ಗಣೇಶ ಚತುರ್ಥಿ ಪಿ.ಓ.ಪಿ ವಿಗ್ರಹಗಳ ನಿಷೇಧ ಹಾಗೂ ರಾಸಾಯನಿಕ ವಿಗ್ರಹಗಳಿಂದ ಜಲಮಾಲಿನ್ಯ ತಪ್ಪಿಸಲು ಅಧಿಕಾರಿಗಳ ತಂಡ ನೇಮಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ

Vijayanagara Vani
ಗಣೇಶ ಚತುರ್ಥಿ  ಪಿ.ಓ.ಪಿ ವಿಗ್ರಹಗಳ ನಿಷೇಧ ಹಾಗೂ ರಾಸಾಯನಿಕ ವಿಗ್ರಹಗಳಿಂದ ಜಲಮಾಲಿನ್ಯ ತಪ್ಪಿಸಲು ಅಧಿಕಾರಿಗಳ ತಂಡ ನೇಮಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ

ಧಾರವಾಡ ಆಗಸ್ಟ್.22 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಮಾಲಿನ್ಯ (ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಪ್ರಕಾರ ಕಲಂ 33(ಅ) ರಲ್ಲಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ, ಜಿಲ್ಲೆಯ ಕೆರೆ, ನದಿ, ಕಾಲುವೆ, ಬಾವಿ ಹಾಗೂ ಇತರೆ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಪ್ ಪ್ಯಾರಿಸ್‍ನಿಂದ ಮಾಡಿರುವ ಹಾಗೂ ರಾಸಾಯನಿಕ, ಕೃತಕ ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಮತ್ತು ಈ ಕುರಿತು ನಿರಂತರ ತಪಾಸಣೆ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅವಳಿ ನಗರದ ವಾರ್ಡ ಮಟ್ಟದಲ್ಲಿ ಹಾಗೂ ಎಲ್ಲ ತಾಲೂಕು ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ, ತಾಲೂಕು ಆಡಳಿತಗಳು ಮತ್ತು ಮಹಾನಗರ ಪಾಲಿಕೆಯಿಂದ ಆರಂಭಿಸಿರುವ ಸಹಾಯವಾಣಿಗಳಿಗೆ, ಸಾರ್ವಜನಿಕರು ಪಿ.ಓ.ಪಿ ವಿಗ್ರಹಗಳನ್ನು ತಯಾರಿಸುವವರ, ಮಾರಾಟಗಾರರ ವಿವರಗಳನ್ನು ತಿಳಿಸಬಹುದು. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಾಹಿತಿದಾರರು, ಜಿಲ್ಲಾಧಿಕಾರಿಗಳ ಕಛೇರಿ : 0836-244754, ಹು.ಧಾ.ಮ.ನ.ಪಾಲಿಕೆ ಕಛೇರಿ: 9141051611,ಪೋಲಿಸ್  ಕಮೀಷನರ್ ಕಛೇರಿ : 0836-2222603 ಮತ್ತು 9480802002 ಗೆ ಸಂಪರ್ಕಿಸಬಹುದು.

ಮಹಾನಗರದಲ್ಲಿ ವಾರ್ಡ್ ಮಟ್ಟದ ಕಾರ್ಯಪಡೆ: ಅವಳಿ ನಗರದಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ವಲಯ ಸಹಾಯಕ ಆಯುಕ್ತರು, ತಹಶೀಲ್ದಾರರು ಅಥವಾ ಕಂದಾಯ ಇಲಾಖೆ ಅಧಿಕಾರಿ, ಸಹಾಯಕ ಪೋಲಿಸ್ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಪರಿಸರ ಅಭಿಯಂತರರು, ಆರೋಗ್ಯ ನೀರಿಕ್ಷಕರು ಇರುವ ಕಾರ್ಯಪಡೆ ಇರುತ್ತದೆ.

