ದಾವಣಗೆರೆ, ಆ.26 ;ದಾವಣಗೆರೆ ನಗರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ರೂ.4 ಕೋಟಿ ಅನುದಾನದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ ಮಾಡಲಾಗುತ್ತಿದ್ದು ಪೂರ್ಣಗೊಳಿಸಲು ಅನುದಾನದ ಕೊರತೆಯಾಗಿದೆ. ರಂಗಮಂದಿರ ಪೂರ್ಣಗೊಳಿಸಲು ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಇಲಾಖೆಯಲ್ಲಿನ ಅನುದಾನ ಬಳಕೆ ಮಾಡಿಕೊಳ್ಳಲು ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸಲು ತೋಟಗಾರಿಕೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ; ಶಮ್ಲಾ ಇಕ್ಬಾಲ್ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2013 ರಲ್ಲಿ ರೂ.4.34 ಕೋಟಿ ಅನುದಾನದಲ್ಲಿ ಜಿಲ್ಲಾ ರಂಗಮಂದಿರದ ನಿರ್ಮಾಣ ಆರಂಭವಾಗಿದ್ದು ಅನುದಾನದ ಕೊರತೆಯಿಂದ ಪೂರ್ಣವಾಗಿರುವುದಿಲ್ಲ, ಈಗ ಹೆಚ್ಚುವರಿಯಾಗಿ ರೂ.4 ಕೋಟಿಯಷ್ಟು ಅನುದಾನ ಅವಶ್ಯಕತೆ ಇದೆ. ಈ ರಂಗಮಂದಿರ ನಿರ್ಮಾಣವಾದಲ್ಲಿ ದಾವಣಗೆರೆ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ. ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಉಳಿತಾಯವಾದ ಅನುದಾನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಉಳಿದಿರುವ ಅನುದಾನ ಬಳಕೆ ಮಾಡಿಕೊಂಡು ಅಪೂರ್ಣವಾಗಿರುವ ರಂಗಮಂದಿರವನ್ನು ನಿರ್ಮಾಣ ಮಾಡಬಹುದಾಗಿದ್ದು ಇದಕ್ಕೆ ಸರ್ಕಾರದ ಅನುಮತಿ ಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉಸ್ತುವಾರಿ ಕಾರ್ಯದರ್ಶಿಯವರು ವಿವರವಾದ ಪ್ರಸ್ತಾವನೆಯನ್ನು ವರದಿಯೊಂದಿಗೆ ನೀಡಲು ತಿಳಿಸಿದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 366536 ಮಹಿಳೆಯರು ನೊಂದಾಯಿಸಿದ್ದು ಇದರಲ್ಲಿ ಜೂನ್ನಲ್ಲಿ 358289 ಮಹಿಳೆಯರಿಗೆ ಸಹಾಯಧನ ಪಾವತಿಸಲಾಗಿದೆ. ಜಿಎಸ್ಟಿ ಹಾಗೂ ಇತರೆ ತಾಂತ್ರಿಕ ಸಮಸ್ಯೆಯಿಂದ ಗೃಹಲಕ್ಷ್ಮಿ ಹಣ ಪಾವತಿಯಾಗದಿದ್ದಲ್ಲಿ ಸರಿಪಡಿಸಲು ಸೂಚನೆ ನೀಡಿ ಜಿಲ್ಲೆಯಲ್ಲಿ ಗ್ರಾಮಾಂತರ 1771 ಹಾಗೂ 391 ನಗರ, ಪಟ್ಟಣದಲ್ಲಿ ಅಂಗನವಾಡಿ ಕೇಂದ್ರಗಳಿದ್ದು ಈ ಎಲ್ಲಾ ಕೇಂದ್ರಗಳಲ್ಲಿ ಶೌಚಾಲಯಗಳ ವ್ಯವಸ್ಥೆ ಇರುವಂತೆ ನೋಡಿಕೊಂಡು ಖಾಸಗಿ ಬಾಡಿಗೆ ಕಟ್ಟಡವಾಗಿದ್ದರೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಕೊಳ್ಳಲು ಸೂಚನೆ ನೀಡಿ ಅಧಿಕ ಮಳೆಯಿಂದ ಹಾನಿಯಾಗಿರುವ ಕಟ್ಟಡಗಳ ದುರಸ್ಥಿಗೆ ಛಾಯಾಚಿತ್ರಗಳೊಂದಿಗೆ ವರದಿಯನ್ನು ನೀಡಲು ತಿಳಿಸಿ ದಾವಣಗೆರೆ ನಗರದಲ್ಲಿ ಕರ್ತವ್ಯ ನಿರತ ಮಹಿಳಾ ವಸತಿ ನಿಲಯದ ಅವಶ್ಯಕತೆ ಇದ್ದು ಈ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಕೃಷಿ, ತೋಟಗಾರಿಕೆ; ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್ 21 ರ ವರೆಗೆ 363 ಮಿಮೀ ವಾಡಿಕೆಗೆ 566 ಮಿ.