ ಕಾಲೇಜಿನಲ್ಲಿನ ಸಮಸ್ಯೆಗಳಿಗೆ ಶಾಶ್ವತವಾಗಿ ಮುಕ್ತಿ ಹಾಡಲು ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ. ಶಿಕ್ಷಣ ಕ್ಷೇತ್ರದ ಪ್ರಗತಿಗೆ ಮುಂದಾಗುವುದು ದೇವರ ಕೆಲಸಕ್ಕೆ ಸಮ ಎಂದು ಹೇಳಿದರು.
ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಶಿವಕುಮಾರ್ ಮಾತನಾಡಿ, ಶಿಕ್ಷಣವೇ ಬದುಕಿಗೆ ಭೂಷಣ. ಖಾಸಗಿ ಸಂಸ್ಥೆ, ಕಂಪನಿಗಳಲ್ಲಿ ಜಾತಿ, ಬಣ್ಣ, ಅಂಕಪಟ್ಟಿ ನೋಡುವುದಿಲ್ಲ. ಕೇವಲ ಕೌಶಲ್ಯವನ್ನ ಗಮನಿಸಿ ಕೆಲಸ ಕೊಡುತ್ತಾರೆ. ಆದ್ದರಿಂದ ಆಸಕ್ತಿಯಿಂದ ಓದಿ ಜ್ಞಾನ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಪ್ರಬಂಧ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬಹುದು. ಗುಣಮಟ್ಟದ ಫಲಿತಾಂಶ ತರಲು ಉಪನ್ಯಾಸಕರಲ್ಲಿ ಒಗ್ಗಟ್ಟು ಇರಬೇಕು ಎಂದು ತಿಳಿಸಿದ ಶಿವಕುಮಾರ್, ಸಂಸದರ ಮೂಲಕ ಅನುದಾನ ತರಲು ವೈಯಕ್ತಿವಾಗಿ ಹೆಚ್ಚು ಆಸಕ್ತಿ ವಹಿಸುವೆ ಎಂದು ಭರವಸೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಎಚ್.ಬಿ.ನರಸಿಂಹಮೂರ್ತಿ ಮಾತನಾಡಿ, ಕಾಲೇಜು ಕಟ್ಟಡ ಹಳೆಯದಾಗಿದ್ದು, ಯಾವುದೇ ಭಾಗ ಕುಸಿದು ಅಪಾಯ ಸಂಭವಿಸೀತು ಎಂಬ ಆತಂಕ ಸದಾ ಕಾಡುತ್ತದೆ ಎಂದರು.
ಉಪನ್ಯಾಸಕರು, ಸಿಬ್ಬಂದಿ ಕೊರತೆ ಇಲ್ಲ. ಆದರೆ ಮೂಲ ಸೌಕರ್ಯಗಳು ಇಲ್ಲ. ಆದ್ದರಿಂದ ಮುಖ್ಯವಾಗಿ ಕಾಲೇಜು ಜೀರ್ಣೋದ್ಧಾರಕ್ಕೆ ಆದ್ಯತೆ ನೀಡಬೇಕಿದೆ. ಶಾಸಕರ, ಸಂಸದರು, ಸಚಿವರ ಗಮನಸೆಳೆದು ಅನುದಾನ ತರುವ ಕೆಲಸ ಹೊಸ ಸಮಿತಿ ಮಾಡಲಿದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಕಾಲೇಜಿನ ಹಿರಿಯ ಉಪನ್ಯಾಸಕ ಪ್ರೊ.ಕೃಷ್ಣಪ್ಪ ಮಾತನಾಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಲೇಜು ಪ್ರಗತಿಗೆ ಸಹಕಾರ ನೀಡುತ್ತಿದ್ದಾರೆ. ಆದರೆ, ಹಳೇ ಕಟ್ಟಡಕ್ಕೆ ಹೊಸ ರೂಪ ಕೊಡಲು ಅನುದಾನ ಬೇಕಿದೆ ಎಂದರು.
ನಿವೃತ್ತ ಪ್ರಾಚಾರ್ಯ ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದರು.
ಉಪನ್ಯಾಸಕ ದೊಡ್ಡಯ್ಯ ಸ್ವಾಗತಿಸಿ, ನಿರೂಪಿಸಿದರು. ಉಪನ್ಯಾಸಕರಾದ ರವಿಕುಮಾರ್, ರೇಣುಕಾ, ಸಮಿತಿ ಸದಸ್ಯ ಮಹೇಶಬಾಬು ಇತರರು ಉಪಸ್ಥಿತರಿದ್ದರು.