ತಾಲೂಕು ಮಟ್ಟದ ಕಾರ್ಯಪಡೆ: ತಾಲೂಕು ಮಟ್ಟದ ಕಾರ್ಯಪಡೆಯಲ್ಲಿ ತಹಶಿಲ್ದಾರರು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ಮುಖ್ಯಾಧಿಕಾರಿಗಳು, ಸರ್ಕಲ್ ಇನಸ್ಪೆಕ್ಟರ್, ಹೆಸ್ಕಾಂ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿದ್ದು, ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ತಪಾಸಣೆ ನಡೆಸುತ್ತಾರೆ.

ಕಾರ್ಯಪಡೆಗಳು ಪ್ರತಿದಿನ ತಮ್ಮ ವ್ಯಾಪ್ತಿಯಲ್ಲಿ ತಪಾಸಣೆ ಮಾಡಿ, ವಿವರಗಳನ್ನು ಸಲ್ಲಿಸಬೇಕು. ನ್ಯೂನತೆಗಳು ಕಂಡುಬಂದಲ್ಲಿ ಪಿ.ಓ.ಪಿ ವಿಗ್ರಹಗಳನ್ನು ಸೀಜ್ (ಮುಟ್ಟುಗೋಲು) ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಅವರು ತಿಳಿಸಿದ್ದಾರೆ.

ನಿಷೇಧಿತ ಪಿ.ಓ.ಪಿ ಗಣೇಶ ಮೂರ್ತಿಗಳಿರುವ ಬಗ್ಗೆ ಮಾಹಿತಿ, ದೂರು ಸ್ವೀಕೃತವಾದರೆ, ಪ್ರತಿದಿನ ಅಧಿಕಾರಿಗಳು ಗಸ್ತು ತಿರುಗಿ ಕ್ರಮಕೈಗೊಳ್ಳಬೇಕು. ತಮ್ಮ ವ್ಯಾಪ್ತಿಗೆ ಒಳಪಡುವ ಗಣೇಶನ ತಯಾರಕರು, ಮಾರಾಟಗಾರರ ಸ್ಥಳಗಳಿಗೆ ಅನೀರಿಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿ, ಅದರ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪಿ.ಓ.ಪಿ ಮೂರ್ತಿಗಳು ಖಚಿತಪಟ್ಟಲ್ಲಿ ನಿಯಮಾನುಸಾರ ಕ್ರಮ ಜರುಗಿಸಬೇಕು. ಹಾಗೂ ಈ ಪ್ರಕ್ರಿಯೆಯಲ್ಲಿ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಧಾರವಾಡದ ಪ್ರಯೋಗ ಶಾಲೆಯ ಸಹಾಯಕ ವೈಜ್ಞಾನಿಕ ಅಧಿಕಾರಿ ಲಲಿತಾ ದೊಡವಾಡ ಅವರನ್ನು ವಿಗ್ರಹಗಳ ವಿಶ್ಲೇಷಣೆಗಾಗಿ ನೇಮಿಸಲಾಗಿದೆ.

ವಿಗ್ರಹ ತಯಾರಕರು ಮತ್ತು ಮಾರಾಟಗಾರರು ಕಡ್ಡಾಯವಾಗಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿಗಳಿಂದ ಪೂರಕ ದಾಖಲೆಗಳನ್ನು ಪ್ರಮಾಣಪತ್ರದೊಂದಿಗೆ ಸಲ್ಲಿಸಿ ಅನುಮತಿ ಪತ್ರವನ್ನು ಪಡೆದುಕೊಳ್ಳಬೇಕು. ಬಾಡಿಗೆ ಜಾಗವಿದ್ದಲ್ಲಿ ಮಾಲಿಕರಿಂದ ಪಡೆದ ಬಾಡಿಗೆ ಪತ್ರವನ್ನು ಸಲ್ಲಿಸತಕ್ಕದ್ದು. ಉಲ್ಲಂಘನೆಗಳು ಕಂಡು ಬಂದಲ್ಲಿ ಜಾಗೆಯ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!