ದಾವಣಗೆರೆ,ಜುಲೈ.23ಭದ್ರಾ ಜಲಾಶಯದಿಂದ ಅಚ್ಚುಕಟ್ಟು ದಾರರಿಗೆ ಮಳೆಗಾಲದ ಬೆಳೆಗೆ ನೀರು ಹರಿಸಬೇಕು ಮತ್ತು ಜಲಾಶಯದ ದುರಸ್ಥಿ ಕೈಗೊಳ್ಳಬೇಕೆಂದು ಹೆದ್ದಾರಿ ಬಂದ್ ಗೆ ಕರೆ ಕೊಟ್ಟಿದ್ದ ರೈತ ಮುಖಂಡರೊಂದಿಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಒಂದೆರಡು ದಿನಗಳಲ್ಲಿ ಕಾಡಾ ಸಭೆ ಕರೆಯಲು ನಿರ್ಣಯಿಸಲಾಗುತ್ತದೆ ಎಂದು ದೂರವಾಣಿಯಲ್ಲಿ ನೀಡಿದ ಭರವಸೆ ಮೇರೆಗೆ ರೈತ ಮುಖಂಡರು ಉದ್ದೇಶಿಸಿದ್ದ ಪ್ರತಿಭಟನೆ ಮುಂದೂಡಿದ್ದಾರೆ.
ಜುಲೈ 23 ರಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ರೈತ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಭದ್ರಾ ಜಲಾಶಯದ ಅಗತ್ಯ ದುರಸ್ಥಿಗೆ ಅನುದಾನ ಬಿಡುಗಡೆ ಮತ್ತು ಕಾಲುವೆಗಳ ದುರಸ್ಥಿ ಸೇರಿದಂತೆ ಮಳೆಗಾಲದ ಬೆಳೆಗೆ ನೀರು ಹರಿಸಬೇಕೆಂಬ ಬೇಡಿಕೆಗಳನ್ನಿಟ್ಟು ಹೆದ್ದಾರಿ ಬಂದ್ ಕರೆ ಕೊಟ್ಟಿದ್ದರು.
ಅಧಿವೇಶನ ನಡೆಯುತ್ತಿದ್ದು ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗಿಯಾಗಿದ್ದು ಜಿಲ್ಲೆಯ ಹಿತದೃಷ್ಟಿಯಿಂದ ನಿಮ್ಮ ಬೇಡಿಕೆಗಳನ್ನು ಉಸ್ತುವಾರಿ ಸಚಿವರ ಗಮನಕ್ಕೆ ಮತ್ತು ಸರ್ಕಾರದ ಗಮನಕ್ಕೆ ತಂದು ರೈತರ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಜಿಲ್ಲಾಧಿಕಾರಿಯವರು ಭರವಸೆ ನೀಡಿದರು. ಆದರೂ ಒಪ್ಪದ ಮುಖಂಡರು ಪಟ್ಟು ಹಿಡಿದಾಗ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ದೂರವಾಣಿಯಲ್ಲಿ ಸಮಾಲೋಚಿಸಿದಾಗ ಜುಲೈ 24 ರಂದು ಉಪಮುಖ್ಯಮಂತ್ರಿಗಳು ಎಲ್ಲಾ ನೀರಾವರಿ ನಿಗಮಗಳ ಅಧಿಕಾರಿಗಳು ಹಾಗೂ ಸಚಿವರು, ಶಾಸಕರೊಂದಿಗೆ ಸಭೆ ಕರೆದಿದ್ದು ಈ ಸಭೆಯಲ್ಲಿ ಭದ್ರಾ ಕಾಡಾ ಸಭೆ ಕರೆದು ಕಾಲುವೆಗಳಿಗೆ ನೀರು ಬಿಡಲು ದಿನಾಂಕ ನಿಗದಿ ಮಾಡಲಾಗುತ್ತದೆ. ಈ ಸಭೆಗೆ ದಾವಣಗೆರೆ ರೈತ ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದು ರೈತ ಮುಖಂಡರ ಸಭೆಯಲ್ಲಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಎರಡು ದಿನಗಳಲ್ಲಿ ನೀರು ಬಿಡಲು ತೀರ್ಮಾನಿಸಬೇಕು ಮತ್ತು ಭದ್ರಾ ಜಲಾಶಯದಲ್ಲಿನ ಸ್ಲುಗೇಟ್ ದುರಸ್ಥಿ ಮತ್ತು ಕ್ರೆಸ್ ಗೇಟ್ ದುರಸ್ಥಿ ಮತ್ತು ನಾಲಾ ದುರಸ್ಥಿಗೆ ಅನುದಾನ ಬಿಡುಗಡೆ ಮಾಡಲು ಆಗಸ್ಟ್ 15 ವರೆಗೆ ಗಡುವು ಮತ್ತು ತುಂಗಾದಿಂದ ಭದ್ರಾಕ್ಕೆ 22.5 ಟಿಎಂಸಿ ಲಿಫ್ಟ್ ಮಾಡದೆ, ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸಬಾರದೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಸುಜಾತ, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ರೈತ ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ್, ಬಲ್ಲೂರು ರವಿಕುಮಾರ್, ಶಾಮನೂರು ಲಿಂಗರಾಜ, ಕೋಳೆನಹಳ್ಳಿ ಸತೀಶ್ ಹಾಗೂ ಇನ್ನಿತರೆ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು