ಭದ್ರಾ : ಇಂದಿನಿ0ದಲೇ ನೀರು ಹರಿಸಲು ನಿರ್ಣಯ : ಮಧು ಎಸ್.ಬಂಗಾರಪ್ಪ

Vijayanagara Vani
ಭದ್ರಾ : ಇಂದಿನಿ0ದಲೇ ನೀರು ಹರಿಸಲು ನಿರ್ಣಯ : ಮಧು ಎಸ್.ಬಂಗಾರಪ್ಪ
ಶಿವಮೊಗ್ಗ : ಜುಲೈ 29 : ಈ ಬಾರಿಯ ಮುಂಗಾರು ರೈತರಲ್ಲಿ ಮಂದಹಾಸ ಮೂಡಿಸಿದ್ದು, ಭದ್ರಾ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಈ ಹಂತದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗುವಂತೆ ಭದ್ರಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಮೂಲಕ ನೀರಿನ ಲಭ್ಯತೆ ಹಾಗೂ ಮುಂದಿನ ದಿನಗಳಲ್ಲಿ ಮಳೆ ಬರಬಹುದಾದ ಅಂದಾಜಿನ ಆದಾರದ ಮೇಲೆ ತಜ್ಞರ ಅಭಿಪ್ರಾಯವನ್ನಾಧರಿಸಿ ನೀರನ್ನು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ಒಣಭೂಮಿ ಪ್ರದೇಶಗಳಿಗೂ ನೀರು ಹರಿಸುವುದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಜಲಾಶಯದಲ್ಲಿ ನೀರನ್ನು ಉಳಿಸಿಕೊಳ್ಳುವ, ಸದ್ಬಳಕೆ ಮಾಡಿಕೊಳ್ಳುವ ಹಾಗೂ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ನೀರಾವರಿ ಯೋಜನೆಗಳ ಕುರಿತು ಮುಂದಿನ 15ದಿನಗಳೊಳಗಾಗಿ ರಾಜ್ಯ ನೀರಾವರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ರೈತ ಮುಖಂಡರುಗಳ ಸಭೆಯನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದ ಅವರು ಇದೇ ಸಂದರ್ಭದಲ್ಲಿ ತುಂಗಾ, ಭದ್ರಾ, ಶರಾವತಿ ಸೇರಿರದಂತೆ ಮತ್ತಿತರ ಜಲಾಶಯಗಳ ನೀರಿನ ನಿರ್ವಹಣೆ, ಸಮಸ್ಯೆ-ಸವಾಲು, ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಚರ್ಚಿಸಲು ಉದ್ದೇಶಿಸಲಾಗಿದೆ ಎಂದವರು ನುಡಿದರು.
ಈ ಪ್ರದೇಶದಲ್ಲಿ ಬೆಳೆ ಮಾದರಿ ಬದಲಾವಣೆಗಳಾಗಿದ್ದು, ಅಗತ್ಯಗಳಿಗೆ ತಕ್ಕಂತೆ ನೀರನ್ನು ಹರಿಸುವ ಬಗ್ಗೆ ಗಮನಹರಿಸುವ ಅಗತ್ಯವಿದೆ. ಅನಧಿಕೃತ ಪಂಪ್‌ಸೆಟ್ ನಿಯಂತ್ರಣಕ್ಕೆ ಹಾಗೂ ಅಗತ್ಯ ಕಠಿಣ ಕ್ರಮಗಳನ್ನು ಅನುಸರಿಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕರ್ನಾಟಕ ನೀರಾವರಿ ನಿಗಮದಿಂದ ಸಮುದಾಯ ಭವನ, ದೇವಸ್ತಾನಗಳ ಅಭಿವೃದ್ಧಿ ಮತ್ತಿತರ ಚಟುವಟಿಕೆಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ನಿಯಂತ್ರಿಸಿ, ನೀರಾವರಿ ಯೋಜನೆಯ ಅಭಿವೃದ್ಧಿ ಉದ್ದೇಶಗಳಿಗಾಗಿಯೇ ಬಳಸಿಕೊಳ್ಳಲು ಕಳೆದ ವಾರ ಬೆಂಗಳೂರಿನಲ್ಲಿ ನೀರಾವರಿ ಸಚಿವರ ಸಭೆಯಲ್ಲಿ ಈ ರೀತಿಯ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
* ರೈತರ ಹಿತಕಾಯುವ ನಿಟ್ಟಿನಲ್ಲಿ ಕಾಡಾ ಕಾರ್ಯನಿರ್ವಹಿಸಲಿದೆ. ಎಲ್ಲಾ ಸಂದರ್ಭಗಳಲ್ಲಿಯೂ ರೈತರು ಸಾರ್ವಜನಿಕರು ಸಹಕರಿಸಬೇಕು. – ಅಂಶುಮoತ್‌ಗೌಡ, ಕಾಡಾ ಅಧ್ಯಕ್ಷ.
