ಚಿತ್ರದುರ್ಗಜುಲೈ.23:
ದಿನೇ ದಿನೇ ಡೆಂಗ್ಯೂ ಜ್ವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಡೆಂಗ್ಯೂ ಜ್ವರದ ನಿರ್ಲಕ್ಷೆ ಬೇಡ. ಸ್ವಚ್ಛತೆ ಕಡೆ ಗಮನಹರಿಸಿ, ಸೊಳ್ಳೆಗಳ ಉತ್ಪತ್ತಿ ತಾಣ ನಾಶ ಮಾಡಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಸಲಹೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ಗುಂಪು ಸಭೆಯಲ್ಲಿ ಅವರು ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮುದ್ದಾಪುರ ಹೊಸಹಟ್ಟಿ ಗ್ರಾಮದಲ್ಲಿ 2 ಪ್ರಕರಣಗಳು ದೃಢಪಟ್ಟಿದ್ದು, ಡೆಂಗ್ಯೂ ಹಾಟ್ಸ್ಪಾಟ್ ಎಂದು ಗುರುತಿಸಲಾಗಿದೆ. ಮನೆ ಮನೆ ಭೇಟಿ ಲಾರ್ವಾ ಸಮೀಕ್ಷೆ, ಜ್ವರ ಸಮೀಕ್ಷೆ, ಗುಂಪು ಸಭೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರ ಸಹಕಾರ ಪಡೆದು ಗ್ರಾಮಗಳಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶ ಮಾಡಿ. ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಶುಕ್ರವಾರ ಸೊಳ್ಳೆ ತಾಣ ನಾಶ ಮಾಡುವ ಕಾರ್ಯಕ್ರಮ ಮಾಡಿ ಸೊಳ್ಳೆಗಳು ಹೆಚ್ಚು ಇದ್ದ ಪ್ರದೇಶದಲ್ಲಿ ಮನೆ ಒಳಾಂಗಣದಲ್ಲಿ ಧೂಮಲೀಕರಣ ಮಾಡಿಸಿ, ಘನತ್ಯಾಜ್ಯ ವಸ್ತುಗಳ ವಿಲೇವಾರಿ, ವಿಶೇಷವಾಗಿ ಟೀ ಕುಡಿದು ಬಿಸಾಕಿದ ಕಪ್, ಚಿಪ್ಪು, ಎಳನೀರ ಬರುಡೆ, ಒಡೆದ ಪ್ಲಾಸ್ಟಿಕ್ ಬಕೀಟ್, ಒಡೆದ ಮಡಕೆ ಉಪಯೋಗಿಸದೇ ಇರುವ ಒರಳುಕಲ್ಲು ಇವುಗಳ ಸ್ವಚ್ಚತೆ ಬಗ್ಗೆ ಸಾರ್ವಜನಿಕರಿಕೆ ತಿಳುವಳಿಕೆ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ.ಜಾನಕಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಭಿಷೇಕ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಾಮಪ್ಪ, ಪ್ರವೀಣ್, ರೇಣುಕಾಸ್ವಾಮಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಲತಾ, ಆಶಾ ಕಾರ್ಯಕರ್ತೆಯರು, ನಾಗರೀಕರು ಇದ್ದರು.