ಮೀ ಮಳೆಯಾಗಿದ್ದು ಕೃಷಿ ಚಟುವಟಿಕೆಗಳು ಉತ್ತಮವಾಗಿವೆ. ಈ ಮುಂಗಾರು ಹಂಗಾಮಿನಲ್ಲಿ 2.46 ಲಕ್ಷ ಹೆ. ಬಿತ್ತನೆ ಗುರಿಯಲ್ಲಿ ಇಲ್ಲಿಯವರೆಗೆ 2.42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು ವಾರದಲ್ಲಿ ಭತ್ತಾ ನಾಟಿ ಮುಕ್ತಾಯವಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ವಿವರ ನೀಡಿದರು. ಅಧಿಕ ಮಳೆಯಿಂದ 730 ಹೆ.ಕೃಷಿ ಬೆಳೆಗಳ ಹಾಗೂ 68 ಎಕರೆ ತೋಟಗಾರಿಕೆ ಬೆಳೆಗೆ ನಷ್ಟವಾಗಿದ್ದು ಪರಿಹಾರ ನೀಡಲು ಸರ್ಕಾರಕ್ಕೆ ಜಂಟಿ ವರದಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಶಿಕ್ಷಣ ಸುಧಾರಣಾ ಕ್ರಮ; ಜಿಲ್ಲೆಯಲ್ಲಿನ ಶೈಕ್ಷಣಿಕ ಮಟ್ಟ ಹೆಚ್ಚಿಸಲು ತೆಗೆದುಕೊಂಡಿರುವ ಕ್ರಮದ ಬಗ್ಗೆ ಚರ್ಚಿಸಿದ್ದು ಶಿಕ್ಷಣ ಸುಧಾರಣೆಗಾಗಿ ಮೊದಲ ಹಂತದಲ್ಲಿ 8-10 ನೇ ತರಗತಿವರೆಗೆ ಎ,ಬಿ.ಸಿ ಎಂದು ವರ್ಗ ಮಾಡಿಕೊಂಡು ಡಯಟ್ ಮೂಲಕ ವಿಶೇಷ ಶಿಕ್ಷಕರ ಮೂಲಕ ಮಕ್ಕಳಲ್ಲಿನ ಕಲಿಕೆಯ ಹಿಂದುಳಿವಿಕೆ ಗುರಿತಿಸಿ ಬೋಧನಾ ಕ್ರಮ ಕೈಗೊಳ್ಳಲಾಗುತ್ತಿದೆ. ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸಮಗ್ರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾದ ಬೋಧನಾ ಕ್ರಮ ಅನುಸರಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ರವರು ಮಕ್ಕಳ ಸ್ಕೋರಿಂಗ್ ಮತ್ತು ಪಾಸಿಂಗ್ ಪ್ಯಾಕೇಜ್ ಅನ್ವಯ ಪ್ರಶ್ನೋತ್ತರಗಳನ್ನು ಸಿದ್ದಪಡಿಸಿ ಮಕ್ಕಳಿಗೆ ಕಲಿಸಲಾಗುತ್ತದೆ ಎಂದು ತಿಳಿಸಿ ಶಾಲೆಯಲ್ಲಿನ ಕೊಠಡಿಗಳ ಸಮಸ್ಯೆ ನಿವಾರಿಸಲು ವಿವೇಕ ಯೋಜನೆ, ವಿಶೇಷ ಅನುದಾನ, ದುರಸ್ಥಿ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಕಾಲ; ಸಕಾಲದಲ್ಲಿ ಜುಲೈ ತಿಂಗಳಲ್ಲಿ 73549 ಅರ್ಜಿಗಳು ಸ್ವೀಕೃತವಾಗಿದ್ದು 69116 ಅರ್ಜಿಗಳ ಇತ್ಯರ್ಥ ಮಾಡಲಾಗಿದೆ. ಮತ್ತು 4171 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸಕಾಲದಲ್ಲಿ ಅರ್ಜಿಗಳನ್ನು ಇತ್ಯರ್ಥ ಮಾಡಿದ್ದು ಗ್ರಾಮ ಪಂಚಾಯಿತಿಗಳಲ್ಲಿ ಮೋಜಿಣಿ ಅರ್ಜಿಗಳು ಮಾತ್ರ ಬಾಕಿ ಇದ್ದು ಸರ್ವೆ ಇಲಾಖೆಯಿಂದ ಇತ್ಯರ್ಥವಾಗಬೇಕಿದೆ. ಕೆಲವು ಅರ್ಜಿಗಳು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಂಬಂಧಿಸಿದ್ದು ಜಿಲ್ಲಾ ಹಂತದಲ್ಲಿ ಇತ್ಯರ್ಥವಾಗಿದ್ದರೂ ಪೋರ್ಟಲ್ನಲ್ಲಿ ಬಾಕಿ ಇರುತ್ತವೆ. ಕೆಲವು ಅರ್ಜಿಗಳು ಕೇಂದ್ರ ಕಚೇರಿ ಹಂತದಲ್ಲಿ ವಿಲೇ ಮಾಡಬೇಕಾಗಿದೆ.
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ಗಳನ್ನು ನಡೆಸಲಾಗುತ್ತಿದ್ದು ನಿರ್ವಹಣೆ ಉತ್ತಮವಾಗಿದೆ. ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯದ ಅಗತ್ಯವಿದ್ದು ಹಂತ ಹಂತವಾಗಿ ನಿವೇಶನ ಪಡೆದು ಕಟ್ಟಡ ನಿರ್ಮಾಣ ಮಾಡಲು ತಿಳಿಸಿ ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಪ್ರಸ್ತಾವನೆಗಳಿದ್ದಲ್ಲಿ ವಿವರ ನೀಡಲು ತಿಳಿಸಿದರು. ಗ್ರಾಮೀಣ ಕುಡಿಯುವ ನೀರು ಜೆಜೆಎಂ ಪ್ರಗತಿ, ರಸ್ತೆಗಳ ನಿರ್ಮಾಣ, ವಸತಿ ಯೋಜನೆ, ಪಡಿತರ ಕಾರ್ಡ್ ನೀಡಿಕೆಯ ಪ್ರಗತಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.