ಬೆಂಗಳೂರು (ಆಗಸ್ಟ್ 3):- ಯಾದಗಿರಿ ಪಿಎಸ್ಐ ಸಾವು ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡಿಲ್ಲ. ಡೆತ್‌ನೋಟ್ ಬರೆದಿಟ್ಟಿಲ್ಲ. ವರ್ಗಾವಣೆ ವಿಚಾರಕ್ಕೆ ನೊಂದಿದ್ದರು ಎಂದು ಆತನ ಪತ್ನಿ ದೂರು ಕೊಟ್ಟಿದ್ದಾರೆ. ಅವರ ಆರೋಪವನ್ನು ಪರಿಗಣಿಸುತ್ತೇನೆ. ಆ ಆಯಾಮದಲ್ಲಿಯು ತನಿಖೆ ನಡೆಯಲಿದೆ. ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸ್ಥಳೀಯ ಶಾಸಕರಿಗೆ ಹಣ ಕೊಟ್ಟಿದ್ದರು ಎಂಬ ಆರೋಪವನ್ನು ಸರಿ ಅಥವಾ ಇಲ್ಲ ಅಂತ ಹೇಳಲು ಬರುವುದಿಲ್ಲ. ತನಿಖೆ ನಡೆಸಿದ ನಂತರ ಸತ್ಯಾಂಶ ಹೊರಬರಲಿದೆ. ನಾನು ಸಮುದಾಯ ಯಾವುದು ಎಂಬುದನ್ನು ನೋಡುವುದಿಲ್ಲ. ಕಾನೂನನ್ನು ನೋಡುತ್ತೇನೆ. ಆ ರೀತಿಯ ಘಟನೆ ನಡೆದಾಗ ಎಫ್‌ಐಆರ್ ಹಾಕಿಕೊಳ್ಳಬೇಕು. ಎಫ್‌ಐಆರ್ ದಾಖಲಿಸುವ ಮುನ್ನ ಪರಿಶೀಲನೆ ನಡೆಸುತ್ತಾರೆ. ಶಾಸಕರು ಇದ್ದರು ಅಥವಾ ಬೇರೆಯವರಿದ್ದರು, ಆಡಳಿತ ಪಕ್ಷದ ಶಾಸಕರಾಗಿದ್ದರು ಸಹ ಎಫ್ಐಆರ್ ದಾಖಲಿಸುತ್ತಾರೆ ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್‌ನವರು ಪಾದಯಾತ್ರೆಯನ್ನು ಕಾನೂನು ಬಾಹಿರವಾಗಿ ಮಾಡುವುದಿಲ್ಲ. ಶಾಂತಿಯುತವಾಗಿ ನಡೆಸುವುದಾಗಿ ಕೇಳಿಕೊಂಡಿದ್ದರಿಂದ ಸಿಎಂ ಜೊತೆ ಚರ್ಚಿಸಿ ಅವಕಾಶ ನೀಡಿದ್ದೇವೆ. ಯಾವುದೇ ರೀತಿಯ ಅಹಿತಕರ ಘಟನೆಗಳಾಗಬಾರದು, ಜನರಿಗೆ ತೊಂದರೆಗಳಾಗದಂತೆ ನೋಡಿಕೊಳ್ಳುವಂತೆ ಕಂಡಿಷನ್ ಹಾಕಲಾಗಿದೆ ಎಂದು ತಿಳಿಸಿದರು.