Ad image

ನಾಡಿನ ಚರಿತ್ರೆಯ ಅರಿವು ನಮ್ಮಲ್ಲಿ ಅಭಿಮಾನ ಮೂಡಿಸುತ್ತದೆ; ಹಿಂದಿನ ಹೊರಾಟದ ಕಿಚ್ಚು ಮುಂದಿನ ದಾರಿಗೆ ಬೆಳಕಾಗುತ್ತದೆ; ಬನ್ನಿ ನಮ್ಮ ಐತಿಹಾಸಿಕತೆ ಸ್ಮರಿಸಿ, ಸಂರಕ್ಷಿಸೋಣ: ಜಿಲ್ಲಾಧಿಕಾರಿ ದಿವ್ಯ ಪ್ರಭು

Vijayanagara Vani
ನಾಡಿನ ಚರಿತ್ರೆಯ ಅರಿವು ನಮ್ಮಲ್ಲಿ ಅಭಿಮಾನ ಮೂಡಿಸುತ್ತದೆ; ಹಿಂದಿನ ಹೊರಾಟದ ಕಿಚ್ಚು ಮುಂದಿನ ದಾರಿಗೆ ಬೆಳಕಾಗುತ್ತದೆ; ಬನ್ನಿ ನಮ್ಮ ಐತಿಹಾಸಿಕತೆ ಸ್ಮರಿಸಿ, ಸಂರಕ್ಷಿಸೋಣ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ ನಮ್ಮ ನಾಡಿನ ಇತಿಹಾಸ, ಅರಿವು ನಮ್ಮಲ್ಲಿ ಛಲ, ಅಭಿಮಾನ, ಹೆಮ್ಮೆ ಮೂಡಿಸುತ್ತದೆ. ಹಿಂದಿನ ಹೋರಾಟಗಳ ಕಿಚ್ಚು ನಮ್ಮ ಮುಂದಿನ ದಾರಿಗೆ ಬೆಳಕಾಗುತ್ತದೆ. ಬನ್ನಿ ಎಲ್ಲರೂ ಸೇರಿ ನಮ್ಮ ಐತಿಹಾಸಿಕತೆಯನ್ನು ಸ್ಮರಿಸಿ, ಸಂರಕ್ಷಿಸೋಣ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ವಾಯ್. ಬಿ. ಅಣ್ಣಿಗೇರಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಇತಿಹಾಸ ಉಪನ್ಯಾಸಕರ ಸಂಘ ಹಾಗೂ ಅಣ್ಣಿಗೇರಿ ಸೇವಾ ಟ್ರಸ್ಟ್ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಅಖಂಡ ಧಾರವಾಡ ಜಿಲ್ಲೆಯ 77 ಸ್ವಾತಂತ್ರ್ಯ ಹೋರಾಟಗಾರರ ಕುರಿತು 77 ಉಪನ್ಯಾಸ ಮಾಲಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಗಿದೆ. ಸ್ವಾತಂತ್ರ್ಯದ 77 ವರ್ಷಗಳನ್ನು 77 ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಸ್ಮರಿಸಲಾಗಿದೆ. ಈ ಉಪನ್ಯಾಸ ಮಾಲಿಕೆಯಲ್ಲಿ ಜಿಲ್ಲೆಯ 26 ಸರಕಾರಿ, 24 ಅನುದಾನಿತ ಮತ್ತು 27 ಅನುದಾನರಹಿತ ಪದವಿಪೂರ್ವ ಮಹಾವಿದ್ಯಾಲಯಗಳು ಭಾಗವಹಿಸಿದ್ದವು.
ಸುಮಾರು 46 ಜನ ಇತಿಹಾಸ ಉಪನ್ಯಾಸಕರು, ಪ್ರಾಧ್ಯಾಪಕರು, 15 ಜನ ಸಂಶೋಧಕರು ಹಾಗೂ 18 ಜನ ಹಿರಿಯ ಇತಿಹಾಸತಜ್ಞರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು, ಹೋರಾಟಗಳು ಮತ್ತು ಹೋರಾಟದ ಪ್ರೇರಕ ವ್ಯಕ್ತಿಗಳ ಕುರಿತು ಉಪನ್ಯಾಸ ನೀಡಿದ್ದಾರೆ. ಅಂದಾಜು 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು 20 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಈ ಉಪನ್ಯಾಸಗಳ ಪ್ರಯೋಜನ ಪಡೆದಿದ್ದಾರೆ. ಉಪನ್ಯಾಸ ಮಾಲಿಕೆಯಲ್ಲಿ ಜಾನಪದ ಕಲಾ ತಂಡಗಳು ಭಾಗವಹಿಸಿ ಲಾವಣಿ, ಗೀಗೀ ಪದ, ಜಾನಪದ ಹಾಡುಗಳ ಮೂಲಕ ಸ್ವಾತಂತ್ರ್ಯದ ಹಿನ್ನಲೆಯನ್ನು, ಹಿರಿಯರ ತ್ಯಾಗ ಬಲಿದಾನಗಳನ್ನು ಕಥೆಯಂತೆ ಕಟ್ಟಿಕೊಟ್ಟಿದ್ದು, ಮಕ್ಕಳ ಮನ ಪರಿವರ್ತನೆಗೆ, ಅವರಲ್ಲಿ ರಾಷ್ಟ್ರಾಭಿಮಾನ ಮೂಡಿಸಲು ಸಹಾಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ದೇಶದ ಪ್ರಗತಿಯಾಗಬೇಕಾದರೆ ಮಕ್ಕಳಲ್ಲಿ ದೇಶಾಭಿಮಾನ ಹಾಗೂ ದೇಶದ ಭವ್ಯ ಭವಿಷ್ಯ ಉಜ್ವಲಿಸಲೆಬೇಕು. ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಗೈದ ಇತಿಹಾಸದ ರಾಷ್ಟ್ರ ನಾಯಕರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಒಂದು ದೇಶದ ಬೆಳವಣಿಗೆಗೆ ಅದರ ಹಿಂದಿನ ಇತಿಹಾಸವೇ ಕಾರಣವಾಗಿರುತ್ತದೆ. ಇಂತಹ ಇತಿಹಾಸದಲ್ಲಿ ಎಷ್ಟು ಜನ ಹೋರಾಟಗಾರರು ತಮ್ಮ ಪ್ರಾಣಬಲಿದಾನವನ್ನು ನೀಡಿದ್ದಾರೆ ಎಂಬುವುದನ್ನು ಸಾರ್ವಜನಿಕರು ಅರ್ಥೈಸಿಕೊಳ್ಳಬೇಕು. ಇಂದಿನ ಪೀಳಿಗೆ ನಮ್ಮ ದೇಶದ ಸಮಗ್ರ ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಇತಹಾಸದ ಬಗ್ಗೆ ಪ್ರತಿಯೊಬ್ಬ ಧಾರವಾಡಿಗನೂ ತಿಳಿದುಕೊಳ್ಳಬೇಕು. ದೇಶದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇತಿಹಾಸ ಉಪನ್ಯಾಸಕ ಸಂಘದ ಅಧ್ಯಕ್ಷ ಉದಯ ನಾಯಕ ಅವರು ಮಾತನಾಡಿ, ವಿದ್ಯಾರ್ಥಿಗಳು ಓದನ್ನು ತಮ್ಮ ಬದುಕಾಗಿ ಬದಲಿಸಿಕೊಳ್ಳಬೇಕು. ತಮ್ಮ ವಿದ್ಯಾರ್ಥಿ ಜೀವನವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ವಿದ್ಯಾರ್ಥಿಗಳಿಗೆ ಇದು ಮುಖ್ಯ ಘಟ್ಟವಾಗಿದೆ. ಇಂದಿನ ಮಕ್ಕಳು ವ್ಯಕ್ತಿಗಳ ದೇಶದ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ಬ್ರಿಟಿಷರು ತಮ್ಮ ಅಧಿಕಾರದ ಸಂದರ್ಭದಲ್ಲಿ ಭಾರತದ ನಾಗರಿಕರನ್ನು ಗುಲಾಮರನ್ನಾಗಿ ನಡೆಸಿಕೊಂಡ ರೀತಿ ಅತ್ಯಂತ ಕಠಿಣವಾಗಿತ್ತು. ಆದರೆ ಅದೇ ಸಮಯದಲ್ಲಿ ಗಾಂಧಿಜಿಯವರ ಉಪವಾಸ, ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ದಂತಹ ಚಳುವಳಿಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು ಎಂದು ಅವರು ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ಪಿ. ಸುರೇಶ ಅವರು ಶೈಕ್ಷಣಿಕ ಸುಧಾರಣೆಯ ಕುರಿತು ಮಾತನಾಡಿದರು. ಇತಿಹಾಸ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಪ್ರಕಾಶ ಸುಣಗಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಾಧ್ಯಕ್ಷ . ಬಸವರಾಜ ಉಡಿಕೇರಿ ಅವರು ಸ್ವಾಗತಿಸಿ, ಅತಿಥಿ ಪರಿಚಯ ಮಾಡಿದರು. ಪ್ರಾಚಾರ್ಯರಾದ ಮಹಾಬಳೇಶ್ವರಯ್ಯಾ ಸಿ.ಕೆಂಭಾವಿಮಠ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ರಾಮು ಮೂಲಗಿ, ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ ಹಾಗೂ ತಂಡದವರಿಂದ, ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. ಕುಮಾರಿ ಸೃಷ್ಠಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. . ಮಲ್ಲಿಕಾರ್ಜುನ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು.
ಅತಿಥಿಗಳಾಗಿ ಉಪನ್ಯಾಸ ಮಾಲಿಕೆಯ ಜಿಲ್ಲಾ ನೋಡಲ್ ಅಶೋಕ ಸವಣೂರ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಅಣ್ಣಿಗೇರಿ ಸೇವಾ ಟ್ರಸ್ಟ್ನ ಅಧ್ಯಕ್ಷ . ನಾಗೇಶ ಅಣ್ಣಿಗೇರಿ, ಅಣ್ಣಿಗೇರಿ ಸೇವಾ ಟ್ರಸ್ಟ್ನ ಕಾರ್ಯದರ್ಶಿ ರೇಖಾ ಎನ್. ಅಣ್ಣಿಗೇರಿ ಹಾಗೂ ಉಪ ಪ್ರಾಚಾರ್ಯ ಸಚಿನ್ ಕಮತೆ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.
ವಾಯ್. ಬಿ. ಅಣ್ಣಿಗೇರಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು, ಧಾರವಾಡ ಜಿಲ್ಲಾ ಇತಿಹಾಸ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು
Share This Article
error: Content is protected !!
";