“ಕೃತಕ ಬಣ್ಣ ಬಳಸಿ ಆಹಾರ ಪದಾರ್ಥಗಳು ತಯಾರಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್

Vijayanagara Vani
“ಕೃತಕ ಬಣ್ಣ ಬಳಸಿ ಆಹಾರ ಪದಾರ್ಥಗಳು ತಯಾರಿಸಿದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 05, 2024 – ಹೋಟೆಲ್, ಬೇಕರಿ, ಬೀದಿಬದಿ ಆಹಾರ ತಯಾರಿಕೆ ಅಂಗಡಿಗಳು ಹಾಗೂ ಇತರೆ ಆಹಾರ ತಯಾರಿಕಾ ಉದ್ದಿಮೆಗಳಿಗೆ ಕಾಲ ಕಾಲಕ್ಕೆ ಭೇಟಿ ನೀಡಿ, ಆಹಾರದ ಸುರಕ್ಷತೆ ಮತ್ತು ಗುಣಮಟ್ಟವನ್ನು ಪರಿಶೀಲಿಸುವ ಜತೆಗೆ ಕೃತಕ ಬಣ್ಣ ಬಳಸಿ ಆಹಾರ ಪದಾರ್ಥ ತಯಾರಿಸುವವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವಂತೆ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸೇವನೆಯು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಸಾರ್ವಜನಿಕರಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಅರಿವು ಮೂಡಿಸಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಶಾಲೆ ಅಂಗನವಾಡಿ ಮತ್ತು ವಸತಿ ನಿಲಯಗಳಿಗೆ ಭೇಟಿ ನೀಡಿ ಆಹಾರ ತಯಾರಿಸುವುದರ ಬಗ್ಗೆ, ಸ್ವಚ್ಛತೆಯ ಬಗ್ಗೆ ಪರಿಶೀಲಿಸಿ ಅರಿವು ಮೂಡಿಸಬೇಕು. ಬೀದಿಬದಿ ವ್ಯಾಪಾರಿಗಳು ,ಹೋಟೆಲ್ ಗಳು, ರೆಸ್ಟೋರೆಂಟ್ ಗಳಿಗೆ ಭೇಟಿ ಮಾಡಿ ಕೃತಕ ಬಣ್ಣ ಬಳಸದಂತೆ ಎಚ್ಚರಿಕೆವಹಿಸಬೇಕು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನಗೊಳಿಸಲು ಇಲಾಖಾವಾರು ವಿಷಯಗಳ ಬಗ್ಗೆ ಚರ್ಚಿಸಿ ನೋಂದಣಿ ಪರವಾನಗಿ ತೆಗೆದುಕೊಳ್ಳುವಂತೆ ಸೂಚಿಸಿದರು.
ವೆಜ್ ಆಹಾರ, ಚಿಕನ್, ಫಿಶ್ ಇತರೆ ಕಬಾಬ್ ಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸಿದರೆ ಏಳು ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆ ಮತ್ತು 10 ಲಕ್ಷದವರೆಗೆ ದಂಡವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ನಿಯಮ 59ರಡಿ ವಿಧಿಸಲಾಗುವುದು ಎಂದು ತಿಳಿಸಿದರು.
ಆಹಾರ ಘಟಕಗಳು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ನೋಂದಣಿ ಹಾಗೂ ಪರವಾನಗಿಗಳನ್ನು ಹೆಚ್ಚು ಹೆಚ್ಚು ಮಾಡಿಸಿ, ಆಹಾರದ ಸ್ಯಾಂಪಲ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಿಸಿ, ಅಸುರಕ್ಷಿತ ಆಹಾರ ಕಂಡುಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಬಗ್ಗೆ ವರದಿಯಾಗಬೇಕು.
ಆಹಾರ ಉದ್ದಿಮೆ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ಪರಿಶೀಲನೆ ಮಾಡಿ, ಬೀದಿ ಬೀದಿಗಳಲ್ಲಿ ತಯಾರಿಸುವ ಆಹಾರದ ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ನಿಗಾ ವಹಿಸಿ, ನಿಯಮಿತವಾಗಿ ಸಾರ್ವಜನಿಕರಿಂದ ಬಂದಂತಹ ದೂರಿನನ್ವಯ ಆಹಾರ ಮಾದರಿಗಳನ್ನು ಸಂಗ್ರಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಆಹಾರ ಸೇವನೆಯಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸುವ ಜತೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಧರ್ಮೇಂದ್ರ ಮಾತನಾಡಿ ಜಿಲ್ಲೆಯಲ್ಲಿ 5177 ಆಹಾರ ನೋಂದಣಿ ಹಾಗೂ 1593 ಆಹಾರ ಪರವಾನಗಿ ಇದ್ದು ಒಟ್ಟು ಶೇಕಡ 120 ಪ್ರಗತಿ ಸಾಧಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕಳಪೆ ಆಹಾರ ಕಂಡುಬಂದಲ್ಲಿ ದೂರು ನೀಡಿ:- ಜಿಲ್ಲೆಯ ವ್ಯಾಪ್ತಿಯಲ್ಲಿ ಆಹಾರ ಸುರಕ್ಷತೆ ಹಾಗೂ ಆಹಾರ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಯಾವುದಾದರು ಸಮಸ್ಯೆಗಳು, ಕಂಡು ಬಂದಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಧರ್ಮೇಂದ್ರ ಮೊಬೈಲ್ ಸಂಖ್ಯೆ 9901961771, ಹೋಸಕೋಟೆ ತಾಲ್ಲೂಕು ಆಹಾರ ಸುರಕ್ಷತೆ ಅಧಿಕಾರಿ ಗೋವಿಂದರಾಜು ಮೊಬೈಲ್ ಸಂಖ್ಯೆ 9845511663, ದೇವನಹಳ್ಳಿ ತಾಲ್ಲೂಕು ಆಹಾರ ಸುರಕ್ಷತ ಅಧಿಕಾರಿ ಪ್ರವೀಣ್ ಮೊಬೈಲ್ ಸಂಖ್ಯೆ 8884393910, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲ್ಲೂಕು ಆಹಾರ ಸುರಕ್ಷತ ಅಧಿಕಾರಿ ನಾಗೇಶ್, ಮೊಬೈಲ್ ಸಂಖ್ಯೆ 9731837210 ಇವರನ್ನು ಸಂಪರ್ಕಿಸಿ ದೂರು ನೀಡಬಹುದಾಗಿದೆ.
ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಪ್ರವೀಣ್, ಜಿಲ್ಲಾ ಕ್ಷಯರೋಗ ನಿಯಂತ್ರಣ ಆಧಿಕಾರಿ ಡಾ.ನಾಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲ್ಲೂಕು ಆಹಾರ ಸುರಕ್ಷತ ಅಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!