ತುಂಗಭದ್ರಾ ನದಿಗೆ ೧.೫೬.ಲಕ್ಷ ಕ್ಯೂಸೆಕ್ಸ್ ನೀರು- ಕಂಪ್ಲಿಯಲ್ಲಿ ಮುಂದುವರಿದ ಪ್ರವಾಹ; ಜಮೀನುಗಳು ಜಲಾವೃತ-ಕಂಪ್ಲಿ ಗಂಗಾವತಿ ಸಂಪರ್ಕ ಕಡಿತ.
ಕಂಪ್ಲಿ: ತುಂಗಭದ್ರಾ ನದಿಗೆ ಇಂದು ಮಧ್ಯಾಹ್ನ ೩ ಗಂಟೆಗೆ ೧.೫೬.ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಟ್ಟಿರುವ ಹಿನ್ನೆಲೆಯಲ್ಲಿ ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪಿ ಗಂಗಾವತಿ ಸಂಪರ್ಕ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಸತತವಾಗಿ ಮೂರನೇ ದಿನವೂ ನದಿ ಪಾತ್ರದ ಜಮೀನುಗಳು,ಬೆಳೆಗಳು ಜಲಾವೃತ್ತಗೊಂಡಿದ್ದು, ಕಂಪ್ಲಿ ಗಂಗಾವತಿ ಹಾಗೂ ಕಂಪ್ಲಿ ಸಣಾಪುರ, ಸಿರಗುಪ್ಪ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಬರುತ್ತಿದ್ದು, ಆ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಕಂಪ್ಲಿ ಭಾಗದಲ್ಲಿ ಮಳೆಯಾಗದಿದ್ದರೂ ಸಹಿತ ನೆರೆ ಹಾವಳಿಯನ್ನು ಅನುಭವಿಸುವಂತಾಗಿದೆ. ನದಿಗೆ ೧.೫೬.ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಟ್ಟಿರುವುದರಿಂದ ಕಲ್ಯಾಣ,ಉತ್ತರ,ಮಧ್ಯ ಕರ್ನಾಟಕ ಸೇರಿದಂತೆ ಆಂದ್ರ ಪ್ರದೇಶ, ತೆಲಂಗಾಣದ ಭಾಗಕ್ಕೆ ತೆರಳುವ ಪ್ರಮುಖ ಕೊಂಡಿಯಾದ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ,ಮುಳುಗಿರುವುದರಿಂದ ಪ್ರಯಾಣಿಕರು ಅನಿವಾರ್ಯವಾಗಿ ವಿಜಯನಗರ ಜಿಲ್ಲೆಯ ಬುಕ್ಕಸಾಗರ ಕಡೆಬಾಗಿಲು ಮೂಲಕ ಸುತ್ತುವರಿದು ಪ್ರಯಾಣಿಸಬೇಕಾಗಿದ್ದರೆ, ಕಂಪ್ಲಿ ಮೂಲಕ ಸಣಾಪುರ ಮಾರ್ಗವಾಗಿ ಸಿರುಗಪ್ಪಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸುತ್ತುವರಿದು ಪ್ರಯಾಣಿಸ ಬೇಕಾಗಿದೆ.ಇದರ ಜೊತೆಗೆ ಕಳೆದ ಮೂರು ದಿನಗಳಿಂದ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ಪ್ರವಾಹ ಇರುವುದರಿಂದ ನದಿ ತೀರದ ಜಮೀನುಗಳು ಜಲಾವೃತಗೊಂಡಿದ್ದು, ಬೆಳೆಗಳು ಹಾಳಾಗುವ ಪರಿಸ್ಥಿತಿ ತಲೆದೋರಿದೆ.
ಪ್ರವಾಹಕ್ಕೀಡಾದ ಕಂಪ್ಲಿ ಕೋಟೆ ಪ್ರದೇಶಕ್ಕೆ ತಹಸಿಲ್ದಾರ್ ಶಿವರಾಜ ಶಿವಪುರ, ನೋಡಲ್ ಅಧಿಕಾರಿ ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಭೇಟಿ ನೀಡಿ ಪರಿಸ್ಥಿಯ ಅವಲೋಕನ ನಡೆಸಿದರು. ಇನ್ನು ತಾಲ್ಲೂಕಿನ ವಿವಿಧ ಗ್ರಾಮಗಳಾದ ಬೆಳಗೋಡುಹಾಳು, ಸಣಾಪುರ, ಇಟಗಿ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳಾದ ಡಾ.ಅಭಿಲಾಷ ಸಿ.ಆರ್. ಕೆ.ಎಸ್.ಮಲ್ಲನಗೌಡ, ಆರ್.ಕೆ.ಶ್ರೀಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನದಿಯಲ್ಲಿ ಪ್ರವಾಹ ಹೆಚ್ಚಾದರೆ ಕಂಪ್ಲಿ ಕೋಟೆ ಪ್ರದೇಶದ ಮೀನುಗಾರ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಹಸಿಲ್ದಾರ್ ಶಿವರಾಜ ಶಿವಪುರ ತಿಳಿಸಿದರು.
ನದಿ ಸುತ್ತಮುತ್ತ ಎಲ್ಲಾ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ಕಂಪ್ಲಿ ಮತ್ತು ಕುರುಗೋಡು ಪೊಲೀಸರು ವ್ಯಾಪಕ ಕಟ್ಟೆಚ್ಚರವನ್ನು ವಹಿಸಿದ್ದಾರೆ.