ಸಾಫ್ಟ್ ಲ್ಯಾಂಡಿಂಗ್ ಸಾಫ್ಟ್ ಲ್ಯಾಂಡಿಂಗ್.. ಎಂಬ ಪದ ಎಲ್ಲೆಡೆ ಸುದ್ದಿಯಲ್ಲಿತ್ತು. ಇಲ್ಲಿಂದ ಸಾಫ್ಟ್ ಆಗಿ ಕಾಣುವ ಚಂದಿರ ಅಲ್ಲಿಗೆ ಹೋದರೆ ಮಣ್ಣು-ಕಲ್ಲುಗಳ ಆಗರ. ವಿಕ್ರಮ್‌ಲ್ಯಾಂಡರ್ ಂಡರ್ ಲ್ಯಾಂಡ್ ಆಗುವುದರ ಹಿಂದಿನ ಸೂಕ್ಷ್ಮತೆ ನಮಗೆಲ್ಲಾ ಗೊತ್ತಾಗಿತ್ತು. ಚಂದಿರನ ಮೇಲೆ ಆಗಾಗ ಚಂದ್ರಕಂಪನಗಳು (ಭೂಕಂಪನಗಳ ರೀತಿ) ನಡೆಯುತ್ತಲೇ ಇರುತ್ತವೆ ಜೊತೆಗೆ ಆ ಜಾಗದ ಗುರುತ್ವಾಕರ್ಷಣೆಗೆ ಅನುಗುಣವಾಗಿ ಲ್ಯಾಂಡರ್‌ನ್ನು ಇಳಿಸುವುದು ಹರಸಾಹಸದ ಕೆಲಸ ಮಾತ್ರವಲ್ಲ ಸೂಕ್ಷ್ಮವಾದ ತಂತ್ರಜ್ಞಾನ ಅದಕ್ಕಾಗಿ ಇದನ್ನು ಸಾಫ್ಟ್‌ಲ್ಯಾಂಡಿಂಗ್ ಎಂದು ಕರೆದರು.
ಕಳೆದ ವರ್ಷ ಆಗಸ್ಟ್ 23.08.2023ರಂದು ಭಾರತೀಯರು ಸೇರಿದಂತೆ ಇಡೀ ವಿಶ್ವವು ಭಾರತದ ಬಾಹ್ಯಾಕಾಶ ಸಾಧನೆಯನ್ನು ಉತ್ಸುಕತೆಯಿಂದ ಕಾದು ನೋಡಿತು. ಆ ದಿನ ನಮ್ಮ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಬೆಂಗಳೂರಿನ ವಿಜ್ಞಾನಿಗಳು ಚಂದ್ರಯಾನರ ಲ್ಯಾಂಡರ್ ಮತ್ತು ರೋವರ್ ಅನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸುವ ಮೂಲಕ ನಮ್ಮ ದೇಶ ಒಂದು ದೊಡ್ಡ ಸಾಧನೆಗೆ ಸಾಕ್ಷಿಯಾಯಿತು. ಚಂದ್ರಯಾನ 3 ಮಿಷನ್‌ನ ಈ ಯಶಸ್ಸನ್ನು ಗೌರವಿಸಲು ಆಗಸ್ಟ್ 23ನ್ನು ಭಾರತ ಸರ್ಕಾರವು ” ರಾಷ್ಟ್ರೀಯ ಬಾಹ್ಯಾಕಾಶ ದಿನ” ಎಂದು ಘೋಷಿಸಿದೆ. ಸರ್ಭಾರತೀಯ ಬಾಹ್ಯಾಕಾಶ ಕಾರ್ಯಾಚಾರಣೆಗಳ ಗಮನಾರ್ಹ ಸಾಧನೆಯನ್ನು ಜನರಿಗೆ ತಿಳಿಸುವುದು, ಯುವಜನತೆಯಲ್ಲಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಶಿಕ್ಷಣದತ್ತ ಇನ್ನಷ್ಟು ಸೆಳೆಯುವುದಲ್ಲದೆ ಸಂಶೋಧನೆಯ ಕಡೆ ವಾಲಿಸುವ ಉದ್ದೇಶವಿದೆ. ಈ ಬಾರಿಯ “ರಾಷ್ಟ್ರೀಯ ಬಾಹ್ಯಾಕಾಶ ದಿನ”ದ ಘೋಷವಾಖ್ಯ “ಚಂದ್ರನನ್ನು ಸ್ಪರ್ಶಿಸುವಾಗ ಜೀವನವನ್ನು ಸ್ಪರ್ಶಿಸುವುದು: ಭಾರತದ ಬಾಹ್ಯಾಕಾಶ ಸಾಗಾ” ಇದು ಮಹತ್ತರವಾದ ಮಾತು, ನೀವು ಮತ್ತೊಬ್ಬರ ಜೀವನವನ್ನು ಎಷ್ಟು ಆಳವಾಗಿ ಸ್ಪರ್ಶಿಸುತ್ತೀರಿ ಎಂದರೆ ನಿಮ್ಮ ಜೀವನವು ಅಷ್ಟು ಶ್ರೀಮಂತವಾಗಿದೆ ಎಂದು ಅರ್ಥ ಜೊತೆಗೆ ಅವರ ಮೇಲೆ ನಿಮ್ಮ ಪ್ರಭಾವದ ಘಾಡತೆ ತಿಳಿದುಬರುತ್ತದೆ. ಅದೇ ರೀತಿ ಚಂದ್ರನನ್ನು ನಮ್ಮ ಭಾರತ ಸ್ಪರ್ಶಿಸಿದ ಕ್ಷಣ ಈ ಸಾಧನೆಯಲ್ಲಿ ನಾವೆಷ್ಟು ಶ್ರೀಮಂತರು ಅನ್ನುವುದು ತಿಳಿದು ಬರುತ್ತದೆ. ಮಾತ್ರವಲ್ಲ ಇದು ಚಂದ್ರನ ಮೇಲೆ ನಾವು ಬೀರುವ ಪ್ರಭಾವವನ್ನು ಪ್ರತಿಪಾದಿಸುತ್ತದೆ. ಒಟ್ಟಾರೆಯಾಗಿ ಚಂದ್ರನು ನಮ್ಮಲ್ಲಿ ಒಳಗೊಳ್ಳುವಿಕೆಯನ್ನು ಸೂಚಿಸುತ್ತದೆ, ಇದರಿಂದ ನಾವು ಚಂದಿರನಿಂದ ಏನನ್ನಾದರೂ ಪಡೆಯ ಬಹುದು, ನಾವು ಚಂದಿರನಿಗೆ ಏನಾದರೂ ಕೊಡಬಹುದು-ಇದು ನಮ್ಮ ದೇಶದ ಬಾಹ್ಯಾಕಾಶದ ಸಾಗಾ ಎಂದರೆ ವಿಜಯ ಅಥವಾ ವೀರ ಚರಿತೆ.ಈ ಸಾಧನೆ ನಮ್ಮ ಸಾಮಾಜಿಕ ಮತ್ತು ತಂತ್ರಜ್ಞಾನದ ಸಾಧನೆಯ ಹೆಗ್ಗಳಿಕೆಯನ್ನು ತೋರಿಸುತ್ತದೆ. ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಿ ಪ್ರಜ್ಞಾನ್ ರೋವರ್‌ನನ್ನು ಸಾಫ್ಟ್ ಆಗಿ ಇಳಿಸಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಕರೆದರು.
