ಚಿತ್ರದುರ್ಗಆಗಸ್ಟ್15:
ಸರ್ಕಾರವು ಜನರ ಸರ್ವತೋಮುಖ ಏಳಿಗೆಗಾಗಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ನಿರಾತಂಕವಾಗಿ ಸಾಗುತ್ತಿದ್ದು, ಮುಂದೆಯೂ ಯಾವುದೇ ಅಡ್ಡಿಯಿಲ್ಲದೆ ಸಾಗುವ ಭರವಸೆಯನ್ನು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಡಿ.ಸುಧಾಕರ್ ನೀಡಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಅವರು, ಗೌರವ ರಕ್ಷೆ ಸ್ವೀಕರಿಸಿ ನಂತರ ತಮ್ಮ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 4.50 ಲಕ್ಷ, ಗೃಹಜ್ಯೋತಿ ಯೋಜನೆಯಡಿ 3.71 ಲಕ್ಷ, ಗೃಹಲಕ್ಷ್ಮೀ ಯೋಜನೆಯಡಿ 3.81 ಲಕ್ಷ, ಯುವನಿಧಿ ಯೋಜನೆಯಡಿ 4726 ಹಾಗೂ ಶಕ್ತಿ ಯೋಜನೆಯಡಿ 2.60 ಕೋಟಿ ಮಹಿಳೆಯರು ಸದುಪಯೋಗ ಪಡೆದುಕೊಂಡಿದ್ದಾರೆ. ಇಡೀ ದೇಶದಲ್ಲಿಯೇ ಮೊದಲು ಜಾರಿಗೆ ತಂದಿರುವ ಈ ಐದು ಗ್ಯಾರಂಟಿ ಯೋಜನೆಗಳು ಬಡವರನ್ನು, ಕೆಳವರ್ಗದ ಜನರನ್ನು, ಮಹಿಳೆಯರನ್ನು ಸಬಲೀಕರಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಯಶಸ್ವಿಯಾಗುತ್ತಿವೆ. ಬಡತನವ ಬುಡಮಟ್ಟ ಕೀಳ ಬನ್ನಿ ಎಂದು ರಾಷ್ಟ್ರಕವಿ ಕುವೆಂಪುರವರು ಕರೆಕೊಟ್ಟಂತೆ ಬಡತನ ನಿರ್ಮೂಲನೆಗಾಗಿ, ಯುವಕರಿಗೆ ಉದ್ಯೋಗ ನೀಡುವುದಕ್ಕಾಗಿ ಮತ್ತು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಕ್ಕಾಗಿ ಈ ಯೋಜನೆಗಳನ್ನು ಜಾರಿಗೊಳಿಸಲಾಗಿರುತ್ತದೆ. ನುಡಿದಂತೆ ನಡೆದ ನಮ್ಮ ಸರ್ಕಾರ” ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
ಮಹಾತ್ವಾಕಾಂಕ್ಷೆ ಭದ್ರಾ ಮೇಲ್ದಂಡೆ ಯೋಜನೆಯು ಸಾಕಾರಗೊಳ್ಳುವ ದಿನಗಳು ಸಮೀಪಿಸುತ್ತಿವೆ. ಭದ್ರಾ ಮೇಲ್ದಂಡೆ ಯೋಜನೆಯ ತಾಂತ್ರಿಕ ತೊಡಕಾಗಿದ್ದ ಅಬ್ಬಿನಹೊಳಲು ಸ್ಥಳ ಸಮಸ್ಯೆಯನ್ನು ಜಲಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಪಡಿಸಿದ್ದಾರೆ. ಬಾಕಿ ಕಾಮಗಾರಿ ಪ್ರಾರಂಭಗೊಳಿಸಲಾಗಿದ್ದು, ತೀವ್ರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕಾಮಗಾರಿ ವೇಗ ಹೆಚ್ಚಿಸಲು ಸಾಧ್ಯವಾಗದ ಕಾರಣ, ಮುಂದಿನ ಮುಂಗಾರು ಅವಧಿ ಮುಕ್ತಾಯಗೊಳ್ಳುವುದರೊಳಗೆ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲೆಯ ಜೀವನಾಡಿಯಾಗಿರುವ ವಾಣಿವಿಲಾಸ ಸಾಗರ ಜಲಾಶಯಕ್ಕೆ ಪ್ರಸ್ತುತ ಭದ್ರಾ ಜಲಾಶಯದಿಂದ ಪ್ರತಿ ನಿತ್ಯ 700 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಎತ್ತಿನಹೊಳೆ ಮುಖ್ಯ ಕಾಲುವೆ 32.50 ಕಿ.ಮೀದಲ್ಲಿ ಬೇಲೂರು ತಾಲ್ಲೂಕಿನ ಹೊಲಬಗೆರೆ ಗ್ರಾಮದ ಬಳಿಯ ಎಸ್ಕೆಪ್ ಮುಖಾಂತರ ಬೆಟ್ಟದ ಆಲೂರು ಹಳೇಬೀಡು ಕೆರೆ ಬೆಳವಾಡಿ ಕೆರೆ-ಮುಖಾಂತರ ವೇದಾವತಿ ನದಿಗೆ ಹರಿಸಿ ಅಲ್ಲಿಂದ ವಾಣಿವಿಲಾಸ ಸಾಗರ ಜಲಾಶಯ ತುಂಬಿಸುವ ಪ್ರಸ್ತಾವನೆ ಇದ್ದು, ಇದಲ್ಲದೇ ಲಿಂಗನಮಕ್ಕಿ ಜಲಾಶಯದಿಂದ ವಿದ್ಯುತ್ ಉತ್ಪಾದನೆ ನಂತರ ಸಮುದ್ರಕ್ಕೆ ಹರಿದು ಹೋಗುವ ಸುಮಾರು 40 ಟಿ.ಎಂ.