* ನೀರಿನ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳ ಕೊರತೆ ಪ್ರಧಾನವಾಗಿದೆ. ನಾಲಾದಲ್ಲಿ ಗಿಡಗಂಟೆಗಳು ಬೆಳೆದು ಸುಗಮ ನೀರು ಸರಬರಾಜಿಗೆ ತೀವ್ರ ತರಹದ ಅಡಚಣೆ ಉಂಟಾಗಿದೆ. ಉದ್ಯೋಗಖಾತ್ರಿ ಯೋಜನೆಯಡಿ ನಾಲಾ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ದೊಡ್ಡ ಪ್ರಮಾಣದಲ್ಲಿ ದುರಸ್ತಿಕಾರ್ಯ ಕೈಗೆತ್ತಿಕೊಳ್ಳುವಂತಹ ಸಂದರ್ಭಗಳಲ್ಲಿ ಭಾರೀ ಯಂತ್ರಗಳನ್ನು ಬಳಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಸರ್ಕಾರದ ಆರ್ಥಿಕ ನೆರವು ಪಡೆದುಕೊಳ್ಳಬೇಕು. ಸೌಡಿಗರಿಗೆ ಸಕಾಲದಲ್ಲಿ ವೇತನ ನೀಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಹೆಚ್ಚಿನ ಸಿಬ್ಬಂಧಿಗಳನ್ನು ನೇಮಿಸಿಕೊಳ್ಳಬೇಕು. ಇದರಿಂದಾಗಿ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಪ್ರದೇಶಗಳಿಗೆ ನೀರು ತಲುಪಿಸಲು ಸಾಧ್ಯವಾಗಲಿದೆ.
– ಬಸವರಾಜಪ್ಪ, ರೈತ ಮುಖಂಡರು.
* ಕಳೆದ ಮತ್ತು ಪ್ರಸಕ್ತ ಸಾಲಿನಲ್ಲಿ ನಿಯಮ ಉಲ್ಲಂಘಿಸಿ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವುದು ಸರಿಯಲ್ಲ. ಬೆಳೆ ಆಧಾರಿತವಾಗಿ ಕಾಲಕಾಲಕ್ಕೆ ನೀರು ಬಿಡುವುದನ್ನು ಅನುಸರಿಸಬೇಕು. ನೀರನ್ನು ತಡೆದು-ಬಿಡುವ ಪದ್ದತಿಯಲ್ಲಿ ಬದಲಾವಣೆ ಅಗತ್ಯವಿದೆ. ಕೆರೆ-ಕಟ್ಟೆ ಕಾಲುವೆಗಳಲ್ಲಿ ಸತತವಾಗಿ ನೀರನ್ನು ಹರಿಸಿ, ಅಂತರ್ಜಲ ಹೆಚ್ಚಿಸುವ ಅಗತ್ಯವಿದೆ. ವಿಶೇಷವಾಗಿ ಸಮರ್ಪಕ ನೀರಿನ ನಿರ್ವಹಣೆ ಬಗ್ಗೆ ಗಮನಹರಿಸಬೇಕು. ಜಲಾಶಯದ ರಕ್ಷಣೆ ಬಗ್ಗೆ ತಜ್ಞರ ಸಮಿತಿ ರಚಿಸಿ ನಿರ್ವಹಣೆ ಬಗ್ಗೆ ಗಮನಹರಿಸಬೇಕು. ಅದರ ನಿರ್ಲಕ್ಷö್ಯ ಸಹಿಸಲಾಗದು.
_ ಕೆ.ಟಿ.ಗಂಗಾಧರಪ್ಪ, ರೈತ ಮುಖಂಡರು.
* ಇ0ದಿನಿ0ದಲೇ ಜಲಾಶಯದಿಂದ ನೀರನ್ನು ಹರಿಸಲು ನಿರ್ಣಯ ಕೈಗೊಳ್ಳಬೇಕು. ಕೊನೆ ಪ್ರದೇಶದಲ್ಲಿನ ಕೃಷಿ ಚಟುವಟಿಕೆಗಳಿಗೆ ನೀರನ್ನು ತಲುಪುತ್ತಿಲ್ಲ. ಪ್ರಮುಖವಾಗಿ ಕಾಲುವೆಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಭದ್ರಾ ನಾಲೆಯ ಆಧುನೀಕರಣದಿಂದಾಗಿ ಹೆಚ್ಚಿನ ಪ್ರಮಾಣದ ನೀರನ್ನು ಹರಿಸಲು ಸಾಧ್ಯವಾಗಿದೆ. ಅಕ್ರಮ ಪಂಪ್‌ಸೆಟ್‌ಗಳ ಹಾವಳಿ ನಿಯಂತ್ರಿಸುವುದು ಅನಿವಾರ್ಯವಾಗಿದೆ. ಅವಶ್ಯಕ ಕಾಮಗಾರಿಗಳಿಗೆ ಸರ್ಕಾರದ ನೆರವು ಅಗತ್ಯವಿದೆ. – ಬಿ.ಪಿ.ಹರೀಶ್, ಶಾಸಕರು. ಹರಿಹರ.
ಸಭೆಯಲ್ಲಿ ಕಾಡಾ ಅಧ್ಯಕ್ಷ ಅಂಶುಮ0ತ್‌ಗೌಡ, ಹೊನ್ನಾಳಿ ಶಾಸಕ ಬಿ.ಜಿ.ಶಾಂತನಗೌಡರ್, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್, ಹರಿಹರ ಶಾಸಕ ಬಿ.ಪಿ.ಹರೀಶ್, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಹರಪನಹಳ್ಳಿ ಶಾಸಕಿ ಶ್ರೀಮತಿ ಲತಾ, ಚನ್ನಗಿರಿ ಶಾಸಕ ಶಿವಗಂಗೆ ಬಸವರಾಜ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ಎಂ.ಎ.ಡಿ.ಬಿ.ಅಧ್ಯಕ್ಷ ಆರ್.ಎಂ.ಮoಜುನಾಥಗೌಡ, ವಿಧಾನಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಷ್‌ಬಾನು, ಜಿಲ್ಲಾಧಿಕಾರಿ ಗುರುದತ್ತಹೆಗಡೆ, ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಸೇರಿದಂತೆ ಅನೇಕ ರೈತಮುಖಂಡರು, ಅಧಿಕಾರಿಗಳು ಹಾಗೂ ನೀರಾವರಿ ಇಲಾಖಾ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article
error: Content is protected !!