ರಾಷ್ಟ್ರೀಯ ಬಾಹ್ಯಾಕಾಶ ದಿನವು ಬಾಹ್ಯಾಕಾಶ ಸಂಶೋಧನೆಯಲ್ಲಿ ನಾವು ಮಾಡಿದ ಸಾಧನೆಯನ್ನು ಸಾರುತ್ತದೆ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ನಮ್ಮ ಪ್ರಗತಿಯನ್ನು ಎತ್ತಿ ತೋರಿಸುತ್ತದೆ ಮುಂದುವರೆದು ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿಯನ್ನು ಹುಟ್ಟು ಹಾಕುವುದರ ಮುಖೇನ ಅವರಿಗೆ ಮಾದರಿಗಳನ್ನು ಒದಗಿಸುವ ಮೂಲಕ ಭವಿಷ್ಯ ಪೀಳಿಗೆಯನ್ನು ಪ್ರೇರೇಪಿಸಲು ಈ ದಿನವನ್ನು ಸಮರ್ಪಿಸಲಾಗಿದೆ. ಈ ಆಚರಣೆಯ ಮೂಲಕ ಪ್ರತೀ ವರ್ಷ ಬಾಹ್ಯಾಕಾಶ ಅಧ್ಯಯನ ಮತ್ತು ಸಂಶೋಧನೆಯ ಪ್ರಾಮುಖ್ಯತೆ ಮತ್ತು ಪ್ರಯೋಜನೆಗಳ ಬಗ್ಗೆ ಜಾಗೃತಿಯನ್ನು ಜನರಲ್ಲಿ ಮೂಡಿಸುವುದಾಗಿದೆ.ವಿಶೇಷವಾಗಿ ಮೊದಲ ವಾರ್ಷಿಕ ಆಚರಣೆಯಾದ ಇದೇ ಆಗಸ್ಟ್ ತಿಂಗಳಲ್ಲಿ ಹಲವು ಮುಖ್ಯವಾದ ಕಾರ್ಯಕ್ರಮಗಳನ್ನು ಒಂದು ತಿಂಗಳ ಕಾಲ ಮಾಡಲು ಸರ್ಕಾರ ಆಯೋಜಿಸಿದೆ. ಕೆಲವು ಕಾರ್ಯಕ್ರಗಳ ವಿವರ ಹೀಗಿವೆ.
1.ಆಗಸ್ಟ್ 22ರಂದು : ಮೊದಲ ದಿನದ ಈ ಕಾರ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶದ ಕಾರ್ಯಕ್ರಮದ ಸಮಗ್ರ ಅವಲೋಕನ, ಆಕರ್ಷಕ ಪ್ರದರ್ಶನಗಳು, ಗಮನಾರ್ಹ ವರದಿಗಳ ಬಿಡುಗಡೆ. ನಂತರ ಸಚಿವಾಲಯದವರು. ಉದ್ಯಮಿಗಳು, ಸ್ಟಾರ್ಟ್ ಅಪ್‌ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಒಟ್ಟುಗೂಡಿಸಿಬಾಹ್ಯಾಕಾಶ ಜ್ಞಾನ ಮತ್ತು ಅಪ್ಲಿಕೇಶನ್‌ಗಳ ಪ್ರಯೋಜನಗಳು ಅವು ಸಮಾಜದ ಮೇಲೆ ಬೀರುವ ಪ್ರಭಾವಗಳ ಬಗ್ಗೆ ವಿಜ್ಞಾನಿಗಳ ಜೊತೆ ಚರ್ಚಿಸುತ್ತಾರೆ.
2.ಆಗಸ್ಟ್ 23ರಂದು: ರಾಷ್ಟ್ರೀಯ ಬಾಹ್ಯಾಕಾಶ ದಿನವಾದ ಇಂದು ಸರ್ಕಾರವು ಪ್ರಮುಖ ಘೋಷಣೆಗಳನ್ನು ಮಾಡಬಹುದು ಮತ್ತು ಚಂದ್ರಯಾನ-4 ಜೊತೆಗೆ ಇತರೆ ಹೊಸ ಯೋಜನೆಗಳ ಮಾದರಿಗಳ
ಅನಾವರಣವಿರುತ್ತದೆಂದು ವರದಿಯಾಗಿದೆ. ಇದಲ್ಲದೆ ಆಗಸ್ಟ್ ಆರಂಭಿಕ ದಿನಗಳಲ್ಲಿ ಕೆಲವು
ಕಾರ್ಯಕ್ರಮಗಳನ್ನು ಪ್ಲಾನ್ ಮಾಡಿದೆ.
ಸೈನ್ಸ್ ಆನ್ ವೀಲ್-ವೈಜ್ಞಾನಿಕ ಪ್ರಗತಿಗಾಗಿ ಇಸ್ರೋದ ದೃಷ್ಟಿಯನ್ನು ಪ್ರದರ್ಶಿಸುವುದು: ಇಸ್ರೋದ ಸಾಧನೆ, ಕೃತಕ ಉಪಗ್ರಹಗಳು, ರಾಕೇಟ್‌ಗಳ ವಿನ್ಯಾಸ ಉಪಯೋಗಗಳು ತಿಳಿಸುತ್ತಾ, ಬಾಹ್ಯಾಕಾಶದ ವಿಜ್ಞಾನ ಮತ್ತು ತಂತ್ರಜ್ಞಾನದ ಪರಿಚಯ ಮಾಡಲು ಭಾರತದ ಎಲ್ಲಾ ರಾಜ್ಯಗಳಲ್ಲಿ ಆಗಸ್ಟ್ 24ರಂದು ವಿಶ್ವವಿದ್ಯಾಲಯ, ಕಾಲೇಜು, ಶಾಲೆಗಳಲ್ಲಿ ಈ ಕುರಿತಾದ ಪ್ರದರ್ಶನ ನೀಡುವ ಬಸ್‌ಗಳು ಸಂಚರಿಸಲಿವೆ.
ಇಸ್ರೋದ ಬಾಹ್ಯಾಕಾಶ ಬೋಧಕರು: ಬಾಹ್ಯಾಕಾಶ ಯೋಜನೆಗಳ ಮಹತ್ವ ಜನರಿಗೆ ವಿದ್ಯಾರ್ಥಿಗಳಿಗೆ
ತಿಳಿಸಬೇಕಿದೆ. ಅದಕ್ಕಾಗಿ ಬಾಹ್ಯಾಕಾಶ ಶಿಕ್ಷಣವನ್ನು ಉತ್ತೇಜಿಸುವುದು, ಬಾಹ್ಯಾಕಾಶ ಚಟುವಟಿಕೆಗಳು ಮತ್ತು ಅಪ್ಲಿಕೇಶನ್‌ಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶದಾದ್ಯಾಂತ ಉಪನ್ಯಾಸಗಳು, ಮಾತುಕತೆ, ರಸಪ್ರಶ್ನೆಗಳು ಮತ್ತು ಪ್ರದರ್ಶನಗಳಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ವಿಸ್ಮಯ, ವೈಜ್ಞಾನಿಕ ಕುತೂಹಲ, ಮತ್ತು ಚಿಂತನೆಯನ್ನು ಹೆಚ್ಚಿಸಲು ಇಸ್ರೋದಲ್ಲಿ ನೋದಾಯಿಸಲಾದ ಶಿಕ್ಷಣ ತಜ್ಞರು ಮತ್ತು ವಿಜ್ಞಾನಿಗಳು ಈ ಕೆಲಸ ಮಾಡುತ್ತಾರೆ.