ಸಿ. ನೀರನ್ನು ಬಳಸಿಕೊಂಡು ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಸರ್ಕಾರ ಮುಂದಾಗಿದೆ. ಈ ಯೋಜನೆಯಲ್ಲಿಯೂ ಸಹ ವಾಣಿವಿಲಾಸ ಸಾಗರ ಜಲಾಶಯದಲ್ಲಿ ನೀರು ಶೇಖರಿಸಿ ನಂತರ ಬೆಂಗಳೂರಿಗೆ ನೀರೊಯ್ಯುವ ಪ್ರಸ್ತಾವನೆಯ ಸರ್ವೇ ಕಾರ್ಯ ಪ್ರಾರಂಭಿಸಲಾಗಿದೆ. ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯವು ಭರ್ತಿಯಾಗುವ ಎಲ್ಲಾ ಅವಕಾಶಗಳು ದಟ್ಟವಾಗಿದ್ದು, ಇದರಿಂದ ನಮ್ಮ ರೈತರ ಮೊಗದಲ್ಲಿ ಮಂದಹಾಸ ಮೂಡುವುದಲ್ಲದೇ ಮತ್ತು ಜಿಲ್ಲೆಯಲ್ಲಿನ ಅಂತರ್ಜಲ ಮಟ್ಟ ಹೆಚ್ಚಳವಾಗವುದು ಬಹುತೇಕ ನಿಶ್ಚಿತವಾಗಿದೆ ಎಂದು ಸಚಿವ ಡಿ.ಸುಧಾಕರ್ ಆಶ್ವಾಸನೆ ವ್ಯಕ್ತಪಡಿಸಿದರು.
ಬೆಳೆ ಸಮೀಕ್ಷೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಪೂರ್ವ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1,30,694 ರೈತರ ತಾಕುಗಳ ಪೈಕಿ 1,28,375 ತಾಕುಗಳ ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. 2023 ರ ಮುಂಗಾರು ಹಂಗಾಮಿನಲ್ಲಿ 81501 ರೈತರು ರೂ.284.22 ಕೋಟಿ ಬೆಳೆ ವಿಮೆ ಪಡೆದಿರುತ್ತಾರೆ. ಮತ್ತು 2024 ರ ಮುಂಗಾರು ಹಂಗಾಮಿನಲ್ಲಿ 1,12,101 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದು, ಜಿಲ್ಲೆಯು ರಾಜ್ಯದಲ್ಲಿ 8ನೇ ಸ್ಥಾನದಲ್ಲಿರುತ್ತದೆ. 2023 ರ ಮುಂಗಾರು ಹಂಗಾಮಿನಲ್ಲಿ 1,44,166 ರೈತರಿಗೆ ರೂ. 125.75 ಕೋಟಿಗಳನ್ನು ಪಾರದರ್ಶಕವಾಗಿ ಫ್ರೂಟ್ಸ್, ಪರಿಹಾರ್ ತಂತ್ರಾಂಶಗಳ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಿರುವುದು ನಮ್ಮ ಸರ್ಕಾರದ ಹೆಮ್ಮೆಯಾಗಿರುತ್ತದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ರಾಜ್ಯ ಸರ್ಕಾರವು ಅಭಿವೃದ್ಧಿಗೆ ಬದ್ಧವಾಗಿದ್ದು ರಾಜ್ಯದ ಸಮಗ್ರ ಅಭಿವೃದ್ಧಿ, ಅದರಲ್ಲೂ ಗ್ರಾಮೀಣ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಇತ್ತೀಚಿಗೆ ವಿದ್ಯಾರ್ಥಿ ವೇತನ ಘೋಷಿಸಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನರ ಮಾಶಾಸನ ನೀಡುತ್ತಿರುವುದಲ್ಲದೇ, ಮಾತೃಪೂರ್ಣ ಯೋಜನೆ, ಪೆÇೀಷಣ್ ಅಭಿಯಾನ ಯೋಜನೆ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಸ್ತ್ರೀಶಕ್ತಿ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಸ್ವಾಧಾರ ಶಕ್ತಿಸದನ ಯೋಜನೆ, ಸಾಂತ್ವಾನ ಯೋಜನೆಗಳ ಮುಖಾಂತರ ಮಹಿಳೆಯರು, ಆರ್ಥಿಕ ದುರ್ಬಲರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗೆ ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿ ಕೃಷಿ, ನೀರಾವರಿ, ಶಿಕ್ಷಣ, ಸಾರಿಗೆ-ಸಂಪರ್ಕ, ವಿಜ್ಞಾನ-ತಂತ್ರಜ್ಞಾನ, ಕೈಗಾರಿಕೆ, ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪ ಸಂಖ್ಯಾತರು, ಮಹಿಳೆಯರು, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಗೋವಿಂದ ಎಂ.ಕಾರಜೋಳ ಘನ ಉಪಸ್ಥಿತಿ ವಹಿಸಿದ್ದರು. ಆದಿಜಾಂಬವ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೆಲೀಸ್ ವರಿಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು