ಚಿತ್ರದುರ್ಗಆಗಸ್ಟ್ 01:
ತಾಯಿಯ ಎದೆ ಹಾಲು ಮಗುವಿಗೆ ಅಮೃತ ಧಾರೆ. ತಾಯಿ ಎದೆ ಹಾಲಿನಲ್ಲಿ ಅಪರಿಮಿತವಾದ ಪೋಷಕಾಂಶಗಳು ಅಡಗಿವೆ. ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಹೇಳಿದರು.
ಇಲ್ಲಿನ ಬುದ್ಧ ನಗರದ ನಗರ ಆರೋಗ್ಯ ಕೇಂದ್ರದಲ್ಲಿ ಗುರುವಾರ ವಿಶ್ವಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲನೇ ವಾರ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತದೆ. ಹುಟ್ಟಿದ ತಕ್ಷಣ ಮಗುವಿಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಎದೆ ಹಾಲು ಕುಡಿಸಬೇಕು. ಎದೆ ಹಾಲು ಕೊಡುವುದರಿಂದ ತಾಯಿ ಮತ್ತು ಮಗುವಿನ ಮಧ್ಯೆ ಉತ್ತಮವಾದ ಗಟ್ಟಿಯಾದ ಬಾಂಧವ್ಯ ಬೆಸೆಯುತ್ತದೆ ಎಂದರು.
ಮಗು ಹುಟ್ಟಿದಾಗಿನಿಂದ 6 ತಿಂಗಳವರೆಗೂ ಎದೆಹಾಲನ್ನು ಬಿಟ್ಟು ಬೇರೆ ಏನನ್ನೂ ಕುಡಿಸಬಾರದು. ಆಗ ಮಾತ್ರ ಸಾರ್ಥಕ ಎನಿಸುತ್ತದೆ. ಕೊರತೆಗಳನ್ನು ಕೊನೆಗಾಣಿಸಿ ತಾಯಂದಿರಿಗೆ ಎದೆ ಹಾಲುಣಿಸಲು ಪ್ರೋತ್ಸಾಹ ನೀಡಿ ಎಂದು ಹೇಳಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಗೌರಮ್ಮ ಮಾತನಾಡಿ, ಮಗುವಿನ ಆರೋಗ್ಯ ಮತ್ತು ಬದುಕುಳಿಯುವಿಕೆ ಖಚಿತಪಡಿಸಿಕೊಳ್ಳಲು ಸ್ತನ್ಯಪಾನವು ಅತ್ಯಗತ್ಯ ಅಭ್ಯಾಸವಾಗಿದೆ. ಆದಾಗ್ಯೂ, ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸುಗಳ ಹೊರತಾಗಿಯೂ, 6 ತಿಂಗಳೊಳಗಿನ ಶಿಶುಗಳಲ್ಲಿ ಅರ್ಧಕ್ಕಿಂತ ಕಡಿಮೆ ಶಿಶುಗಳು ಪ್ರತ್ಯೇಕವಾಗಿ ಸ್ತನ್ಯಪಾನ ಮಾಡುತ್ತಾರೆ. ಎದೆಹಾಲು ಶಿಶುಗಳಿಗೆ ಸಂಪೂರ್ಣ ಮತ್ತು ಸುರಕ್ಷಿತ ಆಹಾರವಾಗಿದ್ದು, ಸಾಮಾನ್ಯ ಬಾಲ್ಯದ ಕಾಯಿಲೆಗಳಿಂದ ರಕ್ಷಿಸುವ ಅಗತ್ಯ ಪ್ರತಿಕಾಯಗಳನ್ನು ಹೊಂದಿರುತ್ತದೆ. ಇದು ಜೀವನದ ಆರಂಭಿಕ ತಿಂಗಳುಗಳಲ್ಲಿ ಅಗತ್ಯವಿರುವ ಎಲ್ಲಾ ಶಕ್ತಿ ಮತ್ತು ಪೋಷಕಾಂಶ ಒದಗಿಸುವ ಜತೆಗೆ ಮುಂದಿನ ವರ್ಷಗಳಲ್ಲಿ ಪೌಷ್ಟಿಕಾಂಶದ ಗಮನಾರ್ಹ ಮೂಲವಾಗಿ ಮುಂದುವರಿಯುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ವಿಶ್ವಸ್ತನ್ಯಪಾನ ಸಪ್ತಾಹ ಅಭಿಯಾನವು ಹಾಲುಣಿಸುವ ತಾಯಂದಿರಿಗೆ ಕುಟುಂಬಗಳು, ಸಮುದಾಯ, ಸಮಾಜ ಮತ್ತು ಆರೋಗ್ಯ ವೃತ್ತಿಪರರಿಂದ ಬೆಂಬಲದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಸ್ತನ್ಯಪಾನ ಮಾಡುವ ಮಕ್ಕಳು ಉತ್ತಮ ಅರಿವಿನ ಕಾರ್ಯಕ್ಷಮತೆ ಹೊಂದಿರುತ್ತಾರೆ. ಸ್ತನ್ಯಪಾನ ಮಾಡುವ ಮಹಿಳೆಯರು ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ಗಳ ಅಪಾಯ ಕಡಿಮೆ ಎಂದು ತಿಳಿಸಿದರು.
ಬುದ್ಧನಗರ ನಗರ ಆರೋಗ್ಯ ಕೇಂದ್ರದ ಡಾ.ಸುರೇಂದ್ರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಪೂರಕ ಪೌಷ್ಟಿಕ ಆಹಾರದ ಬಗ್ಗೆ ತಿಳಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಉಷಾ ಮಗುವನ್ನು ಹಾಲು ಕುಡಿಸುವಾಗ ಎತ್ತಿಕೊಳ್ಳುವ ಬಂಗಿಯ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಜಿಲ್ಲಾ ವ್ಯವಸ್ಥಾಪಕರಾದ ಕರಕಪ್ಪ ಮೇಟಿ, ವಿರೇಶ್, ಅರ್ಜುನ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗುರು ಮೂರ್ತಿ, ಕೋಟಿ, ಆಶಾ ಕಾರ್ಯಕರ್ತೆಯರು, ತಾಯಿ ಮಕ್ಕಳು ಇದ್ದರು.