ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸರ್ಕಾರವು ಕರ್ನಾಟಕ ಸಂಭ್ರಮ 50 ರಡಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ಅಂಗವಾಗಿ ಕನ್ನಡಜ್ಯೋತಿ ರಥಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಲು ಅನುಕೂಲವಾಗುವಂತೆ ಮುಖ್ಯಮಂತ್ರಿಯವರು 2023 ರ ನವೆಂಬರ್ 02 ರಂದು ವಿಜಯನಗರ ಜಿಲ್ಲೆಯ ಹಂಪಿಯಿಂದ ಚಾಲನೆ ನೀಡಿದ್ದಾರೆ.
ಈ ರಥಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುತ್ತಾ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಗಸ್ಟ್ 05(ಸೋಮವಾರ) ರಂದು ಬೆಳಿಗ್ಗೆ 09:00 ಗಂಟೆಗೆ ಕೋಲಾರದ ಮಾಲೂರಿನಿಂದ ಹೊಸಕೋಟೆಗೆ ರಥಯಾತ್ರೆ ಆಗಮಿಸಲಿದೆ, ಆಗಸ್ಟ್ 06(ಮಂಗಳವಾರ) ರಂದು ಬೆಳಿಗ್ಗೆ 09:00 ಗಂಟೆಗೆ ಹೊಸಕೋಟೆಯಿಂದ ದೇವನಹಳ್ಳಿಗೆ, ಆಗಸ್ಟ್ 07(ಬುಧವಾರ) ರಂದು ಬೆಳಿಗ್ಗೆ 09:00 ಗಂಟೆಗೆ ದೇವನಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ, ಆಗಸ್ಟ್ 08(ಗುರುವಾರ) ರಂದು ಬೆಳಿಗ್ಗೆ 09:00 ಗಂಟೆಗೆ ದೊಡ್ಡಬಳ್ಳಾಪುರದಿಂದ ನೆಲಮಂಗಲಕ್ಕೆ ಸಂಚರಿಸಲಿದೆ.
ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಕನ್ನಡ ರಥಯಾತ್ರೆ ಸಂಚರಿಸಲಿದ್ದು ರಥಯಾತ್ರೆಯು ಜಿಲ್ಲೆಗೆ ಆಗಮಿಸುವ ದಿನದಿಂದ, ಜಿಲ್ಲೆಯಿಂದ ಬೀಳ್ಕೊಡುವ ದಿನಾಂಕದ ಸಮಯಗಳಲ್ಲಿ ಆಯಾ ಗ್ರಾಮ/ಗ್ರಾಮ ಪಂಚಾಯತಿ/ ತಾಲ್ಲೂಕು ಕೇಂದ್ರಗಳಲ್ಲಿ ರಥಯಾತ್ರೆಯನ್ನು ಗೌರವಯುತವಾಗಿ ಸ್ವಾಗತಿಸಲಾಗುತ್ತದೆ.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆಯೋಜಿಸಲಾಗುವ ಮೆರವಣಿಗೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಕನ್ನಡಪರ ಸಂಘಟನೆಗಳ ಎಲ್ಲಾ ಅಧ್ಯಕ್ಷರುಗಳು ಎಲ್ಲಾ ಪದಾಧಿಕಾರಿಗಳು, ಸಾಹಿತಿಗಳು, ಕಲಾವಿದರು, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.