ಚಿತ್ರದುರ್ಗ
ಹಿರಿಯ ನಾಗರೀಕರನ್ನು ಗೌರವಯುತವಾಗಿ ಕಾಣುವುದು ಹಾಗೂ ಅವರಿಗೆ ಚಿಕಿತ್ಸೆ ಕೊಡಿಸುವುದು ನಮ್ಮ ಜವಾಬ್ದಾರಿ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಡಾ.ಚಂದ್ರಕಾಂತ ನಾಗಸಮುದ್ರ ಹೇಳಿದರು.
ಚಿತ್ರದುರ್ಗ ತಾಲ್ಲೂಕು ಡಿ.ಮದಕರಿಪುರ ಗ್ರಾಮದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಾನ್ ಮೈನ್ಸ್ ಸಹಯೋಗದೊಂದಿಗೆ ರಾಷ್ಟ್ರೀಯ ಆಯುಷ್ ಅಭಿಯಾನ, ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಹಿರಿಯ ನಾಗರೀಕರ ದಿನದ ಅಂಗವಾಗಿ ಹಿರಿಯ ನಾಗರೀಕರಿಗೆ ಉಚಿತ ಆಯುಷ್ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
ಯೋಗ ದಿನಾಚರಣೆಯಲ್ಲಿ ಜಾನ್ ಮೈನ್ಸ್ ನೀಡಿದ ಸಹಕಾರ ಸ್ಮರಿಸಿದ ಅವರು, ಸ್ಥಳೀಯವಾಗಿ ಹೆಚ್ಚಿನ ಆಯುಷ್ ಶಿಬಿರಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಜಾನ್ ಮೈನ್ಸ್ ವ್ಯವಸ್ಥಾಪಕ ಎನ್.ರಣದೀಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಯುರ್ವೇದವು ಉತ್ಕೃಷ್ಟ ಚಿಕಿತ್ಸಾ ಪದ್ಧತಿಯಾಗಿದ್ದು, ನಮ್ಮ ಜಾನ್ ಮೈನ್ಸ್ ಜಾಗದಲ್ಲಿ ಇನ್ನೂ ಹೆಚ್ಚು ಹೆಚ್ಚು ಆಯುಷ್ ಶಿಬಿರಗಳನ್ನು ಆಯೋಜಿಸುವಂತೆ ಕೋರಿದರು.
ಅತಿಥಿಗಳಾಗಿ ಭಾಗವಹಿಸಿದ ಸುಭಾಷ್ ಮಾತನಾಡಿ, ಆಯುರ್ವೇದವು ನಮ್ಮ ಭಾರತೀಯ ಪದ್ದತಿಯಾಗಿದ್ದು, ದೀರ್ಘಕಾಲೀನ ಆರೋಗ್ಯ ಬಯಸುವವರು ಆಯುರ್ವೇದ ಚಿಕಿತ್ಸೆ ಪಡೆಯಬೇಕು ಎಂದು ಕರೆ ನೀಡಿದರು.
ವೈದ್ಯಾಧಿಕಾರಿ ಡಾ.ನಾರದಮುನಿ ಮಾತನಾಡಿ, ಆಯುಷ್ ಆರೋಗ್ಯ ಮಂದಿರಗಳಲ್ಲಿ ಚಿಕಿತ್ಸೆಯೊಂದಿಗೆ ಪಥ್ಯ, ಆಹಾರ ಜೀವನಶೈಲಿಯನ್ನು ತಿಳಿ ಹೇಳಲಾಗುವುದು. ಹಿರಿಯ ನಾಗರೀಕರ ಅನುಭವ ನಮ್ಮ ಜೀವನ ಸುಗಮವಾಗಲು ಸಹಕಾರಿ. ಎಲ್ಲರೂ ಈ ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಕೋರಿದರು.
ಆಯುಷ್ ವೈದ್ಯಾಧಿಕಾರಿ ಡಾ.ಟಿ.ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಾ.ವಿದ್ಯಾ ಎ ಗುನ್ನಗೋಳ ಅವರು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ.ಪ್ರಾಶಾಂತ್, ಡಾ.ರೇಷ್ಮಾ ಅಲ್ಲಿಸಾಹೇಬ ಮಸೂತಿ, ಯೋಗ ತರಬೇತುದಾರರಾದ ತಿಪ್ಪೇಸ್ವಾಮಿ, ರೂಪಾ ಹಾಗೂ ಆಯುಷ್ ಇಲಾಖೆ ಹಾಗೂ ಜಾನ್ ಮೈನ್ಸ್ ಸಿಬ್ಬಂದಿಯವರು ಹಾಜರಿದ್ದರು.