ಭಾರತೀಯ ಅಂತರಿಕ್ಷ ಹ್ಯಾಕಥಾನ್: ಇಸ್ರೋ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ 2024ರ ರಾಷ್ಟ್ರೀಯ
ಮಟ್ಟದ ಹ್ಯಾಕಥಾನ್ ಆಯೋಜಿದೆ. ಈ ಹ್ಯಾಕಥಾನ್‌ನಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳ ಹೇಳಿಕೆಗಳನ್ನು ನೀಡಿ ಅದಕ್ಕೆ ಅವರಿಂದ ಸೃಜನಶೀಲ ಪರಿಹಾರಗಳನ್ನು ಪಡೆಯುವುದು, ಅಂತಿಮವಾಗಿ ವಿಜೇತ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ನೀಡಲಾಗುತ್ತದೆ.ಹ್ಯಾಕ್‌ಥಾನ್ ಎಂಬ ಪದದ ಅರ್ಥದಂತೆ ಆಸಕ್ತ ಜನರು ಮತ್ತು ಕಂಪ್ಯೂಟರ್ ಪ್ರೋಗ್ರಾಮರ್‌ಗಳು ಒಟ್ಟಿಗೆ ಸೇರಿ ಸಾಫ್ಟ್‌ವೇರ್ ಇನ್ನೂ ಸುಧಾರಿಸುವುದು ಅಥವಾ ಹೊಸ ಸಾಫ್ಟ್‌ವೇರ್ ಪ್ರೋಗ್ರಮ್‌ನ್ನು ನಿರ್ಮಿಸುವುದು.
ಇಸ್ರೋ ರೋಬೊಟಿಕ್ ಚಾಲೆಂಜ್: ಬಾಹ್ಯಾಕಾಶ ಸಂಶೋಧನೆಯಲ್ಲಿ ರೋಬೋಟಿಕ್ಸ್ ಮತ್ತು ಅದರ
ಅನ್ವಯಗಳ ಮಹತ್ವವನ್ನು ವಿದ್ಯಾರ್ಥಿ ಸಮುದಾಯಗಳಿಗೆ ತಿಳಿಸುವುದು. ಮಾತ್ರವಲ್ಲ ಈ ಕ್ಷೇತ್ರದಲ್ಲಿ ಅವರ ಚಿಂತನೆಗಳು, ಆಳವಾದ ತಿಳುವಳಿಕೆಯನ್ನು ಅವರಲ್ಲಿ ಮೂಡಿಸಲು ಸಂವಹನ, ಸಂಯೋಗ, ವಿಚಾರಣೆ, ಸಮಸ್ಯೆ ಪರಿಹಾರದಂತಹ ಚಟುವಟಿಕೆಗಳ ಮೂಲಕ ಇಸ್ರೋ ಜೊತೆ ಸೇರಿ ಅವರಲ್ಲಿ ರೋಬೋಟಿಕ್ಸ್ ತಂತ್ರಜ್ಞಾನದ ಕಡೆ ಒಲವು ಮೂಡಿಸುವುದು. ಈಗಾಗಲೇ ನೋಂದಾಯಿತ ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಆಗಸ್ಟ್ 5 ಮತ್ತು 6ರಂದು ಸ್ಪರ್ಧೆ ಏರ್ಪಡಿಸಲು ಯೋಜಿಸಲಾಗಿದೆ.
ಈ ವಿಶೇಷ ದಿನ ಅಂದರೆ 2024ರ ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಭಿಯಾನವು ಬಾಹ್ಯಾಕಾಶದಲ್ಲಿ ಭಾರತ ಮಾಡಿದ ಸಾಧನೆಗಳನ್ನು ಸ್ಮರಿಸುವುದಷ್ಟೇ ಅಲ್ಲ, ಒಂದು ಹೆಜ್ಜೆ ಮುಂದು ಹೋಗಿ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳನ್ನು ನಕ್ಷತ್ರಗಳನ್ನು ತಲುಪುವಂತೆ ಪ್ರೇರೇಪಿಸುವ ಗುರಿ ಹೊಂದಿದೆ ಎಂದು ಬಾಹ್ಯಾಕಾಶ ಇಲಾಖೆ ಅಭಿಪ್ರಾಯ ಪಡುತ್ತಿದೆ.
ಡಾ.ಯು.ಶ್ರೀನಿವಾಸ ಮೂರ್ತಿ
ಉಪನ್ಯಾಸಕರು
“ವಿಚಾರ ಕುಟೀರ” ರಾಮನಗರ 1ನೇ ಕ್ರಾಸ್, ಅವಂಬಾವಿ
20-583101
:7975983624 2 9731063950